Jewellery Park: ಬೆಂಗಳೂರಲ್ಲಿ 50 ಎಕರೆಯಲ್ಲಿ 'ಮೆಗಾ ಜ್ಯುವೆಲ್ಲರಿ ಪಾರ್ಕ್'
ಬೆಂಗಳೂರು, ಫೆಬ್ರವರಿ 04: ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ 2025 ಮುಂದಿನ ವಾರ ನಡೆಯಲಿದೆ. ಈಗಾಗಲೇ ಅನೇಕ ಕೈಗಾರಿಕೆಗಳೂ, ಬಂಡವಾಳ ಹೂಡಿಕೆದಾರರನ್ನು ಸೆಳೆಯುತ್ತಿರುವ ಬೆಂಗಳೂರು ಭವಿಷ್ಯದಲ್ಲಿ ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪನೆಗೆ ಸಾಕ್ಷಿಯಾಗಲಿದೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೆಗಾ ಜ್ಯುವೆಲರಿ ಪಾರ್ಕ್ ಸ್ಥಾಪಿಸುವುದಾಗಿ ಜೆಡಿಎಸ್ ನಾಯಕ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಮಹತ್ವದ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆದಿನಾರಾಯಣ ಹೊಸಹಳ್ಳಿಯ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮೆಗಾ ಜ್ಯೂವೆಲರಿ ಪಾರ್ಕ್ ಸ್ಥಾಪಿಸಲಾಗುವುದು. ಇದಕ್ಕಾಗಿ ಸರ್ಕಾರ ರಿಯಾಯಿತಿ ದರದಲ್ಲಿ 50 ಎಕರೆ ಭೂಮಿಯನ್ನು ಒದಗಿಸುವಂತೆ ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರಿಗೆ ಬಳಿ ಟಿ.ಎ. ಶರವಣ ಅವರು ಮನವಿ ಮಾಡಿದ್ದಾರೆ. ಸರ್ಕಾರಕ್ಕೆ ಲಿಖಿತವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಲಕ್ಷಾಂತರ ಜನ ಚಿನ್ನ-ಬೆಳ್ಳಿ ಕೆಲಸದಲ್ಲಿ ನಿರತರಾಗಿದ್ದಾರೆ. ಈ ವಲಯದಿಂದ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂದಾಯವಾಗುತ್ತಿದೆ. ಆದರೆ ಇದುವರೆಗೂ ಜ್ಯುವೆಲರಿ ಪಾರ್ಕ್ ಸ್ಥಾಪಿಸದೆ ಇರುವುದರಿಂದ ಹಿನ್ನಡೆಯಾಗಿದೆ ಎಂದು ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಜ್ಯುವೆಲರಿ ಪಾರ್ಕ್ ಸ್ಥಾಪನೆಗೆಯ ಅಗತ್ಯತೆ ಕುರಿತು ಒತ್ತಿ ಹೇಳಿದ್ದಾರೆ.
ರೂ.495 ಕೋಟಿ ಹೂಡಿಕೆ, 10000 ಉದ್ಯೋಗ ಸೃಷ್ಟಿ
ಮೆಗಾ ಜ್ಯುವೆಲರಿ ಪಾರ್ಕ್ ಸ್ಥಾಪಿಸಿದರೆ ಅದಕ್ಕೆ 495 ಕೋಟಿ ರೂಪಾಯಿ ಹೂಡಿಕೆ ಆಗಲಿದೆ. 10 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಆದ್ದರಿಂದ ಎರಡು ವರ್ಷಗಳ ಹಿಂದೆಯೇ ಬಜೆಟ್‌ನಲ್ಲಿ ಘೊಷಣೆ ಆಗಿರುವ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಮನವಿಗೆ ಸಚಿವ ಸಕಾರಾತ್ಮಕ ಸ್ಪಂದನೆ
ಟಿ.ಎ.ಶರವಣ ಅವರಿಂದ ಮನವಿ ಸ್ವೀಕರಿಸಿದ ರಾಜ್ಯ ಸಚಿವ ಎಂಬಿ ಪಾಟೀಲ ಅವರು, ಜ್ಯುವೆಲರಿ ಪಾರ್ಕ್ ಸ್ಥಾಪನೆ ಯೋಜನೆಯ ಅನುಷ್ಠಾನ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸರ್ಕಾರ ಪರಿಶೀಲಿಸಿ ಒಪ್ಪಿಗೆ ನೀಡಿದ್ದೇ ಆದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶಾಲ ಪ್ರದೇಶದಲ್ಲಿ ಮತ್ತು ಬಹುಕೋಟಿ ವೆಚ್ಚದಲ್ಲಿ ಮಗಾ ಜ್ಯುವೆಲರಿ ಪಾರ್ಕ್ ತಲೆಎತ್ತಲಿದೆ.
ಈ ಹಿಂದೆ 2022ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂದಿನ ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನಲ್ಲಿ ಮೆಗಾ ಜ್ಯುವೆಲರಿ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದ್ದರು. ಸರ್ಕಾರದಿಂದಲೇ ಇದನ್ನು ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದರು.












Click it and Unblock the Notifications