ಮೇಕೆದಾಟು ಪಾದಯಾತ್ರೆ: ಮಾ.3 ಇತಿಹಾಸ ಸೃಷ್ಟಿಯಾಗುವ ಸಮಯ: ಕರುನಾಡಿಗೆ ಡಿಕೆಶಿ ಕರೆ
ಬೆಂಗಳೂರು ಮಾರ್ಚ್ 02: ಮಾರ್ಚ್ 3 ಮತ್ತೊಂದು ಇತಿಹಾಸ ಸೃಷ್ಟಿಯಾಗುವ ಸಮಯ. ಈ ಅಮೋಘ ಘಳಿಗೆಗೆ ನೀವು ಸಾಕ್ಷಿಯಾಗಬೇಕು ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ಕರೆ ಕೊಟ್ಟಿದ್ದಾರೆ. ಮೂರನೇ ತಾರೀಕು ಪಾದಯಾತ್ರೆ ಅಂತ್ಯ ಮಾಡಲಿದ್ದೇವೆ. ರಾಜ್ಯದ ಉದ್ದಗಲಕ್ಕೂ ಕಾರ್ಯಕರ್ತರಿಗೆ ಮುಖಂಡರಿಗೆ ಮನವಿ ಮಾಡುತ್ತೇನೆ. ನೀವು ಮೂರನೇ ತಾರೀಖು ಬೆಳಗ್ಗೆ ಪ್ಯಾಲೆಸ್ಗೆ ಬಂದು ಅಲ್ಲಿಂದ ಪ್ಯಾಲೆಸ್ ನಿಂದ ಪಾದಯಾತ್ರೆಗೆ ಹೆಜ್ಜೆ ಹಾಕಬೇಕು. ಇದು ನಿಮಗೆ ಅನುಭವದ ಪಾಠ ನೀಡಲಿದೆ ಎಂದು ಕರುನಾಡಿಗೆ ಡಿಕೆ ಶಿವಕುಮಾರ್ ಕರೆ ನೀಡಿರುವ ವಿಡಿಯೋವನ್ನು ಕೂ ಮಾಡಲಾಗಿದೆ.
ವಿಡಿಯೋದಲ್ಲಿ ಡಿಕೆ ಶಿವಕುಮಾರ್, ಇದು ಒಂದು ಸಂಘಟನೆಗೆ ಮತ್ತು ಇತಿಹಾಸ ಪುಟಕ್ಕೆ ಎರಡಕ್ಕೂ ಸೇರುವ ಅವಕಾಶ ಇದೆ. ರಾಜ್ಯದ ಮೂಲೆ ಮೂಲೆಯಿಂದ ಸಂಘಟರು ಬನ್ನಿ. ಆರು ಕಿಲೋ ಮೀಟರ್ ಆದಮೇಲೆ ನ್ಯಾಷನಲ್ ಕಾಲೇಜಿಗೆ ಹೋಗುತ್ತೇವೆ. ನಾವು ನೀರಿಗಾಗಿ ನಡೆಯೋಣ. ಬನ್ನಿ ಹೆಜ್ಜೆ ಹಾಕಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಎರಡನೇ ದಿನದ ಪಾದಯಾತ್ರೆ ಆರಂಭಗೊಂಡಿದೆ. ಬಿಟಿಎಂ ಲೇಔಟ್ ಕ್ಷೇತ್ರದಿಂದ ಪಾದಯಾತ್ರೆ ಆರಂಭಗೊಂಡಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ. ಪಾದಯಾತ್ರೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರದ ಪಾದಯಾತ್ರೆ ಇತಿಹಾಸ ಸೃಷ್ಟಿಸಲಿದೆ ಎಂದರು.

ಬುಧವಾರ ಬಿಟಿಎಂ ಲೇಔಟ್‌ನಿಂದ ಪಾದಯಾತ್ರೆ ಆರಂಭಗೊಂಡಿದೆ. ಪಾದಯಾತ್ರೆ ಮಾರುತಿ ನಗರ, ಹೊಸೂರು ಮುಖ್ಯರಸ್ತೆ, ಫೋರಂ ಮಾಲ್, ಪಾಸ್‌ಪೋರ್ಟ್ ಆಫೀಸ್, ಇನ್‌ಫೆಂಟ್ ಜೀಸಸ್ ರಸ್ತೆ, ಮಕ್ಕಾ ಮಸ್ಜಿದ್, ಜಸ್ಮಾ ದೇವಿ ಭವನ, ಹಾಸ್ ಮ್ಯಾಟ್ ಆಸ್ಪತ್ರೆ, ಟ್ರಿನಿಟಿ ಸರ್ಕಲ್, ಗುರುನಾನಕ್ ಮಂದಿರ್, ತಿರುವಳ್ಳವರ್ ಪ್ರತಿಮೆ, ಕೋಲ್ಸ್ ಪಾರ್ಕ್ , ನಂದಿದುರ್ಗ ರಸ್ತೆ, ಜೆಸಿ ನಗರ ಪೊಲೀಸ್ ಠಾಣೆ, ಮುನಿರೆಡ್ಡಿ ಪಾಳ್ಳ ಮಾರ್ಗವಾಗಿ ಟವಿ ಟವರ್ ಮೇಖ್ರಿ ಸರ್ಕಲ್ ಮೂಲಕ ಅರಮನೆ ಮೈದಾನಕ್ಕೆ ತಲುಪಲಿದೆ.
ಪಾದಯಾತ್ರೆಯಿಂದ ಮೂರು ದಿನಗಳ ಕಾಲ ಬೆಂಗಳೂರಿನ ಜನರಿಗೆ ಸಮಸ್ಯೆ ಆಗಬಹುದು. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈಗಾಗಲೇ ಕೇಳಿದ್ದಾರೆ. ಮೂರು ದಿನ ಸಮಸ್ಯೆ ಅನುಭವಿಸಿದರೂ ಮುಂದಿನ ಐವತ್ತು ವರ್ಷಗಳ ಕಾಲ ಜನರು ನೀರಿಗಾಗಿ ಕಷ್ಟಪಡಬೇಕಾದ ಸ್ಥಿತಿ ಇರುವುದಿಲ್ಲ ಎಂದು ಹೇಳಿದರು.

ನಾವು ಐದು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪಾದಯಾತ್ರೆ ಮಾಡಬೇಕಾಗಿತ್ತು, ಬಜೆಟ್ ಅಧಿವೇಶನ ಇರುವ ಕಾರಣ ಕೇವಲ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಗೆ ಬರುವವರು ಮೆಟ್ರೋರೈಲು ಬಳಸಿಕೊಳ್ಳಲು ಅನುಕೂಲವಾಗುವಂತೆ ಈ ಸ್ಥಳ ಆಯ್ಕೆ ಮಾಡಿದ್ದೇವೆ. ಪಾದಯಾತ್ರೆಗೆ ಬರುವವರು ಸಾಧ್ಯವಾದಷ್ಟು ಮೆಟ್ರೊ ಬಳಸಿ ಎಂದು ಮನವಿ ಮಾಡುತ್ತೇನೆ ಎಂದರು.
ಕೊರೊನಾ ತೀವ್ರತೆ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ 'ಮೇಕೆದಾಟು ಪಾದಯಾತ್ರೆ' ಭಾನುವಾರದಿಂದ (ಫೆ.27) ಮತ್ತೆ ಆರಂಭವಾಗಿದೆ. ಬಜೆಟ್ ಅಧಿವೇಶನ ಕಾರಣದಿಂದಾಗಿ ಪಾದಯಾತ್ರೆಯನ್ನು ಐದು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅದರಲ್ಲಿ ಮೂರು ದಿನ ಬೆಂಗಳೂರು ನಗರದಲ್ಲಿಯೇ ಪಾದಯಾತ್ರೆ ಸಂಚರಿಸಲಿದೆ. ಭಾನುವಾರ ರಾಮನಗರದಿಂದ ಆರಂಭಗೊಂಡು ಮಾರ್ಚ್ 3 ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಳ್ಳಲಿದೆ. ಪಾದಯಾತ್ರೆ ಸಮಾಪ್ತಿಗೊಳ್ಳುವ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿರುವ ಸಿದ್ಧತೆಗಳು ನಡೆಯುತ್ತಿವೆ. ಬೆಂಗಳೂರು ನಾಗರೀಕರಿಗೆ ಕುಡಿಯುವ ನೀರು ಪೂರೈಸಲು, ಕಾವೇರಿ ಪ್ರದೇಶದ ರೈತರನ್ನು ಬದುಕಿಸಲು ನೀರಿಗಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಮೇಕೆದಾಟುವಿನಿಂದ ರಾಮನಗರದವರೆಗೆ ಪಾದಯಾತ್ರೆ ಮಾಡಲಾಗಿತ್ತು. ಈ ಮಧ್ಯೆ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯ, ಕೋರ್ಟ್ ಆದೇಶಕ್ಕೆ ಗೌರವ ಸೂಚಿಸಲು ಈ ಪಾದಯಾತ್ರೆಯನ್ನು ನಿಲ್ಲಿಸಲಾಗಿತ್ತು. ಎಲ್ಲಿ ನಿಲ್ಲಿಸಲಾಗಿತ್ತೋ ಅಲ್ಲಿಂದ ಮತ್ತೆ ಆರಂಭಿಸಲಾಗಿದೆ.












Click it and Unblock the Notifications