ಕೋರಮಂಗಲ ಬಾರ್ ಲಿಫ್ಟ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನ ಇಂದಿರಾನಗರದಲ್ಲಿರುವ ಕ್ಲಬ್‌ನಲ್ಲಿ ಪಾರ್ಟಿ ಮುಗಿಸಿ ಹಿಂದಿರುಗುತ್ತಿರುವಾಗ ಲಿಫ್ಟ್‌ನಲ್ಲಿ ಯುವತಿ ಮೇಲೆ ಕೆಲ ಯುವಕರು ಅನುಚಿತವಾಗಿ ವರ್ತಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಇದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಕೋರಮಂಗಲದ 7 ನೇ ಬ್ಲಾಕ್‌ನಲ್ಲಿರುವ ಸೋಶಿಯಲ್ ಬಾರ್‌ನಲ್ಲಿ ರಾತ್ರಿ ಸುಮಾರಿಗೆ 12.30ರ ವೇಳೆ ಈ ಘಟನೆ ನಡೆದಿದೆ. ಇಬ್ಬರು ಯುವತಿಯರು ತಮ್ಮ ಸ್ನೇಹಿತರ ಜತೆ ಪಾರ್ಟಿಗೆ ಹೋಗಿದ್ದರು.
ರಾತ್ರಿ 12.30ರ ವೇಳೆ ಪಾರ್ಟಿ ಮುಗಿಸಿ ಬಾರ್‌ನಿಂದ ಹೊರಬರುವಾಗ ಜೊತೆಗಿದ್ದ ಯುವಕರು ಮೆಟ್ಟಿಲು ಮೂಲಕ ನಡೆದುಕೊಂಡು ಹೋಗುವುದಾಗಿ ಹೇಳಿದ್ದರು. ಹೀಗಾಗಿ ಯುವತಿಯರು ಮಾತ್ರ ಲಿಫ್ಟ್‌ನಲ್ಲಿ ಬಂದಿದ್ದರು. ಹೋಗುವಾಗ ದಿಢೀರ್ ಎಂದು ಅಪರಿಚಿತ ಇಬ್ಬರು ಯುವಕರು ಲಿಫ್ಟ್ ಒಳಗೆ ಹೋಗಿದ್ದಾರೆ.

ಲಿಫ್ಟ್ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರತಿರೋಧ ತೋರಿದಾಗ ಗಲಾಟೆ ಮಾಡಿದ್ದಾರೆ. ಲಿಫ್ಟ್‌ನಿಂದ ಹೊರ ಬಂದ ನಂತರ ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ. ಅವರು ಪ್ರಶ್ನೆ ಮಾಡಲು ತೆರಳಿದಾಗ ಅವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications