Bengaluru; ಕಾಡುಗೋಡಿ ಮೀಸಲು ಅರಣ್ಯದಲ್ಲಿ ಭಾರಿ ಬೆಂಕಿ
ಬೆಂಗಳೂರಿನ ವೈಟ್‌ಫೀಲ್ಡ್ ಬಳಿ ಇರುವ ಕಾಡುಗೋಡಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಭಾನುವಾರ ಮೀಸಲು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾರಿ ಪ್ರಮಾಣದಲ್ಲಿ ಹರಡಿದೆ.
ಭಾರಿ ಪ್ರಮಾಣದಲ್ಲಿ ಹೊಗೆ ಹರಡಿರುವ ದೃಶ್ಯಗಳನ್ನು ನೋಡಬಹುದಾಗಿದೆ. ಭಾನುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದಾರೆ.

ನಗರದ ಜ್ಞಾನಭಾರತಿ ಆವರಣದ ಅರಣ್ಯ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದರೆ, ಭಾನುವಾರ ಕಾಡುಗೋಡಿಯಲ್ಲಿ ಪೊದೆಗಳು ಮತ್ತು ಎತ್ತರದ ಹುಲ್ಲಿನಿಂದ ಆವೃತವಾದ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಕಾನ್‌ಕಾರ್) ತೆರೆದ ಭೂಮಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾನ್‌ಕಾರ್ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಬಿದ್ದ ಪರಿಣಾಮ ದಟ್ಟವಾದ ಹೊಗೆ ಅಕ್ಕ ಪಕ್ಕದ ಪ್ರದೇಶವನ್ನು ವ್ಯಾಪಿಸಿತು. ಆತಂಕಗೊಂಡ ಅಪಾರ್ಟ್‌ಮೆಂಟ್ ನಿವಾಸಿಗಳು ಮನೆಗಳನ್ನು ಬಿಟ್ಟು ಹೊರಬಂದರು. ಸ್ಥಳಕ್ಕೆ ಬಂದ ಐದು ಅಗ್ನಿಶಾಮಕ ದಳಗಳು, ಕೆಲವು ಗಂಟೆಗಳ ಚುರುಕು ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ಹತೋಟಿಗೆ ತಂದರು. ಘಟನೆಯಲ್ಲಿ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.
Huge FIRE 🔥 at the KADUGODI RESERVE FOREST AREA, opp ITPL, Bengaluru
— Karnataka Weather (@Bnglrweatherman) March 31, 2024
Fire tenders are at the spot 🚒#BengaluruSummer pic.twitter.com/lWHscT65tk
ಬೆಂಗಳೂರು ವಿಶ್ವವಿದ್ಯಾನಿಲಯದ 1,200 ಎಕರೆಗೂ ಅಧಿಕ ವಿಸ್ತೀರ್ಣದ ಜ್ಞಾನಭಾರತಿ ಕ್ಯಾಂಪಸ್‌ನ ಅರಣ್ಯ ಪ್ರದೇಶದ ವಿವಿಧ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಎರಡು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿದರು. ಬೆಂಕಿ ಹರಡದಂತೆ ಖಚಿತಪಡಿಸಿಕೊಳ್ಳಲು ಸ್ಥಳದಲ್ಲೇ ತಂಗಿದ್ದರು.
ಬೆಂಗಳೂರಿನಲ್ಲಿ 36.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದ್ದು ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ಮಹಾನಗರದ ಹಲವು ಭಾಗಗಳಲ್ಲಿ ನೀರಿನ ಅಭಾವ ಕೂಡ ತಲೆದೋರಿದೆ.












Click it and Unblock the Notifications