Darshan: ಶೆಡ್‌ನಲ್ಲಿ ಸ್ಥಳ ಮಹಜರು, ಪೊಲೀಸರ ಮುಂದೆ ಕೈ ಕಟ್ಟಿ ನಿಂತ ದರ್ಶನ್
ಬೆಂಗಳೂರು, ಜೂನ್ 12; ಬೆಂಗಳೂರು ನಗರ ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಹತ್ಯೆ ನಡೆದ ಸ್ಥಳಕ್ಕೆ ಸ್ಥಳ ಮಹಜರು ಮಾಡಲು ಕರೆದುಕೊಂಡಿ ಬಂದಿದ್ದಾರೆ.
ಬುಧವಾರ ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು 2ನೇ ಬಾರಿಗೆ ಸ್ಥಳ ಮಹಜರು ಮಾಡುತ್ತಿದ್ದಾರೆ. ಬೆಳಗ್ಗೆ ದರ್ಶನ್, ಪವಿತ್ರಾ ಗೌಡ ಹೊರತುಪಡಿಸಿ ಇತರ ಆರೋಪಿಗಳನ್ನು ರೇಣುಕಾಸ್ವಾಮಿ ಶವ ಎಸೆದಿದ್ದ ಸುಮನಹಳ್ಳಿ ಸಮೀಪದ ಅನುಗ್ರಹ ಅಪಾರ್ಟ್‌ಮೆಂಟ್ ಬಳಿಯ ಮೋರಿಯ ಬಳಿ ಸ್ಥಳ ಮಹಜರು ನಡೆಸಲಾಗಿತ್ತು.

ಮಧ್ಯಾಹ್ನ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ, ಕೂಡಿ ಹಾಕಿ ಹಲ್ಲೆ, ಹತ್ಯೆ ಮಾಡಿದ ಕಾಮಾಕ್ಷಿಪಾಳ್ಯದ ಶೆಡ್‌ನಲ್ಲಿ ಸ್ಥಳ ಮಹಜರು ಮಾಡಲಾಗುತ್ತಿದೆ. ಇದಕ್ಕಾಗಿ 4 ವಾಹನಗಳಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಕೈ ಕಟ್ಟಿ ನಿಂತಿರುವ ದರ್ಶನ್: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪಟ್ಟಣಗೆರೆ ವಿನಯ್‌ಗೆ ಸೇರಿದ ಶೆಡ್‌ಗೆ ಮಧ್ಯಾಹ್ನ ಬಿಗಿ ಭದ್ರತೆಯಲ್ಲಿ ದರ್ಶನ್ ಸೇರಿ ಇತರ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಪೊಲೀಸರು ಕರೆದುಕೊಂಡು ಬಂದರು.
ಪೊಲೀಸರು ಸ್ಥಳ ಮಹಜರು ಮಾಡುವಾಗ ಆರೋಪಿ ದರ್ಶನ್ ಪೊಲೀಸರ ಮುಂದೆ ಕೈ ಕಟ್ಟಿ ನಿಂತಿದ್ದರು. ಎಲ್ಲಿ ರೇಣುಕಾಸ್ವಾಮಿ ಕೂಡಿ ಹಾಕಲಾಗಿತ್ತು?. ಹಲ್ಲೆಗೆ ಬಳಕೆ ಮಾಡಿದ ಆಯುಧಗಳು ಎಲ್ಲಿ?, ಶವವನ್ನು ಎಲ್ಲಿಂದ, ಹೇಗೆ ಸಾಗಣೆ ಮಾಡಲಾಯಿತು? ಹೀಗೆ ವಿವಿಧ ಆಯಾಮಗಳಲ್ಲಿ ಸ್ಥಳ ಮಹಜರು ನಡೆಸಲಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಗೆ ಸ್ಥಳ ಮಹಜರು ಅತ್ಯಂತ ಪ್ರಮುಖವಾದ ಸಾಕ್ಷ್ಯವಾಗಲಿದೆ. ಮಂಗಳವಾರವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ಶೆಡ್ ಸೀಜ್ ಮಾಡಿದ್ದರು. ಇಂದು ಬೆಳಗ್ಗೆಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಅಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೂಲೆ ಮಾಡಿದ ಬಳಿಕ ಸ್ಕಾರ್ಫಿಯೋ ಕಾರಿನಲ್ಲಿ ಶವವನ್ನು ಸಾಗಣೆ ಮಾಡಿ ಮೋರಿಗೆ ಎಸೆಯಲಾಗಿದೆ ಎಂಬುದು ಆರೋಪವಾಗಿದೆ. ಇಂದು ಬೆಳಗ್ಗೆ ಕೃತ್ಯಕ್ಕೆ ಬಳಕೆ ಮಾಡಿದ್ದ ಸ್ಕಾರ್ಫಿಯೋ ಕಾರು, ನಟ ದರ್ಶನ್ ಅವರ ಜೀಪ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂನ್ 8ರ ಶನಿವಾರ ಬೆಳಗ್ಗೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಅಪಹರಿಸಲಾಗಿತ್ತು. ಬಳಿಕ ಆತನನ್ನು ಮಧ್ಯಾಹ್ನದ ವೇಳೆಗೆ ಪಟ್ಟಣಗೆರೆ ವಿನಯ್‌ಗೆ ಸೇರಿದ ಶೆಡ್‌ಗೆ ಕರೆದುಕೊಂಡು ಬಂದು ಹಲ್ಲೆ ನಡೆಸಲಾಗಿದೆ. ಬಳಿಕ ಅಲ್ಲಿಗೆ ದರ್ಶನ್, ಪವಿತ್ರಾ ಗೌಡ ಆಗಮಿಸಿದ್ದಾರೆ. ತಡ ರಾತ್ರಿ ತನಕ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂಬುದು ಆರೋಪವಾಗಿದೆ.
ಚಿತ್ರದುರ್ಗದಲ್ಲಿ ದರ್ಶನ್ ಅಭಿಮಾನಿಗಳ ಸಂಘ ಕಟ್ಟಿಕೊಂಡಿರುವ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರು ನಗರಕ್ಕೆ ಅಪಹರಿಸಿಕೊಂಡು ಬರಲಾಗಿದೆ ಎಂಬುದು ಆರೋಪ. ಆದ್ದರಿಂದ ಪೊಲೀಸರು ಮುಂದಿನ ಹಂತದಲ್ಲಿ ಚಿತ್ರದುರ್ಗಕ್ಕೆ ಆರೋಪಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಎಲ್ಲಾ 13 ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ದರ್ಶನ್ ಸೇರಿ 12 ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿದ್ದಾರೆ. ಪವಿತ್ರಾ ಗೌಡರನ್ನು ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಇಂದು ಪುನಃ ಠಾಣೆಗೆ ವಿಚಾರಣೆಗಾಗಿ ವಾಪಸ್ ಕರೆದುಕೊಂಡು ಬರಲಾಗಿದೆ.












Click it and Unblock the Notifications