ನಲಪಾಡ್ ಅಕಾಡೆಮಿ ಒತ್ತುವರಿ ತೆರವು ಸ್ಥಗಿತ, ಎಪ್ಸಿಲಾನ್ ಒತ್ತುವರಿಯತ್ತ ನೋಡದ ಅಧಿಕಾರಿಗಳು
ಬೆಂಗಳೂರು, ಸೆಪ್ಟಂಬರ್ 15: ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಗುರುವಾರವು ಮುಂದುವರಿದಿದೆ. ಪಾಲಿಕೆ ಅಧಿಕಾರಿಗಳ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡುತ್ತಿರುವ ಹಿನ್ನೆಲೆ ಕೆಲವೆಡೆ ಜನಾಕ್ರೋಶ ವ್ಯಕವಾಗಿದೆ. ಮತ್ತೊಂದೆಡೆ ನಲಪಾಡ್ ಅಕಾಡೆಮಿ ಒತ್ತುವರಿಗೆ ಹೈಕೋರ್ಟ್ ತಡೆ ನೀಡಿದೆ.
ಶಾಸಕ ಎನ್.ಎ.ಹ್ಯಾರಿಸ್ ಒಡೆತನದ ಚಲಘಟ್ಟದ ಸರ್ವೇ ನಂಬರ್ 70/14ರಲ್ಲಿರುವ ನಲಪಾಡ್ ಅಕಾಡೆಮಿಯ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಂಡಿದೆ. ಮೊದಲ ದಿನ 50ಮೀಟರ್ ಒತ್ತುವರಿ ತೆರವು ಮಾಡಲಾಗಿತ್ತು, ಬುಧವಾರ ಎರಡನೇ ದಿನವು ಬಿಬಿಎಂಪಿ ಕಾರ್ಯಾಚರಣೆ ತೆರವುಗೊಳಿಸಿತ್ತು.
ಇದನ್ನು ಆಕ್ಷೇಪಿಸಿ ನಲಪಾಡ್ ಅಕಾಡೆಮಿ ಶಿಕ್ಷಣ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನು ವಿಚಾರಣೆ ನಡೆಸಿ ಹೈಕೋರ್ಟ್ ನ್ಯಾಯಪೀಠ ಸೆಪ್ಟಂಬರ್ 16ರವರೆಗೆ ಅಕಾಡೆಮಿಯ ಒತ್ತುವರಿ ತೆರವಿಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಹೀಗಾಗಿ ಬಾಕಿ ಉಳಿದಿದ್ದ 40ಮೀಟರ್ ಒತ್ತುವರಿಯನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಶುಕ್ರವಾರ ಯೋಜನೆ ಹಾಕಿಕೊಂಡಿದ್ದರು. ಅಷ್ಟರಲ್ಲಿ ಮಧ್ಯಂತರ ಆದೇಶ ಹಿನ್ನೆಲೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವಿಗೆ ಮುಂದಾಗಲಿಲ್ಲ ಎನ್ನಲಾಗಿದೆ.

ಯಮಲೂರಿನ ಎಪ್ಸಿಲಾನ್ ವಿಲ್ಲಾ ಮುಟ್ಟದ ಬಿಬಿಎಂಪಿ
ಯಮಲೂರು ವ್ಯಾಪ್ತಿಯಲ್ಲಿರುವ ಎಪ್ಸಿಲಾನ್ ವಿಲ್ಲಾ ಹಾದು ಹೋಗುವ ಜಾಗ ಬಿಟ್ಟು ಬಿಬಿಎಂಪಿ ಅಧಿಕಾರಿಗಳು ಬೇರೆ ಒತ್ತುವರಿ ತೆರವಿನ ಮಾರ್ಕಿಂಗ್ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 200 ಎಕರೆ ಜಮೀನು ಹೊಂದಿದ್ದರು ಸಹ ಎಪ್ಸಿಲಾನ್ ಸರ್ಕಾರಿ ಜಾಗವನ್ನು ಒತ್ತುವರಿಪಡಿಸಿಕೊಂಡಿದೆ ಎಂದು ಅಲ್ಲಿದ್ದ ಸ್ಥಳಿಯರು ಅಧಿಕಾರಿಗಳ ಮುಂದೆ ದೂರಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ತಾರತಮ್ಯ ವಿರುದ್ಧ ಜನಕ್ರೋಶ
ಸಾಕಷ್ಟು ವಿಲ್ಲಾಗಳು, ವಿಶಾಲ ಸ್ಥಳ, ಕಾಂಪೌಂಡು ಎಪ್ಸಿಲಾನ್ ವ್ಯಾಪ್ತಿಗೆ ಬರಲಿದ್ದು, ಕೋಟ್ಯಂತರ ರೂ.ಮೌಲ್ಯದ ಈ ಎಪ್ಸಿಲಾನ್ ಪ್ರಭಾವಿಗಳ ಒಡೆತನದ್ದಾಗಿದೆ. ಈ ಕಾರಣದಿಂದ ಬಿಬಿಎಂಪಿ ಎಪ್ಸಿಲಾನ್ ವಿಲ್ಲಾ ಬಿಟ್ಟು ಅಕ್ಕಪಕ್ಕದಲ್ಲಿನ ಖಾಲಿ ಜಾಗದಲ್ಲಿ ಒತ್ತುವರಿ ತೆರವಿಗೆ ಗುರುತಿಸಿದ್ದಾರೆ. ಎಪ್ಸಿಲಾನ್ ವಿಲ್ಲಾ ಒತ್ತುವರಿ ತೆರವಿನ ಬಗ್ಗೆ ಮಾಹಿತಿ, ಸ್ಪಷ್ಟತೆ ಇರದ ಬಿಬಿಎಂಪಿ ಅಧಿಕಾರಿಗಳು ಜನರ ಆಕ್ರೋಶದ ನಂತರ ಈ ಪ್ರದೇಶ ನಕ್ಷೆ ಹುಡುಕಾಡಿದ್ದಾರೆ. ಒಟ್ಟಾರೆ ಬಿಬಿಎಂಪಿ ಅಧಿಕಾರಿಗಳು ಪ್ರಭಾವಿಗಳ ಒಡೆತನದ ಒತ್ತುವರಿ, ಕಟ್ಟಡಗಳನ್ನು ಮುಟ್ಟಲು ಮುಂದಾಗಿಲ್ಲ ಎನ್ನಲಾಗಿದೆ.

ಲ್ಯಾಂಡ್‌ಮಾರ್ಕ್ ಅಪಾರ್ಟ್ಮೆಂಟ್ ಒತ್ತುವರಿ ತೆರವು
ಇದರ ಜತೆಗೆ ಮಹದೇವಪುರದಲ್ಲಿ ಸರ್ವೇ ಮತ್ತು ತೆರವು ಕಾರ್ಯಾಚರಣೆ ಮುಂದುವರಿದೆ. ವಾಗ್ದೇವಿ ಸ್ಕೂಲ್ ಮುಂಭಾಗ ಸೇರಿದಂತೆ ಹಲವೆಡೆ ರಾಜಕಾಲುವೆ ಸೀಲಿಂಗ್ ಮತ್ತು ಶಾಂತಿನಿಕೇತನ ಬಡಾವಣೆಯಲ್ಲಿ ರಾಜಕಾಲುವೆಗೆ ನಿರ್ಮಿಸಿದ್ದ ತಡೆಗೋಡೆ ತೆರವು ಮಾಡಲಾಗಿದೆ.
ಯಲಹಂಕದಲ್ಲಿರುವ ಲ್ಯಾಂಡ್‌ಮಾರ್ಕ್ ಅಪಾರ್ಟ್ಮೆಂಟ್ ಒತ್ತುವರಿ ತೆರವು ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಬಿಬಿಎಂಪಿ ಅಧಿಕಾರಿಗಳು ಅರ್ಧದಷ್ಟು ತೆರವು ಮಾಡಲಾಗಿತ್ತು. ಸಿಂಗಾಪುರ ಕೆರೆಯಿಂದ ಅಬ್ಬಿಗೆರೆ ಸಂಪರ್ಕಿಸುವ ಪ್ರದೇಶದಲ್ಲಿ ತೆರವು ಕಾರ್ಯ ಮುಂದುವರಿದಿದ್ದು, ಅಧಿಕಾರಿಗಳು ತೂಬುಗಾಲುವೆ ಒತ್ತುವರಿ ತೆರವು ಮಾಡಿದ್ದಾರೆ.

ಟಿ.ದಾಸರಹಳ್ಳಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಾರ್ಯಾಚರಣೆ
ಮಹದೇವಪುರ, ಯಲಹಂಕ ಜತೆ ಜತೆಗೆ ಶುಕ್ರವಾರ ಟಿ.ದಾಸರಹಳ್ಳಿ ವಲಯ ವ್ಯಾಪ್ತಿಯ ನೆಲಗದರನಹಳ್ಳಿ ಮತ್ತು ರುಕ್ಮಿಣಿ ನಗರ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯ ನಡೆದಿದೆ. ವಲಯ ಜಂಟಿ ಆಯುಕ್ತ ಜಗದೀಶ್ ಅವರು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ಇಲ್ಲಿನ ರಾಜಕಾಲುವೆ ಮೇಲೆ ದೊಡ್ಡೇಗೌಡ ಎಂಬುವವರು ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಚಂದ್ರಶೇಖರ್ ಎಂಬುವವರಿಂದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಅಧಿಕಾರಿಗಳು ಒತ್ತುವರಿಗೆ ಬಂದಾಗಿ ಮನೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಒಂದು ಖಾಲಿ ನಿವೇಶನ ಸೇರಿ ಒಟ್ಟು ಹತ್ತು ಮನೆಗಳಿಂದ ಆಗಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದೆ.












Click it and Unblock the Notifications