ಕೆಎಎಸ್ ಅಭ್ಯರ್ಥಿಗೆ ಆಮಿಷವೊಡ್ಡಿ 59 ಲಕ್ಷ ವಂಚಿಸಿದವ ಅಂದರ್!
ಬೆಂಗಳೂರು, ಆಗಸ್ಟ್ 10: ಕೆಲವರು ಮಾತನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಮಾತಿನ ಇಕ್ಕಳದಲ್ಲಿ ಸಿಲುಕಿಸಿ ತನಗೆ ದೊಡ್ಡ ದೊಡ್ಡ ಅಧಿಕಾರಿಗಳು ಗೊತ್ತು, ಹೇಳಿದ ಕೆಲಸವಾಗುತ್ತದೆ ಎಂದೆಲ್ಲಾ ನಂಬಿಕೆ ಹುಟ್ಟಿಸಿ ನಂಬಿಕೆದ್ರೋಹವನ್ನು ಎಸಗುತ್ತಾರೆ.
ಕೆಎಎಸ್ ಪಾಸು ಮಾಡಿಸುವುದಾಗಿ ಹೇಳಿದ ವ್ಯಕ್ತಿ ಯುವತಿಗೆ ಬರೋಬ್ಬರಿ 59 ಲಕ್ಷ ವಂಚನೆ ಮಾಡಿ ಬೆಂಗಳೂರಿನ ವಿಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಂಚಕ ಕರ್ನಾಟಕ ಆಡಳಿತ ಸೇವೆ ಪರೀಕ್ಷೆ ಪಾಸು ಮಾಡೋ ಕನಸು ಹೊತ್ತ ಅಭ್ಯರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ.
ಐಎಎಸ್, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿ ಬರೋಬ್ಬರಿ 59 ಲಕ್ಷ ರೂ. ವಂಚನೆ ಮಾಡಿದ್ದ ಆರೋಪಿ ಸಿದ್ದರಾಜು ಕಟ್ಟಿಮನಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕೆಎಎಸ್ ಪಾಸ್ ಮಾಡಿಸುವುದಾಗಿ ಹೇಳಿ ವಂಚಕ ಹಣ ಪಡೆದಿದ್ದ. ವಂಚನೆಗೊಳಗಾದ ಸವಿತಾ ಶಾಂತಪ್ಪ ವಿಜಯನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ವಂಚಕನನ್ನು ಬಂಧಿಸಲಾಗಿದೆ.

59 ಲಕ್ಷ ವಂಚನೆ ಮಾಡಿದ ವಂಚಕ
ಸವಿತಾ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರದವರು. ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸವಿತಾಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದ. ಆರೋಪಿ ತನಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಪರಿಚಯ ಎಂದು ಪಾಸು ಮಾಡಿಸೋದಾಗಿ ಹೇಳಿದ್ದ. ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಐಪಿಎಸ್ ಪ್ರವೀಣ್ ಸೂದ್ ನನಗೆ ಪರಿಚಿತರೆಂದು ಸಿದ್ದರಾಜ್ ನಂಬಿಸಿದ್ದ. ಆರೋಪಿಗೆ ಮೊದಲ ಹಂತದಲ್ಲಿ 15 ಲಕ್ಷ ಹಣ ನೀಡಿದ್ದ ಸವಿತಾ, ಬಳಿಕ ಹಂತ ಹಂತವಾಗಿ 59 ಲಕ್ಷ ಹಣ ನೀಡಿದ್ದರು.

ಕೆಲಸವೂ ಇಲ್ಲ ಹಣವೂ ವಾಪಸ್ಸಿಲ್ಲದೆ ಕಂಗಾಲು
ಸವಿತಾ ತಂದೆ ಶಾಂತಪ್ಪ ಕೆಲಸ ಸಿಗುವ ಭರವಸೆಯಲ್ಲಿ ಜಮೀನು ಅಡಮಾನವಿಟ್ಟು ಹಣ ನೀಡಿದ್ದರು. ಮತ್ತೆ ಮತ್ತೆ ಆರೋಪಿ ಹಣ ಕೇಳೋದನ್ನು ನೋಡಿದ ಸವಿತಾ ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಕೇಳಿದ್ದರು. ಆಗ ಆರೋಪಿ ಸಿದ್ದರಾಜು ಕಟ್ಟಿಮನಿ ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದನಂತೆ. ಮತ್ತೆ ಮತ್ತೆ ಹಣ ಕೇಳಿದರೇ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದು ಜೀವ ಬೆದರಿಕೆಯನ್ನು ಹಾಕಿದ್ದ ಎಂಬುದು ಆರೋಪ.

ಸಿದ್ದರಾಜು ಮೊಬೈಲ್‌ನಲ್ಲಿ ಡಿಸಿ, ಎಸ್ಪಿಗಳ ನಂಬರ್
ಸಿದ್ದರಾಜು ಕಟ್ಟಿಮನಿ ಸಹ ತಾನು ಐಎಎಸ್, ಐಪಿಎಸ್ ಕೋಚಿಂಗ್ ಪಡೆಯುತ್ತಿದ್ದೇನೆ. ಹಲವು ಸಲ ಮುಖ್ಯಪರೀಕ್ಷೆ ಬರೆದ ಅನುಭವವಿದೆ. ಹಣವಿಲ್ಲದ ಕಾರಣ ಕೆಲಸಕ್ಕೆ ಸೇರಲು ಸಾಧ್ಯವಾಗಲಿಲ್ಲ. ತನ್ನ ಬಳಿಯಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿಗಳು ಸಹ ಸಂಪರ್ಕದಲ್ಲಿದ್ದಾರೆ ಎಂದು ತಾನು ಸೇವ್ ಮಾಡಿದ್ದ ನಂಬರ್ ತೋರಿಸುತ್ತಿದ್ದ. ಇದರಿಂದ ಹಂತ ಹಂತವಾಗಿ ಕೆಲಸ ಸಿಗುವ ಭರವಸೆಯಿಂದ 59 ಲಕ್ಷ ಹಣವನ್ನು ತೆಗೆದುಕೊಂಡಿದ್ದಾನೆ.

ಕೆಲಸದ ಆಮಿಷವೊಡ್ಡಿ ಮೋಸ
ಕೆಲಸ ಸಿಗದೇ ಹಣವೂ ಕಳೆದುಕೊಂಡು ಸವಿತಾ ಕುಟುಂಬ ಕಣ್ಣೀರು ಹಾಕುತ್ತಿದೆ. ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನನ್ವಯ ಐಪಿಸಿ 420 ಅಡಿ ಪ್ರಕರಣ ದಾಖಲಿಸಿ ಸಿದ್ದರಾಜ್ ಕಟ್ಟಿಮನಿ ಬಂಧನ ಮಾಡಲಾಗಿದೆ.
"ಕೆಲಸವನ್ನು ಕೊಡಿಸುವ ನೆಪದಲ್ಲಿ ಸವಿತಾ ಬಳಿಯಲ್ಲಿ ಸಿದ್ದರಾಜು ಕಟ್ಟಿಮನಿ ಹಣವನ್ನು ಪಡೆದಿದ್ದಾನೆ. ಆತನ ಮೊಬೈಲ್‌ನಲ್ಲಿ ಡಿಸಿ, ಎಸ್ಪಿಗಳ ನಂಬರ್ ಸೇವ್ ಆಗಿದೆ. ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದ್ದು ತನಿಖೆಯ ಬಳಿಕ ಮತ್ತಷ್ಟು ವಿವರಣೆಯನ್ನು ನೀಡುವುದಾಗಿ" ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.












Click it and Unblock the Notifications