KWIN City: ಕ್ವಿನ್ ಸಿಟಿಗೆ ನಮ್ಮ ಮೆಟ್ರೋ ಸಂಪರ್ಕ, ಯಾವ ಮಾರ್ಗ
ಬೆಂಗಳೂರು, ಮಾರ್ಚ್ 06: ಕರ್ನಾಟಕ ಸರ್ಕಾರ ತುಮಕೂರು ನಗರಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹೆಜ್ಜೆ ಇಟ್ಟಿದೆ. ಈ ಮೆಟ್ರೋ ಯೋಜನೆಯನ್ನು ರಾಜ್ಯ ಸರ್ಕಾರದ ಮಹತ್ವದ ಕ್ವಿನ್ ಸಿಟಿಗೆ ಸಂಪರ್ಕ ಕಲ್ಪಿಸುವಂತೆ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ರಾಜ್ಯ ಸರ್ಕಾರ ಕ್ವಿನ್ ಸಿಟಿ ಯೋಜನೆಗೆ ಚಾಲನೆಯನ್ನು ನೀಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಮೂಲ ಸೌಕರ್ಯ ಸಚಿವ ಎಂ. ಬಿ. ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. ಕ್ವಿನ್ ಸಿಟಿಯ ನಿರ್ಮಾಣ ದೊಡ್ಡಬಳ್ಳಾಪುರ ಬಳಿ ಆಗುತ್ತಿದೆ. ತುಮಕೂರಿನ ಮೆಟ್ರೋ ಮಾರ್ಗ ಕ್ವಿನ್ ಸಿಟಿ ಮೂಲಕ ಹಾದು ಹೋಗಬೇಕು ಎಂದು ಸಚಿವರು ಹೇಳಿದ್ದಾರೆ.

ಬಿಎಂಆರ್‌ಸಿಎಲ್ ಬೆಂಗಳೂರು ಮೆಟ್ರೋ ಯೋಜನೆಯನ್ನು ತುಮಕೂರಿಗೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಸದ್ಯ ಹಸಿರು ಮಾರ್ಗದ ಮೆಟ್ರೋ ರೈಲು ಬಿಐಇಸಿ (ಮಾದಾವರ) ತನಕವಿದೆ. ಇದನ್ನು 52.4 ಕಿ. ಮೀ. ವಿಸ್ತರಣೆ ಮಾಡಿದರೆ ತುಮಕೂರಿಗೆ ಮೆಟ್ರೋ ಸಂಪರ್ಕ ಸಿಗಲಿದೆ.
ಕ್ವಿನ್ ಸಿಟಿಗೆ ಮೆಟ್ರೋ ಸಂಪರ್ಕ: ಸಚಿವ ಎಂ. ಬಿ. ಪಾಟೀಲ, "ಉದ್ದೇಶಿತ ಮೆಟ್ರೋ ಮಾರ್ಗವು ಡಾಬಸ್‌ಪೇಟೆ ಸಮೀಪ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಗೊಳ್ಳುತ್ತಿರುವ ಕ್ವಿನ್ ಸಿಟಿಯ ಮೂಲಕ ಹಾದುಹೋದರೆ, ಜಾಗತಿಕ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಇತರ ಕೈಗಾರಿಕೆಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ" ಎಂದು ಹೇಳಿದ್ದಾರೆ.
"ಈ ನಮ್ಮ ಮೆಟ್ರೋ ಯೋಜನೆ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗಳು ನೆಲಮಂಗಲ ಮತ್ತು ಸುತ್ತಲಿನ ಪ್ರದೇಶಗಳ ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ" ಎಂದು ಸಚಿವರು ತಿಳಿಸಿದ್ದಾರೆ.
ಸಚಿವ ಎಂ. ಬಿ. ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದು, ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗ, ಎಸ್‌ಟಿಟಿಆರ್ ರಸ್ತೆ ಯೋಜನೆ ಕ್ವಿನ್ ಸಿಟಿ ಮೂಲಕ ಹಾದು ಹೋಗುವಂತೆ ವಿನ್ಯಾಸಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಹಲವಾರು ತಜ್ಞರು ಈಗಾಗಲೇ ನಮ್ಮ ಮೆಟ್ರೋ ಯೋಜನೆ ಬೆಂಗಳೂರು ನಗರವನ್ನು ಸಂಪರ್ಕಿಸುವಂತೆ ಇರಬೇಕು. ಸಬ್ ಅರ್ಬನ್ ರೈಲು ಯೋಜನೆಯನ್ನು ಬೇಕಾದರೆ ಬೆಂಗಳೂರು ಸುತ್ತಮುತ್ತಲಿನ ನಗರಗಳಿಗೆ ವಿಸ್ತರಣೆ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ತುಮಕೂರು ಬೆಂಗಳೂರು ಪಕ್ಕದ ಜಿಲ್ಲೆಯಾಗಿದ್ದು, ಭವಿಷ್ಯದಲ್ಲಿ ಸಬ್ ಅರ್ಬನ್ ರೈಲು ಯೋಜನೆ ತುಮಕೂರು ಸಂಪರ್ಕಿಸಲಿದೆ.
ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಕಾರಿಡಾರ್ ಮಲ್ಲಿಗೆ ಬೆನ್ನಿಗಾನಹಳ್ಳಿ-ಚಿಕ್ಕಬಣಾವರ (25 ಕಿ. ಮೀ.) ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಕಾರಿಡಾರ್ ಅನ್ನು ಡಾಬಸ್‌ಪೇಟೆ ಮೂಲಕ ತುಮಕೂರಿಗೆ (55 ಕಿ. ಮೀ.) ವಿಸ್ತರಣೆ ಮಾಡಿದರೆ ಎರಡು ನಗರದ ನಡುವಿನ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂಬ ಬೇಡಿಕೆಯೂ ಇದೆ.
ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿ ನಿರ್ಮಾಣವಾಗುತ್ತಿದೆ. ಬೆಂಗಳೂರು ನಗರದಿಂದ 50 ಕಿ. ಮೀ. ತ್ತು ಕೆಂಪೇಗೌಡ ವಿಮಾನ ನಿಲ್ದಾಣದಿಂದ 45 ನಿಮಿಷ ಸಂಚಾರ ನಡೆಸಿದರೆ ಕ್ವಿನ್ ಸಿಟಿ ಸಿಗುತ್ತದೆ.












Click it and Unblock the Notifications