Namma Metro: ಕೆಆರ್ ಪುರ ಮೆಟ್ರೋ ನಿಲ್ದಾಣ- ಸಿಲ್ಕ್ ಬೋರ್ಡ್ ನಡುವೆ 16 ಎಸಿ ಫೀಡರ್ ಬಸ್‌ಗಳು, ಮಾಹಿತಿ, ವಿವರ
ಬೆಂಗಳೂರು, ಸೆಪ್ಟೆಂಬರ್ 30: ಚಲ್ಲಘಟ್ಟದಿಂದ ಕಾಡುಗೋಡಿ (ವೈಟ್‌ಫೀಲ್ಡ್) ವರೆಗಿನ ನಮ್ಮ ಮೆಟ್ರೋ ನೇರಳೆ ಮಾರ್ಗವು ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೆಆರ್ ಪುರ ಮೆಟ್ರೋ ನಿಲ್ದಾಣ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ 16 ಎಸಿ ಫೀಡರ್ ಬಸ್‌ಗಳ ಸೇವೆಯನ್ನು ಆರಂಭಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸೇವೆಯಿಂದ 17 ಕಿಮೀ ಐಟಿ ಕಾರಿಡಾರ್‌ನಲ್ಲಿ ಕೆಲಸ ಮಾಡುವ ಲಕ್ಷಾಂತರ ಟೆಕ್ಕಿಗಳಿಗೆ ಪ್ರಯೋಜನವಾಗಲಿದೆ ಎಂದು ಬಿಎಂಟಿಸಿ ತಿಳಿಸಿದೆ.

ಈ ಕುರಿತು ಮಾತನಾಡಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಅವರು, 'ಬಿಎಂಟಿಸಿ ಬಸ್‌ಗಳನ್ನು ಪೀಕ್ ಅವರ್‌ಗಳಲ್ಲಿ ಐದು ನಿಮಿಷಗಳ ಆವರ್ತನದೊಂದಿಗೆ ಓಡಿಸಲಾಗುತ್ತದೆ. ಪೀಕ್ ಅವರ್ ಇಲ್ಲದಿದ್ದಲ್ಲಿ 8 ರಿಂದ 10 ನಿಮಿಷಗಳ ಆವರ್ತನದೊಂದಿಗೆ ಕಾರ್ಯನಿರ್ವಹಿಸುತ್ತವೆ' ಎಂದು ಹೇಳಿದ್ದಾರೆ.
ಈ ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ಬಿಎಂಟಿಸಿ ಬಸ್ ಸೇವೆಗಳಿಗೆ ಹೆಚ್ಚುವರಿಯಾಗಿ ಫೀಡರ್ ಸೇವೆಗಳನ್ನು ಒದಗಿಸಲಾಗಿದೆ. ಔಟರ್ ರಿಂಗ್ ರೋಡ್‌ನಲ್ಲಿ ಬಿಎಂಟಿಸಿ ಪ್ರತಿದಿನ 2,000 ಟ್ರಿಪ್‌ಗಳನ್ನು ನಿರ್ವಹಿಸುತ್ತಿದೆ.
ಬಿಪಿಎಸಿ ಮತ್ತು ಡಬ್ಲ್ಯುಆರ್‌ಐ ಆಯೋಜಿಸಿದ್ದ 'ಪ್ರೈವೇಟ್ ಟು ಪಬ್ಲಿಕ್' ವೆಬ್‌ನಾರ್‌ನಲ್ಲಿ ಭಾಗವಹಿಸಿದ ಮಾತನಾಡಿದ ಕಲ್ಪನಾ ಕಟಾರಿಯಾ ಅವರು, 'ಕೆಲವೇ ದಿನಗಳಲ್ಲಿ 43 ಕಿಮೀ ಸಂಪೂರ್ಣ ನೇರಳೆ ಮಾರ್ಗವು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಕೆಆರ್ ಪುರದಿಂದ ಬೈಯಪ್ಪನಹಳ್ಳಿ ವರೆಗಿನ 2 ಕಿಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ಇನ್ನಷ್ಟೇ ಆರಂಭಿಸಬೇಕಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (ಸಿಎಂಆರ್‌ಎಸ್) ಬಿಎಂಆರ್‌ಸಿಎಲ್ ಈಗಾಗಲೇ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದಿದೆ.
ಕೆಂಗೇರಿಯಿಂದ ಚಲ್ಲಘಟ್ಟದ ವರೆಗಿನ ಮಾರ್ಗದಲ್ಲಿ ಶುಕ್ರವಾರ ಸುರಕ್ಷತಾ ತಪಾಸಣೆ ನಡೆಸಲಾಯಿತು. ಅಕ್ಟೋಬರ್ ಮೊದಲ ವಾರದಲ್ಲಿ ಎರಡು ವಿಸ್ತರಣೆಗಳನ್ನು ಒಟ್ಟಿಗೆ ಪ್ರಾರಂಭಿಸುವ ಸಾಧ್ಯತೆಯಿದೆ.
ಸಂಪೂರ್ಣ ಮಾರ್ಗವು ಕಾರ್ಯಾರಂಭಗೊಂಡ ನಂತರ, ಪ್ರಸ್ತುತ ಇರುವ 6.3 ಲಕ್ಷ ಪ್ರಯಾಣಿಕರ ಸಂಖ್ಯೆ 7 ಲಕ್ಷಕ್ಕೆ ಏರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೋಟಾರು ರಹಿತ ಪ್ರಯಾಣವನ್ನು ಉತ್ತೇಜಿಸಲು, ಬಿಎಂಆರ್‌ಸಿಎಲ್ ಕೆಆರ್ ಪುರದಲ್ಲಿ ಬೈಕ್ ಪಾರ್ಕಿಂಗ್‌ಗೆ ಜಾಗವನ್ನು ನೀಡಲಿದೆ. ಇದು ಇಡೀ ದಿನಕ್ಕೆ 10 ರೂ ಶುಲ್ಕವನ್ನು ವಿಧಿಸುತ್ತದೆ.

ಮತ್ತೊಂದು ಫೀಡರ್ ಮಾರ್ಗ
ಬಿಎಂಟಿಸಿ ಫೀಡರ್ ಸೇವೆಗಳಿಗೆ (ನಾನ್-ಎಸಿ ಬಸ್ಸುಗಳು) ಮತ್ತೊಂದು ಮಾರ್ಗವನ್ನು ಗುರುತಿಸಿದೆ. 16 ಕಿಮೀ ಮಾರ್ಗವು ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಮಾರತ್ತಹಳ್ಳಿ ತಲುಪಿ, ಸೀತಾರಾಮಪಾಳ್ಯಕ್ಕೆ ತೆರಳಿ ಮೆಟ್ರೊ ನಿಲ್ದಾಣಕ್ಕೆ ಮರಳಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ನಿಲ್ದಾಣದಲ್ಲಿ ಬಸ್ ಸಮಯವನ್ನು ಪ್ರದರ್ಶಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ನಿಖರ ಸಮಯವನ್ನು ತಿಳಿಯಬಹುದು ಎಂದು ನಿಗಮದ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications