ರಾಜಕಾರಣದಲ್ಲಿ ಅನಂತ್ ಅವರು ಹೆಜ್ಜೆ ಗುರುತು
ತಮ್ಮ ಸಂಘಟನಾ ಕೌಶಲ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಅನಂತ ಕುಮಾರರು ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ ಮತ್ತು 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. 1987ರಲ್ಲಿ ರಾಜಕಾರಣದ ಉನ್ನತ ಹಂತಕ್ಕೇರಲು ನಿರ್ಧರಿಸಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಕರ್ನಾಟಕದ ಭಾರತೀಯ ಜನತಾ ಯುವ ಮೋರ್ಚದ ಅಧ್ಯಕ್ಷರಾಗಿ ಅವರದ್ದು ಮೊದಲ ಜವಾಬ್ದಾರಿಯಾಗಿತ್ತು. 1995ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು.
1996ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಆ ಸಂದರ್ಭದಲ್ಲಿ ರೈಲ್ವೆ ಮತ್ತು ಕೈಗಾರಿಕೆ ಸಚಿವಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ವಿಮಾನಯಾನ ಖಾತೆಯ (ಸಂಪುಟದಲ್ಲಿ ಕಿರಿಯ ವಯಸ್ಸಿನ) ಸಚಿವರಾಗಿ ಈಗಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಒಡಂಬಡಿಕೆಯ ಕಾರಣದಿಂದಾಗಿಯೇ ವಿಮಾನ ನಿಲ್ದಾಣದ ಯೋಜನೆ ಅಸ್ತಿತ್ವಕ್ಕೆ ಬಂದಿತು. 1999ರಲ್ಲಿ ಎನ್ ಡಿ ಎ ಸರಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಖಾತೆಗಳಾದ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ವ್ಯವಹಾರಗಳು, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನ ಮುಂತಾದ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಐದು ಬಾಲಲ್ಲಿ ಐದು ಸಿಕ್ಸರ್
* 1996ರಲ್ಲಿ ಕಾಂಗ್ರೆಸ್ ಪಕ್ಷದ ವರಲಕ್ಷ್ಮೀ ಗುಂಡೂರಾವ್ ಅವರನ್ನ 1 ಲಕ್ಷ 20 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು.
* 1998ರಲ್ಲಿ ಕಾಂಗ್ರೆಸ್ ಪಕ್ಷದ ಡಿ.ಪಿ. ಶರ್ಮಾ ಅವರನ್ನು 1 ಲಕ್ಷ 80 ಸಾವಿರಕ್ಕೂ ಅಧಿಕರ ಮತಗಳಿಂದ ಪರಾಭವಗೊಳಿಸಿದ್ದರು.
* 1999ರಲ್ಲಿ ಕಾಂಗ್ರೆಸ್ ಪಕ್ಷದ ಬಿ.ಕೆ. ಹರಿಪ್ರಸಾದ್ ಅವರನ್ನು ಕೇವಲ 66 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
* 2004ರಲ್ಲಿ ಕಾಂಗ್ರೆಸ್ ಪಕ್ಷದ ಎಂ. ಕೃಷ್ಣಪ್ಪ ಅವರ ವಿರುದ್ಧ 60 ಸಾವಿರಕ್ಕೂ ಅಧಿಕ ಮತಗಳಿಂದ ಜಯಶಾಲಿಯಾದರು.
* 2009ರಲ್ಲಿ ಕಾಂಗ್ರೆಸ್ ಪಕ್ಷದ ಕೃಷ್ಣ ಭೈರೇಗೌಡ ಅವರನ್ನು ಕೇವಲ 37 ಸಾವಿರ ಮತಗಳ ಅಂತರದಿಂದ ಸೋಲಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 19,30,575 ಮತದಾರರಿದ್ದಾರೆ. ಪ್ರತಿ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳನ್ನು ಕಬಳಿಸುತ್ತ ಬಂದಿರುವ ಅನಂತ್ ಕುಮಾರ್ ಅವರು 6ನೇ ಬಾಲಿಗೂ ಸಿಕ್ಸರ್ ಬಾರಿಸುತ್ತಾರಾ? ನರೇಂದ್ರ ಮೋದಿ ಅವರು ಪ್ರಧಾನಿಯಾಗಲೆಂದು, ದೇಶದ ಅಭಿವೃದ್ಧಿಗಾಗಿ, ರಕ್ಷಣೆಗಾಗಿ, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಜ್ಞಾವಂತ ಮತದಾರರು ತಮಗೆ ಮತ ಕೊಟ್ಟು ಖಂಡಿತ ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸವನ್ನು ಅನಂತ್ ಅವರು ಹೊಂದಿದ್ದಾರೆ.












Click it and Unblock the Notifications