Namma metro: ಹೊಸ ಮಾರ್ಗ ನೋಡಿ ಖುಷಿ ಪಡಬೇಡಿ, ಈ ಸಮಸ್ಯೆ ಎದುರಿಸಲು ಸಿದ್ಧರಾಗಿ..!
ಬೆಂಗಳೂರು, ಅಕ್ಟೋಬರ್ 14: ರಾಜ್ಯ ರಾಜಧಾನಿ ಬೆಂಗಳೂರು ಬೆಳೆಯುತ್ತಿರುವ ನಗರ. ಅದಕ್ಕೆ ತಕ್ಕಂತೆ ಸಂಚಾರ ದಟ್ಟಣೆಯು ಹೆಚ್ಚುತ್ತಿದೆ. ಇದರ ನಡುವೆ ಜನರಿಗೆ ಅನುಕೂಲ ಒದಗಿಸಲೆಂದೇ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಲಿ ಮಾರ್ಗಗಳನ್ನು ವಿಸ್ತರಣೆ ಮಾಡುತ್ತಿದೆ. ಹೊಸ ಮಾರ್ಗಗಳನ್ನು ನಿರ್ಮಾಣದಲ್ಲಿ ತೊಡಗಿದೆ. ಮುಂದಿನ ದಿನಗಳಲ್ಲಿ ಹೊಸ ಮಾರ್ಗ ಮತ್ತು ವಿಸ್ತರಣೆ ಮಾರ್ಗದಲ್ಲಿ ರೈಲುಗಳು ಓಡಾಡಲಿವೆ. ಈ ಬಗ್ಗೆ ಖುಷಿ ಪಡುತ್ತಿರುವ ಜನರಿಗೆ ಇಲ್ಲಿನ ಕಹಿ, ವಾಸ್ತವ ಸಂಗತಿ ತಿಳಿಯಬೇಕಿದೆ.
ನಗರದಲ್ಲಿ BMRCL ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರ ವರೆಗಿನ ವಿಸ್ತರಣೆ ಲೈನ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಹೊಸ ಲೈನ್ ತೆರೆಯಲು ಕಾತುರದಿಂದ ಕಾಯುತ್ತಿದೆ. ಹಸಿರು ಮಾರ್ಗ ರೈಲು ಗಳನ್ನೇ ಮಾದಾವರ ವರೆಗೆ ಓಡಿಸಲು ಯಾವುದೇ ತೊಂದರೆ ಇಲ್ಲ. ಆದರೆ ಸುಮಾರು 20 ಕಿಲೋ ಮೀಟರ್ ಉದ್ದದ ಆರ್.ವಿ ರಸ್ತೆ- ಬೊಮ್ಮಸಂದ್ರವರೆಗಿನ ಹೊಸ ಮೆಟ್ರೋ ಹಳದಿ ಮಾರ್ಗ ತೆರೆಯಲು ವಿಘ್ನಗಳು ಎದುರಾಗಬಹುದು.

ಒಂದು ವೇಳೆ ನಿಗದಿತ ಅವಧಿಯಲ್ಲಿ ಈ ಮಾರ್ಗಗಳಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾದರೂ ಸಹಿತ ರೈಲುಗಳ ಸಮಸ್ಯೆ ಜೊತೆಗೆ ಹಾಲಿ ಜನದಟ್ಟಣೆಯಿಲ್ಲಿ ಸಿಲುಕಿರುವ ಮೆಟ್ರೋ ಪ್ರಯಾಣಿಕರು ಮತ್ತಷ್ಟು ದಟ್ಟಣೆ, ರೈಲು ವಿಳಂಬ, ರೈಲುಗಳ ಕೊರತೆ ಎದುರಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಹಾಲಿ 73ಕಿಲೋ ಮೀಟರ್ ಮೆಟ್ರೋ ಮಾರ್ಗದಲ್ಲಿ ನಿತ್ಯ 8 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದಾರೆ. ನಾಗಸಂದ್ರ - ಮಾದವಾರ ವರೆಗಿನ 3.7 ಕಿ.ಮೀ. ವಿಸ್ತರಣೆ ಮಾರ್ಗದಲ್ಲಿ ರೈಲು ಓಡಾಟ ಆರಂಭವಾದರೆ, ಈ ದಟ್ಟಣೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹಾಲಿ ರೈಲುಗಳೇ ಕೊನೆಯ ನಿಲ್ದಾಣವರೆಗೆ ಸೇವೆ ನೀಡುವುದರಿಂದ ಎಲ್ಲ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡು ಬರಲಿದೆ.

ಕಾಲಿಡಲು ಜಾಗ ಇರದಷ್ಟು ಮೆಟ್ರೋ ಭರ್ತಿ..
ಈಗಾಗಲೇ ಪೀಕ್ ಸಮಯದಲ್ಲಿ ಶಾರ್ಟ್ ಲೂಪ್ ರೈಲುಗಳನ್ನು ಓಡಿಸಿದರೂ ಸಹಿತ ಮೆಜೆಸ್ಟಿಕ್, ಯಶವಂತಪುರ, ಎಂಜಿ ರಸ್ತೆ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ಪ್ರಯಾಣಿಕರು ಮೆಟ್ರೋ ಏರಲು ಪರದಾಡುವ ಸ್ಥಿತಿ ಇದೆ. ಬೆಳಗ್ಗೆ ಮತ್ತು ಸಂಜೆ ಅತ್ಯಧಿಕ ಜನದಟ್ಟಣೆ ನಿರ್ಮಾಣವಾಗುತ್ತಿದೆ. ರೈಲಿನೊಳಗೆ ಕಾಲಿಡಲು ಜಾಗವೇ ಇಲ್ಲದಂತೆ ಭರ್ತಿಯಾಗಿರುತ್ತವೆ.
ಇನ್ನೂ ಈ ವಿಸ್ತರಣೆ ಮಾರ್ಗ ತೆರೆದರೆ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಪ್ರಯಾಣಿಕ ದಟ್ಟಣೆ ಹೆಚ್ಚಾಗಿದೆ ಮತ್ತಷ್ಟು ಸಮಸ್ಯೆ ಆಗುತ್ತದೆ. ಅಲ್ಲದೇ, ಭರ್ತಿಯಾದ ರೈಲುಗಳಿಗೆ ಹತ್ತಲು ಆಗದೇ ಮತ್ತೊಂದು ರೈಲಿಗೆ ಕಾಯುತ್ತಾ ಸಮಯ ಹೆಚ್ಚು ವ್ಯಯಿಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಲಿದೆ.
ಹಳದಿ ಮಾರ್ಗ ತೆರೆದರೆ ಏನು ಸಮಸ್ಯೆ?
ವೈಟ್‌ಫೀಲ್ಡ್ ಸಹ ಐಟಿ ಹಬ್ ಆಗಿದ್ದು, ಅಲ್ಲಿಗೆ ನೇರಳೆ ಮಾರ್ಗ ಸಂಪರ್ಕ ಕಲ್ಪಿಸುತ್ತಿದ್ದಂತೆ ಮಟ್ರೋ ಅವಲಂಬನೆಯು ಹೆಚ್ಚಾಗಿದೆ. ಅದೇ ರೀತಿ ಮತ್ತೊಂದು ಐಟಿ ಕೇಂದ್ರವಾಗಿರುವ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಈ ಹಳದಿ ಮಾರ್ಗ ಸಾಗಲಿದೆ. ಈ ಹೊಸ ಮಾರ್ಗದಲ್ಲಿ (20km) ಓಡಿಸುವ ರೈಲು ಡ್ರೈವರ್‌ಲೆಸ್ ಆಗಿವೆ. ಸದ್ಯಕ್ಕೆ ಎರಡು ಸೆಟ್ ರೈಲು ಇದ್ದು, ಡೆಸೆಂಬರ್ ಅಂತ್ಯಕ್ಕೆ ಇನ್ನೆರಡು ರೈಲು ಸೆಟ್ ಬರುವ ಸಾಧ್ಯತೆ ಇದೆ.
ಇದೇ ವರ್ಷ 2024ರ ಫೆಬ್ರುವರಿಗೆ ತೆರೆಯಬೇಕಿದ್ದ ಈ ಮಾರ್ಗವು ಡಿಸೆಂಬರ್ ಅಂತ್ಯ ಇಲ್ಲವೇ ಮುಂದಿನ ವರ್ಷ 2025ರ ಜನವರಿಗೆ ತೆರೆಯುವ ನಿರೀಕ್ಷೆ ಇದೆ. ಇದು ಸಾಧ್ಯವಾದಲ್ಲಿ ಕಡಿಮೆ ಸಂಖ್ಯೆ ರೈಲುಗಳು ಕಾರ್ಯಾಚರಣೆಗೆ ಸಾಕಾಗುವುದಿಲ್ಲ. ದೈನಂದಿನ ಪ್ರಯಾಣಿಕರ ಸಂಖ್ಯೆ ತೀವ್ರ ರೂಪದಲ್ಲಿ ಹೆಚ್ಚಾಗಲಿದೆ. ಇಷ್ಟು ಮಾತ್ರವಲ್ಲದೇ ಹಸಿರು, ನೇರಳೆ ಮಾರ್ಗದ ಸುತ್ತಮುತ್ತಲಿನ ಜನರು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತೆರಳು ಈ ಹಸಿರು ಮಾರ್ಗ ಅವಲಂಬಿಸಿದರೆ, ಜನದಟ್ಟಣೆ ಮತ್ತಷ್ಟು ಹೆಚ್ಚಾಗುವುದು ಖಚಿತ ಎನ್ನಲಾಗಿದೆ.
ಸಂಚಾರ ದಟ್ಟಣೆ ಇಳಿಕೆ, ವಾಯು ಮಾಲಿನ್ಯ ನಿಯಂತ್ರಣ, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗುವುದು ಒಳಿತೇ ಆದರೂ ಸಹಿತ ಮತ್ತೊಂದು ಕಡೆ ಪ್ರಯಾಣಿಕರು ಹೈರಾಣಾಗಬೇಕಾಗುತ್ತದೆ. ಆದ್ದರಿಂದ ಬಿಎಂಆರ್‌ಸಿಎಲ್ ಸೂಕ್ತ ಕ್ರಮ ಕೈಗೊಂಡು ಹೊಸ ಮಾರ್ಗ, ವಿಸ್ತರಣೆ ಮಾರ್ಗ ತೆರೆಯುವುದು ಒಳಿತು ಎಂದು ಪ್ರಯಾಣಿಕರ ಒತ್ತಾಯವಾಗಿದೆ..












Click it and Unblock the Notifications