ಮದ್ಯ ಸಿಕ್ಕಿದೆ ಬಾ ಎಂದು ಕರೆಸಿ ಸ್ನೇಹಿತನನ್ನು ಚುಚ್ಚು ಕೊಂದರು!
ಬೆಂಗಳೂರು, ಏಪ್ರಿಲ್ 28 : ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮದ್ಯ ಸಿಗದೆ ಹಲವಾರು ಜನರು ಪರದಾಡುತ್ತಿದ್ದಾರೆ. ಮದ್ಯ ಸಿಕ್ಕಿದೆ ಬಾ ಎಂದು ಸ್ನೇಹಿತನನ್ನು ಕರೆಸಿಕೊಂಡು ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹೆಸರಘಟ್ಟ ನಿವಾಸಿ ಲೋಕೇಶ್ (39), ಸಿಂಗನಾಯಕನಹಳ್ಳಿ ನಿವಾಸಿ ನಿಖಿಲ್ (25) ಎಂದು ಗುರುತಿಸಲಾಗಿದೆ. ಶ್ರೇಯಸ್ ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಏಪ್ರಿಲ್ 21ರಂದು ಆರೋಪಿಗಳು ರಾಜನಕುಂಟೆಯ ನಿವಾಸಿ ಪ್ರಕಾಶ್ ಅಲಿಯಾಸ್ ಲೂಸು (34) ಹತ್ಯೆ ಮಾಡಿದ್ದರು. ಪ್ರಕಾಶ್ ಕೊಲೆ ಯತ್ನ ಮತ್ತು ಜೂಜಾಟದ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ರೌಡಿ ಶೀಟರ್ ಪಟ್ಟಿ ಸೇರಿದ್ದ.

ಲೋಕೇಶ್ ಮತ್ತು ಪ್ರಕಾಶ್ ಸ್ನೇಹಿತರಾಗಿದ್ದ ಒಟ್ಟಿಗೆ ಜೂಜಾಡುತ್ತಿದ್ದರು. ಗೆದ್ದ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇಬ್ಬರು ಒಟ್ಟಿಗೆ ಸೇರಿ ಹಲವು ಬಾರಿ ಪಾರ್ಟಿಯನ್ನು ಮಾಡಿದ್ದರು.
ಲಾಕ್ ಡೌನ್ ಪರಿಣಾಮ ಇಬ್ಬರಿಗೂ ಜೂಜಾಡಲು ಜಾಗ ಸಿಗುತ್ತಿರಲಿಲ್ಲ. ಪ್ರಕಾಶ್‌ಗೆ ಕರೆ ಮಾಡಿದ್ದ ಲೋಕೇಶ್ ಜೂಜಾಡಲು ಜಾಗ ತೋರಿಸು, ಮದ್ಯದ ವ್ಯವಸ್ಥೆ ಮಾಡು ಎಂದು ಬೇಡಿಕೆ ಇಟ್ಟಿದ್ದ. ಆದರೆ, ಪ್ರಕಾಶ್ ಮದ್ಯವಿಲ್ಲ ಎಂದು ಹೇಳಿದ್ದ.
ಇದೇ ವಿಚಾರಕ್ಕೆ ಫೋನ್‌ನಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದರು. ಇದರಿಂದಾಗಿ ಆಕ್ರೋಶಗೊಂಡ ಲೋಕೇಶ್ ನಿಖಿಲ್ ಜೊತೆ ಸೇರಿ ಪ್ರಕಾಶ್ ಹತ್ಯೆಗೆ ಸಂಚು ರೂಪಿಸಿದ್ದ. ಏಪ್ರಿಲ್ 21ರಂದು ಪ್ರಕಾಶ್‌ಗೆ ಕರೆ ಮಾಡಿ ಮದ್ಯ ಸಿಕ್ಕಿದೆ ಬಾ ಎಂದು ಕರೆಸಿಕೊಂಡಿದ್ದ.
ಪ್ರಕಾಶ್ ಬರುತ್ತಿದ್ದಂತೆ ಮೂವರು ಆತನನ್ನು ಸುತ್ತುವರೆದು ಚಾಕುವಿನಿಂದ ಚುಚ್ಚಿದ್ದಾರೆ. ಆತನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಮಸ್ಕೂರ್‌ಹಳ್ಳಿ ಬಳಿ ಎಸೆದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ಮೃತಪಟ್ಟಿದ್ದ.
ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಸೋಲದೇವನಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ.











Click it and Unblock the Notifications