Metro Mitra: ಪ್ರಯಾಣಿಕರಿಗಾಗಿ 'ಮೆಟ್ರೋ ಮಿತ್ರ' ಆಪ್ ಸೆ.6ಕ್ಕೆ ಬಿಡುಗಡೆ, ವಿಶೇಷತೆ, ಬಳಕೆ ವಿಧಾನ ತಿಳಿಯಿರಿ
ಬೆಂಗಳೂರು, ಸೆಪ್ಟಂಬರ್ 04: ನಮ್ಮ ಮೆಟ್ರೋ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಬೆಂಗಳೂರು ಆಟೋ ರಿಕ್ಷಾ ಡ್ರವೈರ್ಸ್ ಯುನಿಯನ್ ನೀಡಿದೆ. ನಿಲ್ದಾಣದಿಂದ ಹೊರ ಬಂದ ಮೇಲೆ ಕರೆದಲ್ಲಿ ಆಟೋ ಚಾಲಕರು ನಿರ್ಲಕ್ಷಿಸುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಇಂತಹ ಸಮಸ್ಯೆ ನಿವಾರಣೆಗೆ ಆಟೋ ಯುನಿಯನ್ 'ಮೆಟ್ರೋ ಮಿತ್ರ' ಅಪ್ಲಿಕೇಷನ್ ಅನ್ನು ಸೆಪ್ಟಂಬರ್ 6 ಬುಧವಾರದಂದು ಬಿಡುಗಡೆ ಮಾಡಲಿದೆ.
ಈ 'ಮೆಟ್ರೋ ಮಿತ್ರ' ಅಪ್ಲಿಕೇಷನ್ ಮೂಲಕ ಅತ್ಯಧಿಕ ಕೊನೆಯ ಮೆಟ್ರೋ ನಿಲ್ದಾಣ/ಸ್ಥಳಗಳಿಗೂ ಸಂಪರ್ಕ ಕಲ್ಪಿಸುತ್ತವೆ. 'ನಮ್ಮ ಯಾತ್ರಿ' ಆನ್‌ಲೈನ್ ಆಟೋ ರಿಕ್ಷಾ ಬುಕಿಂಗ್ ಅಪ್ಲಿಕೇಶನ್ ಈಗಾಗಲೇ ಯಶಸ್ವಿಯಾಗಿದೆ. ಇದಾದ ಬಳಿಕ 'ಮೆಟ್ರೋ ಮಿತ್ರ' ಆಪ್ ಅನ್ನು ವಿವಿಧ ಪ್ರದೇಶಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲೆಂದೆ ರಚನೆ ಮಾಡಲಾಗಿದೆ. ಈ ಆಪ್ ಬುಧವಾರ ಲೋಕಾರ್ಪಣೆಗೊಳ್ಳುವ ಮೂಲಕ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ಪ್ರಯಾಣಿಕರು ಈ ಮೆಟ್ರೋ ಮಿತ್ರ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿಲ್ಲ. ಅದಕ್ಕೆಂದೆ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಏನಿದು 'ಮೆಟ್ರೋ ಮಿತ್ರ' ಅಪ್ಲಿಕೇಷನ್
ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ARDU) ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಹಕಾರದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ 'ಮೆಟ್ರೋ ಮಿತ್ರ' ಮೂಲಕ ಆಟೋಗಳನ್ನು ಬುಕ್ ಮಾಡಿಕೊಂಡು ಸಂಚರಿಸಲು ಅನುಕೂಲವಾಗುವಂತೆ ಈ ಅಪ್ಲಿಕೇಷನ್ ರಚಿಸಿದೆ. ಇತರ ಅಪ್ಲಿಕೇಶನ್‌ಗಳಿಗಿಂತ ಇದು ಭಿನ್ನವಾಗಿದೆ. ಇದು ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ.

ಅಪ್ಲಿಕೇಶನ್ ಅಡಿ ಸಂಚಾರ ಸೇವೆ ನೀಡಲು ನೋಂದಾಯಿತ ಆಟೋಗಳ ದರಗಳು ಸರ್ಕಾರ ನಿಗದಿಪಡಿಸಿದ ಆಟೋ ದರಗಳ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಿವೆ. ಹೀಗಾಗಿ ಇನ್ನು ಮುಂದೆ ಯಾವುದೇ ತೊಂದರೆ, ವಿಳಂಬ, ಹೆಚ್ಚಿನ ಹಣ ನೀಡದೇ ನೀವು ಮೆಟ್ರೋ ನಿಲ್ದಾಣದಿಂದ ನಿಮ್ಮ ಮನೆ, ಇನ್ನಿತರ ಸ್ಥಳಗಳಿಗೆ ತೆರಳಬಹುದಾಗಿದೆ.
ಮೆಟ್ರೋ ಮಿತ್ರ ಬಳಕೆ ಹೇಗೆ?
ನೀವು ಈ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಮೆಟ್ರೋ ನಿಲ್ದಾಣಗಳ ಹೊರಗಡೆ ಅಳವಡಿಸಲಾದ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಬೇಕು. ನೀವು ಸ್ಕ್ಯಾನ್ ಮಾಡಿದ ಕೂಡಲೇ ಅಪ್ಲಿಕೇಷನ್ ಜೊತೆ ಕೈಜೋಡಿಸಿರುವ ಆಟೋಗಳು ಮೆಟ್ರೋ ನಿಲ್ದಾಣದ ಸಮೀಪದ (ಐದು ಕಿಲೋ ಮೀಟರ್‌ವರೆಗಿನ) ಆಟೋಗಳು ಮೊಬೈಲ್ ನಲ್ಲಿ ಕಾಣಿಸುತ್ತವೆ. ಆ ಪಟ್ಟಿ ನೋಡಿಕೊಂಡು ನೀವು ಆಟೋ ಬುಕ್ ಮಾಡಿಕೊಳ್ಳಬೇಕು.
ನಂತರ ನೀವು ಬುಕ್ ಮಾಡಿದ ವೇಳೆ ಹಾಕುವ OTP ಇಲ್ಲವೇ ಪಾಸವರ್ಡ್ ಅದು ಆಟೋ ಚಾಲಕರಿಗೆ ರವಾನೆಯಾಗುತ್ತದೆ. ಇದಾದ ಕೆಲವೇ ನಿಮಿಷಗಳಲ್ಲಿ ಆಟೋ ಚಾಲಕರು ನೀವಿರುವ ಸ್ಥಳಕ್ಕೆ ಬಂದು ನಿಮ್ಮ ಕರೆದುಕೊಂಡು ಹೋಗುತ್ತವೆ.
ಒಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮಾದರಿಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಪ್ಲಿಕೇಶನ್‌ನಿಂದ ಅಥವಾ ಅದರ WhatsApp ಚಾಟ್‌ಬಾಟ್ ವೈಶಿಷ್ಟ್ಯದ ಮೂಲಕ ಟಿಕೆಟ್ ಖರೀದಿಸುವಾಗ ಪ್ರಯಾಣಿಕರು ಮೆಟ್ರೋ ನಿಲ್ದಾಣದಿಂದ ಮತ್ತು ಮೆಟ್ರೋ ನಿಲ್ದಾಣಕ್ಕೆ ಆಟೋ ರೈಡ್ ಅನ್ನು ಬುಕ್ ಮಾಡುವಂತೆ ಸಂಯೋಜಿಸಲು ಮಾತುಕತ ನಡೆದಿದೆ.
ಇನ್ನೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ಮೀಟರ್ ದರದ ಜೊತೆಗೆ 10 ರೂಪಾಯಿ ಹೆಚ್ಚುವರಿ ಹಣವನ್ನು ತಂತ್ರಜ್ಞಾನ ನಿರ್ವಹಣೆಗೆ ವಿಧಿಸಲಾಗಿದೆ ಎಂದು ಯುನಿಯನ್ ತಿಳಿಸಿದೆ.












Click it and Unblock the Notifications