ಸಾರಕ್ಕಿ ಕೆರೆ ಅಭಿವೃದ್ದಿಗೆ ಇನ್ನೂ 10 ಕೋಟಿ ರೂಪಾಯಿಗಳ ಅನುದಾನ ಅಗತ್ಯ: ಶಾಸಕ ಸತೀಶ್ ರೆಡ್ಡಿ
ಬೆಂಗಳೂರು ಜನವರಿ 24: 9 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿಯಾಗುತ್ತಿರುವ ಸಾರಕ್ಕಿ ಕೆರೆಗೆ ಇನ್ನೂ 10 ಕೋಟಿ ರೂಪಾಯಿಗಳ ಹೆಚ್ಚಿನ ಅನುದಾನವನ್ನು ಕೇಳಲಾಗಿದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ಜೆಪಿ ನಗರದ ಸಾರಕ್ಕಿ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಪಿ ನಗರದ ಹೃದಯ ಭಾಗದಲ್ಲಿರುವ ಸಾರಕ್ಕಿ ಕೆರೆ ಒತ್ತುವರಿ ಹಾಗೂ ಕಲುಷಿತ ನೀರಿನಿಂದ ತನ್ನ ಸೌಂದರ್ಯವನ್ನು ಕಳೆದುಕೊಂಡಿತ್ತು.
ಈ ಭಾಗದ ಜನತೆಗೆ ಒಳ್ಳೆಯ ಪರಿಸರ ನೀಡುವುದು ಹಾಗೂ ಅಂತರ್ಜಲ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ 9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕೊಳಚೆ ನೀರಿನಿಂದ ತುಂಬಿದ್ದ ಕೆರೆಯನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಕೊಳಚೆ ನೀರು ಕೆರೆಗೆ ಹರಿದು ಬರುವುದನ್ನು ಸಂಪೂರ್ಣ ನಿಯಂತ್ರಿಸಲಾಗಿದೆ.

ಅಲ್ಲದೆ, ಮುಂದಿನ ದಿನಗಳಲ್ಲಿ ಮಳೆ ನೀರು ಕೆರೆಗೆ ಹರಿದು ಬರುವಂತಹ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾಮಗಾರಿಗಳು ಕಳೆದ ಒಂದು ವರ್ಷದಿಂದ ನಡೆಯುತ್ತಿವೆ. ಈ ಕಾಮಗಾರಿಗಳು ಇನ್ನು 2 ತಿಂಗಳಲ್ಲಿ ಮುಗಿಯಬೇಕಾಗಿದೆ. ಅದಕ್ಕಾಗಿ 10 ಕೋಟಿ ರೂಪಾಯಿಗಳ ಹೆಚ್ಚಿನ ಅನುದಾನದ ಕೋರಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ಪರಿವೀಕ್ಷಣೆಯಲ್ಲಿ ಬೊಮ್ಮನಹಳ್ಳಿ ವಾರ್ಡ್ ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್, ಜರಗನಹಳ್ಳಿ ವಾರ್ಡ್ ಬಿಬಿಎಂಪಿ ಸದಸ್ಯೆ ಬಿ ಎಂ ಶೋಭಾ ಮುನಿರಾಮ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications