MLC Nomination: ವಿಧಾನಪರಿಷತ್ ನಾಮನಿರ್ದೇಶನ: ಈ ಮೂವರ ಹೆಸರು ಅಂತಿಮ!
ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು ಬಣ ರಾಜಕೀಯ ಶುರುವಾಗಿದೆ. ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಪಕ್ಷಗಳ ನಾಯಕರಲ್ಲಿ ಆತಂಕ ಮೂಡಿಸಿದೆಯಾದರೂ, ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ ಆತ್ಮವಿಶ್ವಾಸದಲ್ಲಿವೆ. ಇದೆಲ್ಲದರ ನಡುವೆ ವಿಧಾನಪರಿಷತ್ ನಾಮನಿರ್ದೇಶನ ವಿಚಾರದಲ್ಲಿ ಕೂಡ ಮತ್ತಷ್ಟು ಅಸಮಾಧಾನ ಸ್ಫೋಟವಾಗುವ ಸಾಧ್ಯತೆ ಇದೆ.
ಸಿಎಂ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ನಾಮನಿರ್ದೇಶನಕ್ಕಾಗಿ ಮೂವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಉಮಾಶ್ರೀ, ಎಂ ಆರ್ ಸೀತಾರಾಂ ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ ಹೆಸರುಗಳನ್ನು ಅಂತಿಮಗೊಳಿಸಿದ್ದು ಸೋಮವಾರ ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದಾರೆ.

ವಿಧಾನಪರಿಷತ್ ಸದಸ್ಯ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಮಗೆ ಸಚಿವ ಸ್ಥಾನ ಕೈತಪ್ಪಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ವಿಧಾನಪರಿಷತ್ ನಾಮನಿರ್ದೇಶನ ವಿಚಾರದಲ್ಲಿ ಕೂಡ ಮತ್ತಷ್ಟು ನಾಯಕರ ಅಸಮಾಧಾನ ಸ್ಫೋಟವಾಗುವ ಆತಂಕ ಶುರುವಾಗಿದೆ.
ಒಕ್ಕಲಿಗರು ಸೇರಿ ಪ್ರಮುಖ ಸಮುದಾಯಗಳ ನಾಯಕರಿಗೆ ಪರಿಷತ್ ಸ್ಥಾನ ನೀಡಲು ಲಾಬಿ ಶುರುವಾಗಿದೆ. ಇದೇ ವಿಚಾರ ಇಟ್ಟುಕೊಂಡು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವ ತಂತ್ರ ಕೂಡ ಅನುಸರಿಸಲಾಗುತ್ತಿದೆ. ಉಮಾಶ್ರೀ, ಸೀತಾರಾಂ ಪರವಾಗಿ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದರೆ, ಸುಧಾಮ್ ದಾಸ ಪರ ಡಿ.ಕೆ. ಬ್ರದರ್ಸ್ ನಿಂತಿದ್ದು ಬಹುತೇಕ ಈ ಮೂವರ ಹೆಸರು ಅಂತಿಮವಾಗಲಿದೆ.
ಸೋಮವಾರ ರಾಜ್ಯಪಾಲರ ಭೇಟಿ
ಸಿಎಂ ಸಿದ್ದರಾಮಯ್ಯ ಅವರು ಆಗಸ್ಟ್ 7 (ಸೋಮವಾರ) ರಾಜ್ಯಪಾಲರನ್ನು ಭೇಟಿಯಾಗಿ ನಾಮನಿರ್ದೇಶಿತರ ಹೆಸರು ತಿಳಿಸುವುದು ಬಹಿತೇಕ ಖಚಿತವಾಗಿದೆ. ಸುಧಾಮ್ ದಾಸ್ ಅವರ ಹೆಸರು ಅಂತಿಮಗೊಳಿಸಿರುವುದು ಕಾಂಗ್ರೆಸ್ ನಾಯಕರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಲವು ನಾಯಕರು ಸುಧಾನ್ ದಾಸ್ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು ಹಿರಿಯ ನಾಯಕಿ ಉಮಾಶ್ರೀ ಅವರಿಗೂ ಸ್ಥಾನ ನೀಡುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಏನೇ ಆದರೂ ಸಿಎಂ ಸಿದ್ದರಾಮಯ್ಯ ಮಾತ್ರ ಪಟ್ಟು ಬಿಡದೆ ಉಮಾಶ್ರೀ ಹಾಗೂ ಸೀತಾರಾಂ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ನಾಮನಿರ್ದೇಶಿತ ಪರಿಷತ್ ಸದಸ್ಯರ ನೇಮಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್, ರಾಜ್ಯಪಾಲರಿಗೆ ಇನ್ನೂ ಹೆಸರು ಕಳಿಸಿಲ್ಲ. ಪತ್ರಿಕೆಗಳಲ್ಲಿ ಮಾತ್ರ ಈ ಬಗ್ಗೆ ವರದಿಯಾಗಿದ್ದು ನೋಡಿದ್ದೇನೆ. ಮನ್ಸೂರ್ ಅಲಿ ಖಾನ್ ಅಥವಾ ಇನ್ಯಾರ ಹೆಸರೂ ಇನ್ನೂ ಶಿಫಾರಸ್ಸು ಮಾಡಿಲ್ಲ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಆಗಲ್ಲ, ಇಂತಹವರಿಗೆ ಎಂಎಲ್‌ಸಿ ಸ್ಥಾನ ಕೊಡಿ ಎಂದು ನಾವು ಯಾರ ಹೆಸರೂ ಹೇಳಿಲ್ಲ ಎಂದು ಹೇಳಿದರು.











Click it and Unblock the Notifications