ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮೊಹಮ್ಮದ್ ನಲಪಾಡ್
ಬೆಂಗಳೂರು, ಮಾರ್ಚ್ 05 : ಮೊಹಮ್ಮದ್ ನಲಪಾಡ್ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.63ನೇ ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಮೊಹಮ್ಮದ್ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಫೆ.17ರಂದು ಮೊಹಮ್ಮದ್ ನಲಪಾಡ್ ಬೆಂಗಳೂರಿನ ಯು.ಬಿ.ಸಿಟಿಯಲ್ಲಿನ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದ್ದು, ಕೊಲೆ ಯತ್ನದ ಪ್ರಕರಣದ ದಾಖಲಾಗಿದೆ.
ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿತ್ತು. ಅಧೀನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೊಹಮ್ಮದ್ ನಲಪಾಡ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಕೀಲರ ಮೂಲಕ ಸೋಮವಾರ ಬೆಳಗ್ಗೆ ಹೈಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮೊಹಮ್ಮದ್ ನಲಪಾಡ್ ಸೇರಿದಂತೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮಾರ್ಚ್ 7ಕ್ಕೆ ಕೊನೆಗೊಳ್ಳಲಿದೆ.
ಸೆಷನ್ಸ್ ಕೋರ್ಟ್‌ನಲ್ಲಿ ಮೊಹಮ್ಮದ್ ನಲಪಾಡ್ ಪರವಾಗಿ ಟಾಮಿ ಸೆಬಾಸ್ಟಿಯನ್ ವಾದ ಮಂಡನೆ ಮಾಡಿದ್ದರು. ಹೈಕೋರ್ಟ್‌ನಲ್ಲಿ ಬೇರೆ ವಕೀಲರು ವಾದ ಮಂಡನೆ ಮಾಡುವ ಸಾಧ್ಯತೆ ಇದೆ.
ಮತ್ತೊಂದು ಕಡೆ ಫೆ.17ರಿಂದ ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್ ಲೋಕನಾಥ್ ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಡಿಸ್ ಚಾರ್ಜ್ ಆಗಿದ್ದಾರೆ.












Click it and Unblock the Notifications