Namma Metro Feeder Bus: ಕ್ಯೂ ಆರ್ ಕೋಡ್ ಬಿಡುಗಡೆ: ಪ್ರಯಾಣಿಕರು ಬಸ್‌ಗಳ ಮಾಹಿತಿಗೆ ಇಲ್ಲಿ ಸ್ಕ್ಯಾನ್ ಮಾಡಿ, ಮಾಹಿತಿ
ಬೆಂಗಳೂರು, ಫೆಬ್ರವರಿ 23: ಬೆಂಗಳೂರಿನ ಸಾರಿಗೆ ವಲಯದಲ್ಲಿ ಆಗಾಗ ಸುಧಾರಣೆ, ತಂತ್ರಜ್ಞಾನ ಅಳವಡಿಕೆ ಆಗುತ್ತಿರುತ್ತವೆ. ಇದೀಗ ನಮ್ಮ ಮಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ (Namma Metro Feeder Bus) ಒದಗಿಸುತ್ತಿರುವ ಬಿಎಂಟಿಸಿ, ಮೆಟ್ರೊ ಪ್ರಯಾಣಿಕರಿಗಾಗಿ 'ಕ್ಯೂ ಆರ್ ಕೋಡ್' (QR Code) ಅನ್ನು ಪರಿಚಯಿಸಿದೆ. ಹಾಗಾದರೆ ಇದರ ಪ್ರಯೋಜನ, ಬಳಕೆ, ವಿಧಾನ ತಿಳಿಯಿರಿ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮೆಟ್ರೋ ಪ್ರಯಾಣಿಕರಿಗೆ ಫೀಡರ್ ಬಸ್‌ಗಳ ಸಂಪೂರ್ಣ ಮಾಹಿತಿ ಒದಗಿಸಲು ವಿವಿಧ ವೈಶಿಷ್ಟ್ಯಗಳನ್ನು 'ಕ್ಯೂ ಆರ್ ಕೋಡ್ ಆಧಾರಿತ 'ನಮ್ಮ ಬಿಎಂಟಿಸಿ ಮೊಬೈಲ್ ಆಯಪ್' ಅನ್ನು ಬಿಡುಗಡೆ ಮಾಡಿದೆ. ಮೆಟ್ರೋ ಬಳಸುವ ಪ್ರಯಾಣಿಕರು ಇಲ್ಲಿನ ಕೋಡ್ 'ಸ್ಕ್ಯಾನ್' ಮಾಡಿ ಬಿಎಂಟಿಸಿ ಮೆಟ್ರೋ ಫೀಡರ್ ಬಸ್‌ಗಳ ಸಂಚಾರ, ಪ್ರಸಕ್ತ ಸಮಯದಲ್ಲಿ ಎಲ್ಲಿವೆ ಎಂಬೆಲ್ಲ ಪೂರ್ತಿ ಮಾಹಿತಿಯನ್ನು ಅಂಗೈನಲ್ಲೇ ತಿಳಿದುಕೊಳ್ಳಬಹುದು.

ಬಸ್ ಆಗಮನ-ನಿರ್ಗಮನ, ಸಂಚಾರ ಮಾಹಿತಿ
ಬೆಂಗಳೂರಿನಲ್ಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗದಲ್ಲಿ 73 ಕಿಲೋ ಮೀಟರ್ ನಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಿಸಿದೆ. ಇವೆರಡು ಮಾರ್ಗದಲ್ಲಿ ಒಟ್ಟು 65 ಮೆಟ್ರೋ ನಿಲ್ದಾಣಗಳು ಇವೆ. ಅದರಲ್ಲಿ 46 ನಿಲ್ದಾಣಗಳಿಗೆ ಬಿಎಂಟಿಸಿಯು ಮೆಟ್ರೋ ಫಿಡರ್ ಬಸ್ ಸೇವೆ ನೀಡುತ್ತಿದೆ.
ಬಿಎಂಟಿಸಿಯ ಫಿಡರ್ ಬಸ್‌ಗಳನ್ನು ನಿತ್ಯ 01 ಲಕ್ಷ ಜನರು ಬಳಕೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ಜನರು ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಇಲ್ಲವೇ ನಿಲ್ದಾಣದಿಂದ ತಮ್ಮ ಗಮ್ಯ ಸ್ಥಾನಕ್ಕೆ ತಲುಪಲು ಈ ಬಸ್ ಬಳಸುತ್ತಾರೆ. ಆದರೆ ಅವರಿಗೆ ಬಸ್ ಯಾವಾಗ ಹೊರಡುತ್ತದೆ. ಯಾವಾಗ ನಿಲ್ದಾಣಕ್ಕೆ ಬರುತ್ತದೆ ಎಂಬ ಮಾಹಿತಿ ಇರುವುದಿಲ್ಲ.

ಬಸ್ ಸಮಯದ ಮಾಹಿತಿ ಮೊದಲೇ ಲಭ್ಯ
ಹೀಗಾಗಿ ಪರಿಚಯಿಸಲಾದ ಈ 'ನಮ್ಮ ಬಿಎಂಟಿಸಿ ಆಪ್'ನ ಕ್ಯೂ ಆರ್ ಕೋಡ್ ಅನ್ನು ನೀವು ಸ್ಕ್ಯಾನ್ ಮಾಡಿದೆ ಫೀಡರ್ ಬಸ್ ಎಲ್ಲಿದೆ, ಯಾವ ಸ್ಥಳದಿಂದ ಎಲ್ಲಿಗೆ ಹೊರಡುತ್ತದೆ ಎಂಬೆಲ್ಲ ಮಾಹಿತಿ ಮೊಬೈಲ್‌ನಲ್ಲಿಯೇ ತಿಳಿದುಕೊಳ್ಳಬಹುದು. ಇದು ಮೆಟ್ರೋ ಪ್ರಯಾಣಿಕರಿಗೆ ಮನೆಯಿಂದ ಹೊರಡುವಾಗ ಮೊದಲೇ ಬಸ್ ಬಗ್ಗೆ ತಿಳಿದು ಕೊಳ್ಳಲು ಸಹಾಯ ಮಾಡುತ್ತದೆ. ನಿರ್ಗಮನ ಸಮಯ ಮತ್ತು ಆಗಮನ ವಿವರ ನೋಡಿ ಮನೆಯಿಂದ ಹೊರಡಬಹುದಾಗಿದೆ.
ಪ್ರಯಾಣಿಕರ ಸಮಯ ಉಳಿತಾಯ
ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಬಂದು ನಿಂತು ಬಸ್ ಗಾಗಿ ಕಾಯುವ ಪರಿಸ್ಥಿತಿ ಇತ್ತು. ಕೆಲವೊಮ್ಮೆ ಗಂಟೆಗಟ್ಟಲೆ ಕಾಯ್ದ ಉದಾಹರಣೆಗಳು ಇವೆ. ಇದರಿಂದಾಗಿ ಅವರ ಗಮ್ಯ ಸ್ಥಾನದ ಕೆಲಸ ಕಾರ್ಯಗಳು ವಿಳಂಗೊಳ್ಳುತ್ತಿದ್ದವು. ಇತ್ತ ಆಟೋ ಅನುಸರಿಸಿದರೆ ಅವರು ಕೇಳಿದಷ್ಟು ಹಣ ಕೊಡಬೇಕು. ಇದೆಲ್ಲ ತಲೆ ಬಿಸಿಗೆ ಮುಕ್ತಿ ನೀಡಿರುವ ಬಿಎಂಟಿಸಿ ಮೊಬೈಲ್‌ನಲ್ಲಿಯೇ ಮೆಟ್ರೋ ಫಿಡರ್ ಬಸ್ ಸೇವೆ ಮಾಹಿತಿ ಒದಗಿಸುತ್ತಿದೆ.
ನಗರದಲ್ಲಿ ರಾತ್ರಿ 11 ಗಂಟೆವರೆಗೆ ಮೆಟ್ರೋ ಸೇವೆ ಲಭ್ಯ ಇದೆ. ಕೆಲವೊಮ್ಮೆ ಈ ಫೀಡರ್ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಈ ವೇಳೆ ಬಸ್ಸುಗಳನ್ನು ಓಡಿಸುವುದು ನಷ್ಟವಾಗುತ್ತದೆ. ಈ ಸಂಬಂಧ ತಡರಾತ್ರಿವರೆಗೆ ಸೇವೆ ನೀಡಬೇಕೋ ಬೇಡವೊ, ರಾತ್ರಿ ಕಾರ್ಯಾಚರಣೆ ಬಗ್ಗೆ ಬಿಎಂಟಿಸಿ ಅಧಿಕಾರಿಗಳು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಇದಕ್ಕಾಗಿ ಆರ್ಥಿಕ ನೆರವು ನೀಡಲು ಮನವಿ ಮಾಡಲಾಗಿದೆ ಎಂದು ಬಿಎಂಟಿಸಿ ಮೂಲಗಳು ಮಾಹಿತಿ ನೀಡಿವೆ.
ಮುಂದಿನ ದಿನಗಳಲ್ಲಿ ಬಿಎಂಟಿಸಿ ವಿವಿಧ ವ್ಯವಸ್ಥೆಯಡಿ ಕ್ಯೂಆರ್ ಕೋಡ್ ರೂಪಿಸಲು ಚಿಂತನೆ ನಡೆಸಿದೆ.












Click it and Unblock the Notifications