Get Updates
Get notified of breaking news, exclusive insights, and must-see stories!

Explainer: ಬೆಂಗಳೂರಿನ ನಮ್ಮ ಮೆಟ್ರೋ ಗಳಿಸಿದ ಯಶಸ್ಸು ಹಲವು, ಆದರೆ ಜನರಿಗೆ ಸಿಕ್ಕಿದೆಯೇ ನೆಮ್ಮದಿ? ಇಲ್ಲಿದೆ ಉತ್ತರ

ಬೆಂಗಳೂರು ನಗರವು ಕಳೆದ ಎರಡು ದಶಕಗಳಲ್ಲಿ ಐಟಿ ಮತ್ತು ಸ್ಟಾರ್ಟ್‌ಅಪ್‌ಗಳ ಹಬ್‌ ಆಗಿ ವೇಗವಾಗಿ ವಿಸ್ತರಿಸಿಕೊಂಡಿದೆ. ಜನಸಂಖ್ಯೆ, ವಾಹನಗಳ ಸಂಖ್ಯೆ ಮತ್ತು ಟ್ರಾಫಿಕ್ ದಟ್ಟಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯೂ ಮೂಡಿತು. ಈ ಹಿನ್ನೆಲೆ "ನಮ್ಮ ಮೆಟ್ರೋ" (Namma Metro) ಯೋಜನೆ ರೂಪುಗೊಂಡಿತು. ಇಂದು ನಮ್ಮ ಮೆಟ್ರೋ ಬೆಂಗಳೂರಿಗರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಲಕ್ಷಾಂತರ ಪ್ರಯಾಣಿಕರ ದಿನನಿತ್ಯದ ಬದುಕನ್ನು ಸುಲಭಗೊಳಿಸಿದೆ. ನಮ್ಮ ಮೆಟ್ರೋ ನಡೆದು ಬಂದ ಹಾದಿ ಹಾಗೂ ಈಗಿನ ಸ್ಥಿತಿಗತಿ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಯೋಜನೆಯ ಆರಂಭ ಮತ್ತು ಹಿನ್ನಲೆ

ನಮ್ಮ ಮೆಟ್ರೋ ಯೋಜನೆಯನ್ನು ಕಾರ್ಯಗತಗೊಳಿಸಲು 2006ರಲ್ಲಿ ಬೆಂಗಳೂರು ಮೆಟ್ರೋ ರೈಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಸ್ಥಾಪಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಯೋಜನೆಯಾಗಿ ಇದು ರೂಪುಗೊಂಡಿತು. ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

Namma Metro

ಮೊದಲ ಹಂತದ ಕಾಮಗಾರಿಗಳು 2007ರಲ್ಲಿ ಆರಂಭಗೊಂಡು, 2011ರಲ್ಲಿ ಬೈಯಪ್ಪನಹಳ್ಳಿ-ಎಂ.ಜಿ.ರಸ್ತೆ ಮಾರ್ಗದಲ್ಲಿ ಮೊದಲ ಸಂಚಾರ ಪ್ರಾರಂಭವಾಯಿತು. ನಂತರ ಹಂತ ಹಂತವಾಗಿ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ಗಳು ವಿಸ್ತರಿಸಲ್ಪಟ್ಟವು. ಹಂತ-1ರಲ್ಲೇ ಎರಡು ಪ್ರಮುಖ ಮಾರ್ಗಗಳು ಅಭಿವೃದ್ಧಿಪಡಿಸಲ್ಪಟ್ಟವು.

* ಪರ್ಪಲ್ ಲೈನ್-ಬೈಯಪ್ಪನಹಳ್ಳಿಯಿಂದ ಕೆಂಗೇರಿವರೆಗೆ
* ಗ್ರೀನ್ ಲೈನ್-ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ

ಈ ಎರಡೂ ಮಾರ್ಗಗಳು 2017ರ ವೇಳೆಗೆ ಪೂರ್ಣಗೊಂಡವು. ಒಟ್ಟು ಸುಮಾರು 42 ಕಿಲೋಮೀಟರ್ ಉದ್ದದ ಈ ಜಾಲವು ಭೂಗತ ಮತ್ತು ಮೇಲ್ಸೇತುವೆ ಮಾರ್ಗಗಳನ್ನೂ ಒಳಗೊಂಡಿವೆ. ಆರಂಭದ ದಿನದಿಂದಲೇ ಮೆಟ್ರೋ ರೈಲು ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿತು.

* ಪೂರ್ವ-ಪಶ್ಚಿಮ ಕಾರಿಡಾರ್ (43.49 ಕಿಮೀ): ಪೂರ್ವದಲ್ಲಿ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಚಲ್ಲಘಟ್ಟ ಟರ್ಮಿನಲ್‌ನಲ್ಲಿ ಕೊನೆಗೊಳ್ಳುತ್ತದೆ.

* ಉತ್ತರ-ದಕ್ಷಿಣ ಕಾರಿಡಾರ್ (33.5 ಕಿಮೀ): ಉತ್ತರದಲ್ಲಿ ಮಾದಾವರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೊನೆಗೊಳ್ಳುತ್ತದೆ.

* ಹಳದಿ ಮಾರ್ಗ (19.75 ಕಿ.ಮೀ): ಹೊಸ ಮಾರ್ಗವು ಆರ್‌ವಿ ರಸ್ತೆಯಲ್ಲಿ ಪ್ರಾರಂಭವಾಗಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಲ್ಲಿ ಕೊನೆಗೊಳ್ಳುತ್ತದೆ.

Namma Metro

ಹಂತ-2 ಮತ್ತು ವಿಸ್ತರಣೆ

ನಗರದಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನಿಸಿ 2ನೇ ಹಂತದ ಮೆಟ್ರೋ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಹಂತ-2ರಲ್ಲಿ ಹೊಸ ಕಾರಿಡಾರ್‌ಗಳ ಜೊತೆಗೆ ಹಳೆಯ ಮಾರ್ಗಗಳ ವಿಸ್ತರಣೆಯೂ ಸೇರಿತು. ಇದರಲ್ಲಿ ವೈಟ್‌ಫೀಲ್ಡ್ ಸಂಪರ್ಕ (ಪರ್ಪಲ್ ಲೈನ್ ವಿಸ್ತರಣೆ), ಯಲಚೇನಹಳ್ಳಿ ವಿಸ್ತರಣೆ, ಕೆ.ಆರ್.ಪುರಂ, ಬೈಯಪ್ಪನಹಳ್ಳಿ ಸಂಪರ್ಕ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ ಪ್ರಮುಖವಾದವು. ವಿಮಾನ ನಿಲ್ದಾಣ ಸಂಪರ್ಕ ಮಾರ್ಗವು ಬೆಂಗಳೂರು ನಗರದ ಉತ್ತರ ಭಾಗಕ್ಕೆ ಮಹತ್ವದ ಸಂಪರ್ಕವನ್ನು ಒದಗಿಸುತ್ತಿದೆ. ಈ ಮೂಲಕ ಐಟಿ ಕಾರಿಡಾರ್‌, ವಾಣಿಜ್ಯ ಕೇಂದ್ರಗಳು ಮತ್ತು ಹೊರವಲಯ ಪ್ರದೇಶಗಳು ಮೆಟ್ರೋ ಜಾಲಕ್ಕೆ ಸೇರ್ಪಡೆಯಾಗುತ್ತಿವೆ.

ಈಗಿನ ಸ್ಥಿತಿಗತಿ

2025ರ ಅಂಕಿಅಂಶಗಳ ಪ್ರಕಾರ ನಮ್ಮ ಮೆಟ್ರೋ ಜಾಲವು 97 ಕಿ.ಮೀಗೂ ಹೆಚ್ಚು ವಿಸ್ತಾರ ಹೊಂದಿದೆ. ಹಂತ-2ರ ಹಲವು ಭಾಗಗಳು ಚಾಲನೆಯಲ್ಲಿದ್ದು, ಕೆಲವು ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ದಿನನಿತ್ಯದ ಪ್ರಯಾಣಿಕರ ಸಂಖ್ಯೆ ಸರಾಸರಿ 6 ರಿಂದ 8 ಲಕ್ಷದವರೆಗೆ ಏರಿಕೆಯಾಗುತ್ತಿದೆ. ಇದು ಹಬ್ಬ-ವಾರಾಂತ್ಯಗಳಲ್ಲಿ ಇನ್ನಷ್ಟು ಹೆಚ್ಚಳ ಕಾಣುತ್ತಿದೆ. ಇಂಟರ್‌ಚೇಂಜ್ ನಿಲ್ದಾಣಗಳಾದ ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್), ಬೈಯಪ್ಪನಹಳ್ಳಿ, ಕೆ.ಆರ್.ಪುರ ನಗರ ಸಾರಿಗೆ ಜಾಲದ ಪ್ರಮುಖ ಕೇಂದ್ರಗಳಾಗಿವೆ. ಮೆಟ್ರೋ ರೈಲುಗಳು ಸಮಯಪಾಲನೆ, ಶಿಸ್ತಿನ ಸಂಚಾರ ಮತ್ತು ಸ್ವಚ್ಛತೆಯಿಂದ ಪ್ರಸಿದ್ಧವಾಗಿವೆ.

ಬೆಂಗಳೂರಿಗರಿಗೆ ಸಿಗುತ್ತಿರುವ ಅನುಕೂಲಗಳು

1. ಟ್ರಾಫಿಕ್ ದಟ್ಟಣೆ ಕಡಿತ: ಮೆಟ್ರೋ ಸಂಚಾರದಿಂದ ಸಾವಿರಾರು ವಾಹನಗಳು ರಸ್ತೆಗೆ ಇಳಿಯುವುದನ್ನು ತಡೆಯಲಾಗಿದೆ. ವಿಶೇಷವಾಗಿ ಎಂ.ಜಿ.ರಸ್ತೆ, ರಾಜಾಜಿನಗರ, ಯಲಹಂಕ, ವೈಟ್‌ಫೀಲ್ಡ್‌ ಮುಂತಾದ ಪ್ರದೇಶಗಳಲ್ಲಿ ಟ್ರಾಫಿಕ್ ಒತ್ತಡದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದಾಗಿ ವರದಿಯಾಗಿದೆ.

2. ಸಮಯ ಉಳಿತಾಯ: ಮೆಟ್ರೋ ಮೂಲಕ ದೂರ ಪ್ರಯಾಣವು ವೇಗವಾಗಿ ಸಾಧ್ಯವಾಗುತ್ತದೆ. ಉದಾಹರಣೆಗೆ, ಪೀಕ್ ಅವಧಿಯಲ್ಲಿ ಕಾರಿನಲ್ಲಿ 1.5 ಗಂಟೆ ತೆಗೆದುಕೊಳ್ಳುವ ಮಾರ್ಗವನ್ನು ಮೆಟ್ರೋ 30 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ. ಇದು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ದೊಡ್ಡ ವರದಾನವಾಗಿದೆ.

3. ಪರಿಸರ ಸ್ನೇಹಿ ಸಾರಿಗೆ: ವಿದ್ಯುತ್‌ ಚಾಲಿತ ರೈಲುಗಳಾದ್ದರಿಂದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ. ವಾಯುಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ.

4. ಭದ್ರತೆ ಮತ್ತು ಸೌಲಭ್ಯ: ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ, ಭದ್ರತಾ ಸಿಬ್ಬಂದಿ, ಮಹಿಳೆಯರಿಗೆ ಮೀಸಲು ಕೋಚ್‌ಗಳು, ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳು ಲಭ್ಯವಿವೆ. ವಿಶೇಷ ಅಗತ್ಯಗಳಿರುವ ಪ್ರಯಾಣಿಕರಿಗೆ ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ.

5. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ಮೆಟ್ರೋ ಮಾರ್ಗದ ಸುತ್ತಮುತ್ತ ಆಸ್ತಿ ಮೌಲ್ಯ ಹೆಚ್ಚಳ ಕಂಡುಬಂದಿದೆ. ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ. ಐಟಿ ಪಾರ್ಕ್‌ಗಳು ಮತ್ತು ವ್ಯಾಪಾರ ಕೇಂದ್ರಗಳಿಗೆ ಸುಲಭ ಸಂಪರ್ಕದಿಂದ ಉದ್ಯೋಗಾವಕಾಶಗಳು ಸಹ ಹೆಚ್ಚಾಗಿವೆ.

6. ಮಲ್ಟಿ-ಮಾಡಲ್ ಸಂಪರ್ಕ: ಹಲವು ಮೆಟ್ರೋ ನಿಲ್ದಾಣಗಳಿಗೆ ಬಿಎಂಟಿಸಿ ಬಸ್‌ಗಳು, ಉಪನಗರ ರೈಲು ಮತ್ತು ಮೆಟ್ರೋ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಪ್ರಯತ್ನ ನಡೆದಿದೆ. ಮೆಟ್ರೋ ನಿಲ್ದಾಣಗಳ ಬಳಿ ಫೀಡರ್‌ ಬಸ್‌ ಸೇವೆ ಕೂಡ ಲಭ್ಯವಿದೆ.

ಮೆಟ್ರೋ ಎದುರು ಹಲವು ಸವಾಲು

ನಮ್ಮ ಮೆಟ್ರೋ ಯೋಜನೆಯು ಹಲವಾರು ಸಾಧನೆಗಳನ್ನು ಕಂಡಿದ್ದರೂ ಕೆಲವು ಸವಾಲುಗಳನ್ನು ಕೂಡ ಎದುರಿಸುತ್ತಿವೆ. ಕಾಮಗಾರಿಗಳ ವಿಳಂಬ, ಭೂಸ್ವಾಧೀನ ಸಮಸ್ಯೆಗಳು, ವೆಚ್ಚ ಏರಿಕೆ ಇತ್ಯಾದಿ ಪ್ರಶ್ನೆಗಳು ಎದುರಾಗಿವೆ. ಜೊತೆಗೆ ನಗರ ಸಂಪೂರ್ಣವಾಗಿ ಮೆಟ್ರೋ ಜಾಲದಿಂದ ಆವರಣಗೊಳ್ಳಲು ಇನ್ನೂ ಕೆಲವು ವರ್ಷಗಳ ಅಗತ್ಯವಿದೆ. ಭವಿಷ್ಯದಲ್ಲಿ ಹಂತ-3 ಮತ್ತು ಇನ್ನಷ್ಟು ವಿಸ್ತರಣೆಗಳ ಬಗ್ಗೆ ಯೋಜನೆಗಳು ಕೂಡ ಚರ್ಚೆಯಲ್ಲಿವೆ. ಉಪನಗರ ಪ್ರದೇಶಗಳು ಮತ್ತು ಐಟಿ ಕಾರಿಡಾರ್‌ಗಳಿಗೆ ಇನ್ನಷ್ಟು ಸಂಪರ್ಕ ಕಲ್ಪಿಸುವ ಗುರಿಯಿದೆ. ವಿಮಾನ ನಿಲ್ದಾಣ ಸಂಪರ್ಕ ಪೂರ್ಣಗೊಂಡ ಬಳಿಕ ನಮ್ಮ ಮೆಟ್ರೋ ಇನ್ನಷ್ಟು ಮಹತ್ವ ಪಡೆದುಕೊಳ್ಳಲಿದೆ.

Namma Metro

ದರ ಏರಿಕೆ ಶಾಕ್‌ ಕೊಡುತ್ತಿರುವ ಮೆಟ್ರೋ

ನಮ್ಮ ಮೆಟ್ರೋ ಸೇವೆ ಶುರುವಾದಾಗ ಟಿಕೆಟ್‌ ದರ ಕೈಗೆಟುಕುವಂತಿತ್ತು. ಅಗ್ಗದ ದರಕ್ಕೆ ಹೈಟೆಕ್‌ ಮೆಟ್ರೋದಲ್ಲಿ ಪ್ರಯಾಣದ ಅನುಭವ ನೀಡಿತ್ತು. ಆದರೆ ಬಿಎಂಆರ್‌ಸಿಎಲ್‌ 2025ರ ಫೆಬ್ರವರಿಯಲ್ಲಿ ಮೆಟ್ರೋ ಪ್ರಯಾಣ ದರವನ್ನು ದಿಢೀರ್‌ ಏರಿಸುವ ಮೂಲಕ ಪ್ರಯಾಣಿಕರಿಗೆ ದೊಡ್ಡ ಆಘಾತ ನೀಡಿತ್ತು. ಇದಕ್ಕೆ ಪ್ರಯಾಣಿಕರಿಂದಲೂ ತೀವ್ರ ವಿರೋಧ ಎದುರಾಯಿತು. ಆದರೆ ದರ ಏರಿಕೆ ತಡೆಯಲು ಆಗಲಿಲ್ಲ.

ಅದೇ ರೀತಿ ಈ ವರ್ಷವೂ ಫೆಬ್ರವರಿ 9, 2026ರಿಂದ ಜಾರಿಗೆ ಬರುವಂತೆ ಸುಮಾರು ಶೇ.5ರಷ್ಟು ಟಿಕೆಟ್ ದರ ಹೆಚ್ಚಳ ಮಾಡಲು ಯೋಜಿಸಿತ್ತು. ಕನಿಷ್ಠ ದರ ₹10ರಿಂದ ₹11ಕ್ಕೆ ಮತ್ತು ಗರಿಷ್ಠ ದರ ₹90 ರಿಂದ ₹95 ಕ್ಕೆ ಏರಿಕೆಯಾಗುವ ಸಾಧ್ಯತೆಯಿತ್ತು. ಪ್ರಯಾಣಿಕರಿಂದ ತೀವ್ರ ವಿರೋಧ, ರಾಜಕೀಯ ಒತ್ತಡ ಮತ್ತು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ. ಸದ್ಯಕ್ಕೆ ಹಳೆಯ ದರಗಳೇ ಮುಂದುವರಿಯಲಿದ್ದು, ಪರಿಷ್ಕೃತ ದರದ ಕುರಿತು ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ.

"ನಮ್ಮ ಮೆಟ್ರೋ" ಇಂದು ಬೆಂಗಳೂರು ನಗರದ ಜೀವನಾಡಿಯಂತಾಗಿದ್ದು, ಇದು ಕೇವಲ ಸಾರಿಗೆ ವ್ಯವಸ್ಥೆಯಲ್ಲ, ನಗರ ಅಭಿವೃದ್ಧಿಯ ಸಂಕೇತವೂ ಆಗಿದೆ. ಟ್ರಾಫಿಕ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಸ್ತರಣೆ ಮತ್ತು ಸುಧಾರಣೆಗಳೊಂದಿಗೆ ನಮ್ಮ ಮೆಟ್ರೋ ಬೆಂಗಳೂರು ನಗರದ ಸುಸ್ಥಿರ ಬೆಳವಣಿಗೆಗೆ ಬೆನ್ನೆಲುಬಾಗಿ ಪ್ರಯಾಣವನ್ನು ಸುಗಮಗೊಳಿಸುವ ನಿರೀಕ್ಷೆ ಇದೆ.

ನಮ್ಮ ಮೆಟ್ರೋ ಬಗ್ಗೆ ಪ್ರಮುಖ ಪ್ರಶ್ನೋತ್ತರಗಳು

1. ನಮ್ಮ ಮೆಟ್ರೋ ಯೋಜನೆಯನ್ನು ಯಾರು ನಿರ್ವಹಿಸುತ್ತಾರೆ?

ನಮ್ಮ ಮೆಟ್ರೋವನ್ನು ಬೆಂಗಳೂರು ಮೆಟ್ರೋ ನಿಗಮ ನಿಯಮಿತ (Bangalore Metro Rail Corporation Limited - BMRCL) ನಿರ್ವಹಿಸುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯುಕ್ತ ಸಂಸ್ಥೆಯಾಗಿದೆ.

2. ಪ್ರಸ್ತುತ ನಮ್ಮ ಮೆಟ್ರೋ ಎಷ್ಟು ಕಿಲೋಮೀಟರ್ ವಿಸ್ತಾರ ಹೊಂದಿದೆ?
2025 ರ ಡಿಸೆಂಬರ್ ತಿಂಗಳ ಅಂಕಿಅಂಶಗಳ ಪ್ರಕಾರ ಮೆಟ್ರೋ ಸೇವೆಗಳು 97 ಕಿ.ಮೀ. ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು.

3. ಮೆಟ್ರೋ ಟಿಕೆಟ್ ದರ ಎಷ್ಟು?
ಪ್ರಯಾಣದ ದೂರವನ್ನು ಅವಲಂಬಿಸಿ ದರ ಬದಲಾಗುತ್ತದೆ. ಕನಿಷ್ಠ ದರ ಕಡಿಮೆ ದೂರಕ್ಕೆ ಮತ್ತು ಗರಿಷ್ಠ ದರ ದೀರ್ಘ ದೂರ ಪ್ರಯಾಣಕ್ಕೆ ವಿಧಿಸಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಮತ್ತು ಟೋಕನ್ ಸೌಲಭ್ಯವಿದೆ.

4. ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಇದೆಯೇ?
ಹಂತ-2ರಡಿ ಬ್ಲೂ ಲೈನ್ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾದ ಬಳಿಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಇದರ ಕಾಮಗಾರಿ ಪ್ರಗತಿಯಲ್ಲಿದೆ.

5. ಮಹಿಳೆಯರಿಗೆ ವಿಶೇಷ ಸೌಲಭ್ಯ ಇದೆಯೇ?
ಹೌದು. ಪ್ರತಿ ರೈಲಿನಲ್ಲಿ ಮಹಿಳೆಯರಿಗೆ ಮೀಸಲು ಕೋಚ್ ಇದೆ. ಜೊತೆಗೆ ಸಿಸಿಟಿವಿ ಹಾಗೂ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

6. ದಿನಕ್ಕೆ ಎಷ್ಟು ಪ್ರಯಾಣಿಕರು ನಮ್ಮ ಮೆಟ್ರೋ ಬಳಸುತ್ತಾರೆ?
ಸರಾಸರಿ 6 ರಿಂದ 8 ಲಕ್ಷ ಮಂದಿ ದಿನನಿತ್ಯ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಬಳಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+