Metro Blue Line: ನಾಗವಾರ-ಬಾಗಲೂರು ಕ್ರಾಸ್ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಸಚಿವ ಆಕ್ರೋಶ
ನಾಗವಾರ ನಿಲ್ದಾಣದಿಂದ ಬಾಗಲೂರು ಕ್ರಾಸ್ ನಿಲ್ದಾಣದವರೆಗೆ ನಡೆಯುತ್ತಿರುವ ಎರಡನೇ ಹಂತದ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಯನ್ನು ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಬೆಳ್ಳಂಬೆಳಿಗ್ಗೆ ಪರಿಶೀಲಿಸಿದ್ದಾರೆ. ಈ ಮೆಟ್ರೋ ಮಾರ್ಗದ ನಾಗವಾರ, ವೀರಣ್ಣಪಾಳ್ಯ, ಹೆಬ್ಬಾಳ, ಎಸ್ಟೀಮ್ ಮಾಲ್ ಜಂಕ್ಷನ್, ಅಲ್ಲಾಳಸಂದ್ರ, ಜಕ್ಕೂರು ಏರೋಡ್ರೋಮ್, ಬ್ಯಾಟರಾಯನಪುರ, ಕೊಡಿಗೇಹಳ್ಳಿ ಬಳಿ ಮೆಟ್ರೋ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಕೆಲವೆಡೆ ಎರಡು ವರ್ಷಗಳಾದರೂ ಮೆಟ್ರೋ ಪಿಲ್ಲರ್ ನಿರ್ಮಾಣ ಮುಗಿದಿಲ್ಲ ಎಂದು ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲೋ ನಡೆಯುವ ಮೆಟ್ರೋ ನಿರ್ಮಾಣ ಕಾಮಗಾರಿಗಾಗಿ ಇನ್ನೆಲ್ಲೋ ರಸ್ತೆ ಬ್ಲಾಕ್ ಮಾಡಿ ಜನರಿಗೆ ಏಕೆ ತೊಂದರೆ ಕೊಡುತ್ತಿದ್ದೀರಾ? ಎಂದು ಮೆಟ್ರೋ ಅಧಿಕಾರಿಗಳಿಗೆ ಚಳಿಬಿಡಿಸಿದ್ದಾರೆ. ಮೆಟ್ರೋ ಕಾಮಗಾರಿ ತ್ಯಾಜ್ಯಗಳಿಂದ ಫುಟ್‌ಪಾತ್‌ಗಳು ಹಾಗೂ ಸರ್ವೀಸ್ ರಸ್ತೆಗಳು ತುಂಬಿ ಹೋಗಿವೆ. ಫುಟ್‌ಪಾತ್ ತ್ಯಾಜ್ಯಗಳಿಂದ ತುಂಬಿರುವ ಪರಿಣಾಮ ಪಾದಾಚಾರಿಗಳು ಹಾಗೂ ವಾಹನ ಸಂಚಾರಿಗಳಿಗೆ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೂಡಲೇ ಇಲ್ಲಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ, ಜನಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಚಿವರ ಎದುರೇ ಮೆಟ್ರೋ ಅಧಿಕಾರಿಗಳು ತ್ಯಾಜ್ಯ ತೆರವುಗೊಳಿಸಿದ್ದಾರೆ. ಮೆಟ್ರೋ ಕಾಮಗಾರಿಗಾಗಿ ಅನಗತ್ಯವಾಗಿ ಹಲವು ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ಇದರ ಪರಿಣಾಮ ವಾಹನ ಸವಾರರಿಗೆ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೀಗಾಗಿ ಕೂಡಲೇ ರಸ್ತೆ ತಡೆಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೆಟ್ರೋ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ಬೆಂಗಳೂರು ಉತ್ತರ ಪಾಲಿಕೆ ಆಯುಕ್ತರಾದ ಸುನೀಲ್ ಕುಮಾರ್, ಮೆಟ್ರೋ ಮುಖ್ಯ ಇಂಜಿನಿಯರ್, ಬಿಡಬ್ಲ್ಯೂಎಸ್ಎಸ್‌ಬಿ ಹಾಗೂ ಬೆಸ್ಕಾಂ ಅಧಿಕಾರಿಗಳು ಹಾಜರಿದ್ದರು.
ಮೆಟ್ರೋ ಬ್ಲೂ ಲೈನ್ ಕುರಿತು
ಎರಡು ಹಂತಗಳಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಬ್ಲೂ ಲೈನ್ ಮಾರ್ಗವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನಕ್ಕೆ ಸಂಪರ್ಕ ಕಲ್ಪಿಸಲಿದೆ. ಹಂತ-2Aದ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಕೃಷ್ಣರಾಜಪುರದ ಮಾರ್ಗ ಹಾಗೂ ಹಂತ-2Bರ ಕೆ.ಆರ್.ಪುರದಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಹಂತ-2B ನಿರ್ಮಾಣವು ಫೆಬ್ರವರಿ 2022ರಿಂದ ಪ್ರಾರಂಭವಾಗಿದೆ. ಸುಮಾರು 58.19 ಕಿ.ಮೀ ಉದ್ದದ ಈ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ಬರುತ್ತಿದೆ.
ವಿಮಾನ ನಿಲ್ದಾಣ ಸಂಪರ್ಕವೇ ಈ ಮಾರ್ಗದ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಇದು ಹೆಚ್ಚಾಗಿ ಎತ್ತರದಲ್ಲಿಯೇ ನಿರ್ಮಾಣವಾಗುತ್ತಿದೆ. ಯಲಹಂಕ ಕ್ಯಾಂಪಸ್ ಬೆಂಗಳೂರು ಮತ್ತು ಏರ್‌ಪೋರ್ಟ್ ಸಿಟಿ, ಟರ್ಮಿನಲ್‌ರಲ್ಲಿ ಮಾತ್ರ ಸುರಂಗದಲ್ಲಿರಲಿದೆ. ಈ ಮಾರ್ಗದಲ್ಲಿ ಸುಮಾರು 30 ನಿಲ್ದಾಣಗಳಿದ್ದು, ಅದರಲ್ಲಿ 28 ನಿಲ್ದಾಣಗಳು ಎತ್ತರದಲ್ಲಿವೆ. ಈ ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಲ್ಲಿ ಹಳದಿ ಮಾರ್ಗದೊಂದಿಗೆ, ಕೆ.ಆರ್.ಪುರದಲ್ಲಿ ನೇರಳೆ ಮಾರ್ಗದೊಂದಿಗೆ, ನಾಗವಾರದಲ್ಲಿ ಪಿಂಕ್ ಮಾರ್ಗದೊಂದಿಗೆ ಮತ್ತು ಹೆಬ್ಬಾಳದಲ್ಲಿ ಪ್ರಸ್ತಾವಿತ ಕಿತ್ತಳೆ ಮಾರ್ಗದೊಂದಿಗೆ ಇಂಟರ್‌ಚೇಂಜ್ ಅನ್ನು ಹೊಂದಿರಲಿದೆ.












Click it and Unblock the Notifications