Ram Navami: ನಾನ್‌ವೆಜ್ ಪ್ರಿಯರಿಗೆ ಕಹಿ ಸುದ್ದಿ: ಏಪ್ರಿಲ್ 6ರಂದು ಮಾಂಸ ಮಾರಾಟ ನಿಷೇಧ
ಬೆಂಗಳೂರು ಏಪ್ರಿಲ್ 5: ನಾಳೆ ಭಾನುವಾರ ಏಪ್ರಿಲ್ 6. ನಾನ್ ವೆಜ್ ತಿನ್ಬೇಕು ಅಂತ ಕೆಲವರು ಈ ದಿನಕ್ಕಾಗಿ ಕಾಯುತ್ತಿರಬಹುದು. ಆದರೆ ಈ ದಿನ ನಾನ್‌ವೆಜ್ ಪ್ರಿಯರಿಗೆ ಮಾಂಸ ಸಿಗುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೌದು.. ಏಪ್ರಿಲ್ 6 ಭಾನುವಾರ ರಾಮನವಮಿ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ. ಈ ದಿನ ಯಾವುದೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ ಮಾಡುವಂತಿಲ್ಲ. ಹೀಗಾಗಿ ಈ ಭಾನುವಾರದ ಮಾಂಸದೂಟಕ್ಕೆ ಬ್ರೇಕ್ ಬಿದ್ದಿದೆ.

ಶೀರಾಮನ ಜನ್ಮ ದಿನವನ್ನು ಏಪ್ರಿಲ್ 6 ಭಾನುವಾರದಂದು ಆಚರಿಸಲಾಗುತ್ತದೆ. ಹೀಗಾಗಿ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶುಪಾಲನಾ ವಿಭಾಗ ಈ ಆದೇಶ ಹೊರಡಿಸಿದೆ. ರಾಮನವಮಿಯಂದು ಕೋಳಿ, ಕುರಿ, ಹಂದಿ ಸೇರಿಂದತೆ ಯಾವುದೇ ರೀತಿಯ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗ ತಿಳಿಸಿದೆ.
ರಾಜ್ಯದ ಹಲವೆಡೆ ಮಾಂಸ ಮಾರಾಟಕ್ಕೆ ಬ್ರೇಕ್
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವೆಡೆ ಏಪ್ರಿಲ್ 6 ಭಾನುವಾರದಂದು ಮಾಂಸ ಮಾರಾಟ ನಿಷೇಧಿಸಲಾಗಿದೆ. ಶಿವಮೊಗ್ಗದಲ್ಲಿ ಎರಡು ದಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಏಪ್ರಿಲ್ 6 ರಾಮನವಮಿಗೆ ಹಾಗೂ ಏಪ್ರಿಲ್ 10ರಂದು ಮಹಾವೀರ ಜಯಂತಿ ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಮಾಂಸ ಮಾರಾಟದ ಮಾಲೀಕರಿಗೆ ಈ ಎರಡೂ ದಿನ ಮಾಂಸ ಮಾರಾಟ ಬಂದ್ ಮಾಡುವಂತೆ ತಿಳಿಸಲಾಗಿದ್ದು, ಈ ಎರಡು ದಿನಗಳಲ್ಲಿ ಬಹುತೇಕ ಮಾಂಸ ಮಾರಾಟದ ಅಂಗಡಿಗಳು ಬಂದ್ ಆಗಲಿವೆ. ಒಂದು ವೇಳೆ ಆದೇಶ ಉಲ್ಲಂಘನೆ ಮಾಡಿದರೆ ಅಂಗಡಿ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಹೀಗಾಗಿ ನಾನ್ ವೆಜ್ ಪ್ರಿಯರು ಬಾಡೂಟಕ್ಕೆ ಇಂದು ಒಂದು ದಿನ ಬ್ರೇಕ್ ಹಾಕಿ ಹಬ್ಬ ಆಚರಿಸಬೇಕಿದೆ. ಇದಕ್ಕೂ ಮೀರಿ ನಾನ್ ವೆಜ್ ತಿನ್ನಲೇ ಬೇಕು ಅನ್ನೋರು ಶನಿವಾರವೇ ನಾನ್ ವೆಜ್ ತಯಾರಿಸಿಕೊಂಡು ತಿನ್ನಬಹುದು. ಅಥವಾ ಶನಿವಾರವೇ ಮಾಂಸ ತಂದು ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಭಾನುವಾರದ ಬದಲಿಗೆ ಸೋಮವಾರ ಬಾಡುಟವನ್ನು ಸವಿಯಬಹುದು.
ರಾಮನವಮಿ ಮಹತ್ವ
ಹಿಂದೂ ಧರ್ಮದಲ್ಲಿ ರಾಮನ ಜನ್ಮ ದಿನ ವಿಶೇಷವಾಗಿದೆ. ಈ ದಿನ ಭಕ್ತರು ಬುದ್ಧಿ, ಆಧ್ಯಾತ್ಮಿಕ ಪ್ರಗತಿ ಮತ್ತು ಜೀವನದಲ್ಲಿ ಶಾಂತಿ ಪಡೆಯಲು ಪ್ರಾರ್ಥಿಸುತ್ತಾರೆ. ಚೈತ್ರ ಶುಕ್ಲ ನವಮಿ ತಿಥಿಯು ಏಪ್ರಿಲ್ 5, 2025 ರಂದು ಸಂಜೆ 7:26 ಕ್ಕೆ ಪ್ರಾರಂಭವಾಗಿ, ಏಪ್ರಿಲ್ 6 ರಂದು ಸಂಜೆ 7:22 ಕ್ಕೆ ಮುಕ್ತಾಯಗೊಳ್ಳುತ್ತದೆ. ಉದಯ ದಿನಾಂಕವನ್ನು ಆಧರಿಸಿ, ರಾಮ ನವಮಿಯ ಮಹಾ ಪರ್ವವನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತದೆ. ಈ ದಿನ ಪೂಜೆಗೆ ಶುಭ ಸಮಯ ಬೆಳಿಗ್ಗೆ 11:08 ರಿಂದ ಮಧ್ಯಾಹ್ನ 1:39 ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಭಗವಾನ್ ಶ್ರೀ ರಾಮನನ್ನು ಪೂಜಿಸುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.












Click it and Unblock the Notifications