Namma Metro: ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ವಿಸ್ತರಣೆಯಿಂದ ಕಡಿಮೆಯಾಗಲಿದೆ ಟ್ರಾಫಿಕ್ ಅವ್ಯವಸ್ಥೆ- ಹೇಗೆಂದು ಗೊತ್ತೇ?
ಬೆಂಗಳೂರು, ಆಗಸ್ಟ್ 07: ಕೆಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವಿನ 2 ಕಿಮೀ ಮೆಟ್ರೊ ಮಾರ್ಗವು ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಟಿನ್ ಫ್ಯಾಕ್ಟರಿ ಪ್ರದೇಶದಲ್ಲಿನ ಟ್ರಾಫಿಕ್ ಅವ್ಯವಸ್ಥೆ ಕೊಂಚ ಮಟ್ಟಿಗೆ ತಗ್ಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
2019 ರಲ್ಲಿ ಕೆಆರ್ ಪುರ ಬಳಿಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ, ಬಸ್ ವೇಗಳು ಮತ್ತು ಸ್ಕೈವಾಕ್ ಯೋಜನೆಗಳ ನಿರ್ಮಾಣ ಕಾರ್ಯವನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಗೆ ವಹಿಸಲಾಯಿತು.

ಭೂಸ್ವಾಧೀನ ಮತ್ತು ಸಾಂಕ್ರಾಮಿಕ ರೋಗಗಳು ಸೇರಿದಂತೆ ವಿವಿಧ ಕಾರಣಗಳಿಗಾಗಿ, ಬಿಎಂಆರ್‌ಸಿಎಲ್ ಈ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ನೇರಳೆ ಮಾರ್ಗದ ಕಾಮಗಾರಿ ಉದ್ಘಾಟನೆ ಜತೆಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ಸಂಸ್ಥೆ ಹೊಂದಿದೆ.
ಪ್ರಸ್ತುತ ಪರ್ಪಲ್ ಲೈನ್ ಕೆಂಗೇರಿಯಿಂದ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರದಿಂದ ವೈಟ್ ಫೀಲ್ಡ್‌ವರೆಗೆ ಕಾರ್ಯನಿರ್ವಹಿಸುತ್ತಿದೆ. ಕೆಆರ್ ಪುರ ಹಾಗೂ ಬೈಯಪ್ಪನಹಳ್ಳಿ ನಡುವಿನ 2 ಕಿಮೀ ಮಾರ್ಗದ ಕಾರ್ಯಾರಂಭದ ಮೂಲಕ ನೇರಳೆ ಮಾರ್ಗವು ಪೂರ್ಣಗೊಳ್ಳಲಿದೆ.
ಇದು ವೈಟ್‌ಫೀಲ್ಡ್‌ನ ಐಟಿ ಕಾರಿಡಾರ್ ಅನ್ನು ನಮ್ಮ ಮೆಟ್ರೋ ನೆಟ್‌ವರ್ಕ್‌ಗೆ ಸಂಯೋಜಿಸುತ್ತದೆ. ಈ ಪ್ರದೇಶದಲ್ಲಿನ ವಾಹನ ದಟ್ಟಣೆಯಲ್ಲಿ ಈ ಮಾರ್ಗವು ಬದಲಾವಣೆ ತರಳಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಕೆಆರ್ ಪುರಂ ಬಳಿಯ ಕೇಬಲ್ ರಸ್ತೆಯ ಎರಡೂ ಬದಿಗಳನ್ನು ಅಗಲೀಕರಣ ಮಾಡಲಾಗಿದ್ದು, ವಾಹನಗಳು ಸರಾಗವಾಗಿ ಸಾಗಬಹುದು ಎಂದು ಹೇಳಲಾಗುತ್ತಿದೆ.
ಕೆಆರ್ ಪುರ ರೈಲು ನಿಲ್ದಾಣದ ಬಳಿ ಬಿಡಿಎ ಭೂಮಿಯನ್ನು ರೈಲ್ವೆಗೆ ಹಸ್ತಾಂತರಿಸುವಲ್ಲಿ ವಿಳಂಬವಾಗಿರುವುದರಿಂದ ಕಾಮಗಾರಿಗಳು ಅಲ್ಪ ಪ್ರಮಾಣದಲ್ಲಿ ಬಾಕಿ ಉಳಿದಿವೆ.
'ನಾವು ಆದಷ್ಟು ಬೇಗ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಬಸ್ ವೇಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು' ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 350 ಕೋಟಿ ರೂ.ನೀಡಿದೆ ಎಂದೂ ಅವರು ಹೇಳಿದ್ದಾರೆ.

ಹೊಸದಾಗಿ ನಿರ್ಮಿಸಿರುವ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಆರು ಬಸ್ ಬೇಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಟಿನ್ ಫ್ಯಾಕ್ಟರಿ ಬಳಿ ಸ್ಕೈವಾಕ್ ನಿರ್ಮಿಸಲು ಯೋಜಿಸಲಾಗಿತ್ತು. ಭೂಸ್ವಾಧೀನ ವಿಳಂಬವಾದ ಕಾರಣ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆನ್ನಿಗಾನಹಳ್ಳಿ ಕಡೆಯಿಂದ ಕೆಆರ್ ಪುರ ರೈಲು ನಿಲ್ದಾಣದ ವರೆಗೆ ಮತ್ತು ಕೆಆರ್ ಪುರ ಮೆಟ್ರೊ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣದವರೆಗೆ 1.6 ಕಿಲೋಮೀಟರ್ ರಸ್ತೆ ವಿಸ್ತರಣೆ ಆಗಬೇಕಿದೆ. ಇದಕ್ಕಾಗಿ ಬಿಎಂಆರ್‌ಸಿಎಲ್ 16,000 ಚದರ ಮೀಟರ್ ಭೂಮಿಯನ್ನು ಗುರುತಿಸಿದೆ.
ರಸ್ತೆ ಅಗಲೀಕರಣ ಮತ್ತು ಬಸ್ ವೇಗಳ ನಿರ್ಮಾಣಕ್ಕಾಗಿ ಈ ಹಿಂದೆ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸುತ್ತಿದ್ದ ಜಮೀನನ್ನು ನಾವು ಸ್ವಾಧೀನಪಡಿಸಿಕೊಂಡಿದ್ದೇವೆ. ಕೆಆರ್ ಪುರ ರೈಲ್ವೆ ನಿಲ್ದಾಣದ ಬಳಿ, ಬಿಡಿಎ ಭೂಮಿಯನ್ನು ರೈಲ್ವೆಗೆ ಹಸ್ತಾಂತರಿಸುವಲ್ಲಿ ವಿಳಂಬವಾಗಿತ್ತು. ಇದರಿಂದ ಕಾಮಗಾರಿಗಳು ಬಾಕಿ ಉಳಿದಿವೆ. ಭೂಮಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications