ಗೌರಿ ಲಂಕೇಶ್ ಹತ್ಯೆಗೆ ಕಂಬನಿ ಮಿಡಿದ ಮಾತೆ ಮಹದೇವಿ
ಗೌರಿ ಲಂಕೇಶ್ ಅವರ ಹತ್ಯೆ ವೈಚಾರಿಕತೆಯ ಹತ್ಯೆ ಎಂದ ಮಾತೆ ಮಹದೇವಿ. ಗೌರಿ ಲಂಕೇಶ್ ಹತ್ಯೆ ಬಗ್ಗೆ ಲಿಂಗಾಯತ ಧರ್ಮದ ಮಹಾಗುರು ಪ್ರತಿಕ್ರಿಯೆ.
ಬೆಂಗಳೂರು, ಸೆಪ್ಟೆಂಬರ್ 5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಮಾತೆ ಮಹದೇವಿ ಅವರು ಇದೊಂದು ವೈಚಾರಿಕತೆಯ ಹತ್ಯೆ ಎಂದು ವ್ಯಾಖ್ಯಾನಿಸಿದ್ದಾರೆ.
ಒನ್ ಇಂಡಿಯಾದೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ ಎಂಬ ವಿಚಾರ ತಿಳಿದು ದುಃಖವಾಗಿದೆ. ನಾನು ಸುಮಾರು ವರ್ಷಗಳಿಂದ ಅವರನ್ನು ಬಲ್ಲೆ. ಅವರೊಬ್ಬ ವೈಚಾರಿಕತೆಯುಳ್ಳ ವ್ಯಕ್ತಿಯಾಗಿದ್ದರು. ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ನಿಷ್ಠುರವಾದಿಯಾಗಿದ್ದರು. ಒಬ್ಬ ಪತ್ರಕರ್ತೆಯಾಗಿ ಸತ್ಯವನ್ನು ಧೈರ್ಯವಾಗಿ ಪ್ರತಿಪಾದಿಸುವಂಥವರಾಗಿದ್ದರು. ಅಂಥ ವ್ಯಕ್ತಿಗೆ ಇಂಥದ್ದೊಂದು ಸಾವು ಬಂದಿರುವುದು ದುರದೃಷ್ಟಕರ ಎಂದರು.

''ವೈಚಾರಿಕತೆಗೆ, ವಿಚಾರವಂತರಿಗೆ ಈ ದೇಶದಲ್ಲಿ ನೆಲೆಯಿಲ್ಲ ಎಂಬುದು ಗೌರಿಯವರ ಹತ್ಯೆಯಿಂದ ನಮಗೆ ತಿಳಿಯುತ್ತದೆ. ನೇರವಾಗಿ ಮಾತನಾಡುವ ವ್ಯಕ್ತಿಯಾಗಿದ್ದ ಸಾಹಿತಿ ಕಲಬುರಗಿ ಅವರನ್ನು ಇದೇ ರೀತಿ ಹತ್ಯೆ ಮಾಡಲಾಗಿತ್ತು. ಇದೀಗ, ಮತ್ತೊಬ್ಬ ವಿಚಾರವಾದಿಯ ಹತ್ಯೆಯಾಗಿದೆ. ಅವರ ಸಾವಿನಿಂದ ಆಗಿರುವ ಆಘಾತವನ್ನು ನಾವು ಶಬ್ದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಅವರ ಸಾವು ಸಮಾಜಕ್ಕೆ ಬಹಳ ದೊಡ್ಡ ಹಾನಿ'' ಎಂದು ಮಾತೆ ಮಹದೇವಿ ತಿಳಿಸಿದರು.












Click it and Unblock the Notifications