ಮಸೀದಿ ಮುಂದೆಯೇ ಮಾರಮ್ಮನ ಜಾತ್ರೆ: ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
ಬೆಂಗಳೂರು, ಮೇ. 10: ರಾಜ್ಯದೆಲ್ಲೆಡೆ ಅಜಾನ್ vs ಪ್ರಾರ್ಥನೆ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳು ಕೋಮು ಸಾಮರಸ್ಯ ಕದಡುವ ವಾತಾವರಣ ನಿರ್ಮಿಸುತ್ತಿವೆ. ಇದಕ್ಕೆ ಮೀರಿ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಂಡಹಳ್ಳಿಯಲ್ಲಿ ಮಾರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಮಸೀದಿ ಮುಂದೆ ಆಚರಿಸಿ ಹಿಂದೂ ಮತ್ತು ಮಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸಿದ್ದಾರೆ. ಹಿಂದೂ ದೇವಿ ಜಾತ್ರೆಯಲ್ಲಿ ಮುಸ್ಲಿಂಮರು ಕುಣಿದು ಕುಪ್ಪಳಿಸಿ ಸಹೋದರತ್ವ ಮೆರೆದಿದ್ದಾರೆ.

ಮುಸ್ಲಿಂ ಸಮುದಾಯದವರೂ ಭಾಗಿ
ಮಸೀದಿ ಮುಂದೆ ಹಿಂದೂ ದೇವರು ಬಂದ ವೇಳೆ ಮುಸ್ಲಿಂ ಸಮುದಾಯದವರು ಭಾಗಿಯಾಗಿದ್ದಾರೆ. ಜಾತ್ರೆಯಲ್ಲಿ ಪಾಲ್ಗೊಂಡ ಮಂದಿಗೆ ಕೂಲ್ ಡ್ರಿಂಕ್ಸ್ ಕೊಟ್ಟು ಮುಸ್ಲಿಂ ಬಾಂಧವರು ಸತ್ಕರಿಸಿದ್ದಾರೆ. ಹಿಂದೂ ಬಾಂಧವರು ಸಹ ಮಾರಮ್ಮ ದೇವಿಯ ಪೂಜೆ ಪ್ರಸಾದವನ್ನು ಮುಸ್ಲಿಂ ಬಾಂಧವರಿಗೆ ನೀಡಿದ್ದಾರೆ. ರಾಜ್ಯದೆಲ್ಲೆಡೆ ಕೋಮು ಸಾಮರಸ್ಯ ಕದಡುವ ಬೆಳವಣಿಗೆ ಆಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಮುಸ್ಲಿಂಮರು ಬಾಂಧವ್ಯ ಗಟ್ಟಿಗೊಳಿಸುವ ಸಣ್ಣ ಪ್ರಯತ್ನಕ್ಕೆ ಸಾಕ್ಷಿಯಾದರು.

ಗಂಗೊಂಡನಹಳ್ಳಿಯಲ್ಲಿ ಮಾರಮ್ಮ ಜಾತ್ರೆ
ಪ್ರತಿ ವರ್ಷವೂ ಚಂದ್ರಾ ಬಡಾವಣೆಯ ಗಂಗೊಂಡನಹಳ್ಳಿಯಲ್ಲಿ ಮಾರಮ್ಮ ಜಾತ್ರಾ ಮಹೋತ್ಸವ ನಡೆಯುತ್ತದೆ. ಮಾರಮ್ಮ ದೇವಿಯನ್ನು ಮೆರವಣಿಗೆ ಮಾಡಲಾಗುತ್ತದೆ. ಕೊರೊನಾ ಪರಿಣಾಮ ಕಳೆದ ಎರಡು ವರ್ಷದಿಂದ ಜಾತ್ರೆ ನಡೆಯುತ್ತಿರಲಿಲ್ಲ. ಈ ವರ್ಷ ಅದ್ಧೂರಿ ಜಾತ್ರ ಮಹೋತ್ಸವ ಆಯೋಜಿಸಲಾಗಿತ್ತು. ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದರಲ್ಲೂ ರಾಜ್ಯದಲ್ಲಿ ಅಜಾನ್ ಮತ್ತು ಪ್ರಾರ್ಥನೆ ನಡುವಿನ ದೊಡ್ಡ ವಿವಾದ ನಡೆಯುತ್ತಿರುವುದರಿಂದ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೋಮು ಜಗಳದ ಮಧ್ಯೆ ಸಾಮರಸ್ಯದ ನಡೆ
ಕಳೆದ ಮೂರು ತಿಂಗಳಿನಿಂದಲೂ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಕದಡುವ ಬೆಳವಣಿಗಳು ನಡೆಯುತ್ತಿವೆ. ಹಿಜಾಬ್ ನಿಂದ ಆರಂಭದಿಂದ ಮೊದಲಗೊಂಡ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ನಿನ್ನೆ ಸಹ ಹಿಂದೂಪರ ಸಂಘಟನೆಗಳು ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆಯಬೇಕು. ಅಜಾನ್ ನಿಲ್ಲಿಸಬೇಕು. ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಹಿಂದೂ ದೇವಾಲಯಗಳಲ್ಲಿ ಧ್ವನಿ ವರ್ಧಕ ಹಾಕಿ ಪ್ರಾರ್ಥನೆಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮೊದಲು ಯುಗಾದಿ ವೇಳೆ ಹಲಾಲ್ ಕಟ್ ವಿರುದ್ಧ ಜಟ್ಕಾ ಕಟ್ ಎಂಬ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇಂತಹ ಕೆಟ್ಟ ಪರಿಸ್ಥಿತಿ ನಡುವೆ ಹಿಂದೂ ಮುಸ್ಲಿಂ ಮಾತನಾಡುವುದೇ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಸೀದಿ ಬಳಿ ನಿಲ್ಲಿಸಿ ಪೂಜೆ
ಇಂತಹ ಸಂದರ್ಭದಲ್ಲಿ ಚಂದ್ರಾ ಬಡಾವಣೆಯ ಗಂಗೊಂಡನಹಳ್ಳಿ ಮಾರಮ್ಮನ ಜಾತ್ರೆ ಹಿಂದೂ ಮಸ್ಲಿಂ ನಡುವೆ ಸಾಮರಸ್ಯ ಬೆಸೆಯಲು ನಾಂದ ಹಾಡಿದೆ. ಬೆಳಗ್ಗೆ ಮಾರಮ್ಮನ ಮೆರವಣಿಗೆ ಹೋದ ವೇಳೆ ಮಸೀದಿ ಬಳಿ ನಿಲ್ಲಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯಗಳನ್ನು ಮುಸ್ಲಿಂ ಬಾಂದವರು ಹಂಚಿದ್ದಾರೆ. ಹಿಂದೂಗಳು ತಂಪು ಪಾನೀಯ ಕುಡಿದು ಜಾತ್ರಾ ಮಹೋತ್ಸವ ಸಂಭ್ರಮಿಸುತ್ತಿದ್ದರು. ಅಂತೂ ಮೂರು ತಿಂಗಳಿನಿಂದ ನಡೆಯುತ್ತಿರುವ ಕೋಮು ಸಾಮರಸ್ಯ ಕದಡುವ ಪ್ರಯತ್ನ ನಾಚುವಂತೆ ಸಾಮರಸ್ಯ ಬೆಸಯುವ ಘಟನೆಗೆ ಗಂಗೊಂಡನಹಳ್ಳಿ ಮಾರಮ್ಮ ದೇವಿ ಜಾತ್ರೆ ಮಹೋತ್ಸವ ಸಾಕ್ಷಿ ಆಯಿತು.












Click it and Unblock the Notifications