ಸೆಪ್ಟೆಂಬರ್‌ನಿಂದ ಮಾಗಡಿ ರಸ್ತೆ-ಮೈಸೂರು ರಸ್ತೆ ಮೆಟ್ರೋ ಸಂಚಾರ
ಬೆಂಗಳೂರು, ಆ.27 : ಮಾಗಡಿ ರಸ್ತೆ-ನಾಯಂಡಹಳ್ಳಿ ಜಂಕ್ಷನ್ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಮಾರ್ಗದಲ್ಲಿ ರೈಲು ಸುರಕ್ಷತಾ ಆಯುಕ್ತರು ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಮಾರ್ಗ ಜನರ ಸಂಚಾರಕ್ಕೆ ಮುಕ್ತವಾಗುವುದು ಖಾತ್ರಿಯಾಗಿದೆ.
ಆ.26ರ ಬುಧವಾರದಿಂದ ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ರೈಲು ಸುರಕ್ಷತಾ ಆಯುಕ್ತರು (ಎಂಸಿಆರ್‌ಎಸ್) ಪರಿಶೀಲನೆ ಕಾರ್ಯ ಆರಂಭಿಸಿದ್ದಾರೆ. ಮೂರು ದಿನಗಳ ಕಾಲ ಆಯುಕ್ತರು ಪರಿಶೀಲನೆ ನಡೆಸಲಿದ್ದು, ನಂತರ ಸಾರ್ವಜನಿಕ ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ. [ಮಾಗಡಿ ರಸ್ತೆ-ಮೈಸೂರು ರಸ್ತೆ ಮೆಟ್ರೋ ರೈಲು ಸಂಚಾರಕ್ಕೆ ಸಿದ್ಧ]

ಮಾರ್ಗದಲ್ಲಿನ ಸುರಕ್ಷತೆ ಬಗ್ಗೆ ವಿವಿಧ ಅಂಶಗಳ ಕುರಿತು ಪರಿಶೀಲನೆ ನಡೆಸುವ ಆಯುಕ್ತರು ಒಂದು ಅಥವ ಎರಡು ವಾರದಲ್ಲಿ ಸುರಕ್ಷತಾ ಪತ್ರವನ್ನು ನೀಡಲಿದ್ದಾರೆ. ಸುರಕ್ಷತಾ ಪತ್ರ ಸಿಕ್ಕರೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಸಿಕ್ಕಿದಂತೆಯೇ. ನಂತರ ಸರ್ಕಾರ ಉದ್ಘಾಟನೆ ದಿನಾಂಕ ನಿಗದಿಪಡಿಸಲಿದೆ. [ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]
6 ನಿಲ್ದಾಣಗಳಿವೆ : ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಮೈಸೂರು ರಸ್ತೆ ನಿಲ್ದಾಣಗಳಿವೆ.

ಈಗಾಗಲೇ ನಮ್ಮ ಮೆಟ್ರೋ ರೈಲು ಎಂ.ಜಿ.ರಸ್ತೆ ಬೈಯಪ್ಪನಹಳ್ಳಿ ಮತ್ತು ಸಂಪಿಗೆ ರಸ್ತೆ ನಾಗಸಂದ್ರ ನಡುವೆ ಸಂಚಾರ ನಡೆಸುತ್ತಿದೆ. ಈ ಮಾರ್ಗದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದರೆ ಮೊದಲ ಹಂತದ ಮೆಟ್ರೋ ಯೋಜನೆಯ ಮೂರನೇ ಮಾರ್ಗ ಉದ್ಘಾಟನೆಯಾದಂತಾಗುತ್ತದೆ.












Click it and Unblock the Notifications