ಮಳವಳ್ಳಿ ಅತ್ಯಾಚಾರ: ಪ್ರಕರಣ ಮಕ್ಕಳ ಆಯೋಗಕ್ಕೆ ಎಎಪಿ ದೂರು, ಸಿಬಿಐ ವಹಿಸಿ
ಬೆಂಗಳೂರು, ಅಕ್ಟೋಬರ್ 14: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಕೋರಿ ಆಮ್ ಆದ್ಮಿ ಪಕ್ಷ ಮಹಿಳಾ ಘಟಕ ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿತು.
ಶುಕ್ರವಾರ ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ದೂರು ನೀಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಎಪಿ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಅವರು, ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಅಕ್ಟೋಬರ್ 11ರಂದು ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಗೈದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಆಕೆಯ ಮೃತದೇಹವನ್ನು ನಿರ್ಮಾಣ ಹಂತದ ಕಟ್ಟಡದ ಸಂಪ್ ಒಳಗೆ ಎಸೆಯಲಾಗಿರುತ್ತದೆ. ಘಟನೆಗೆ ಸಂಬಂಧಿಸಿ ಕಾಂತರಾಜು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಾನೇ ದುಷ್ಕೃತ್ಯ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದರು.
ಈ ಬಂಧಿತ ಆರೋಪಿಯು ಈ ಹಿಂದೆಯೂ ಇಂತಹ ದುಷ್ಕೃತ್ಯ ಎಸಗಿದ್ದರೂ ಆತನ ವಿರುದ್ಧ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿರುವುದಿಲ್ಲ. ಪರಿಣಾಮವಾಗಿಯೇ ಇದೀಗ ಮಳವಳ್ಳಿಯ ಅಮಾಯಕ ಬಾಲಕಿ ಇದೇ ಆಸಾಮಿಯಿಂದ ಬಲಿಯಾಗಿದ್ದಾಳೆ ಎಂದು ಅವರು ಕಿಡಿ ಕಾರಿದರು.

ಪೊಲೀಸ್ ಇಲಾಖೆ ವೈಫಲ್ಯ
ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸ್ ಇಲಾಖೆಯ ವೈಫಲ್ಯವು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಬಾಲಕಿಯ ಅತ್ಯಾಚಾರ ಹಾಗೂ ಕೊಲೆಗೆ ಕಾರಣರಾದ ಎಲ್ಲ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸುವುದು ಕಡಿಮೆಯಾಗುತ್ತದೆ ಎಂದು ಕುಶಲಸ್ವಾಮಿ ತಿಳಿಸಿದರು.

ಮಾಧ್ಯಮಗಳಲ್ಲಿ ವರದಿಯಾದ ಪ್ರಕರಣಗಳಷ್ಟೇ ಪರಿಗಣನೆ
ಪೊಲೀಸರು ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದರಲ್ಲಿ ರಾಜ್ಯ ಗೃಹ ಇಲಾಖೆ ವಿಫಲವಾಗಿದೆ. ಇದರಿಂದಾಗಿ ಕಾಮುಕರಿಗೆ ಕಾನೂನಿನ ಭಯವೇ ಇಲ್ಲವಾಗಿದೆ. ಮಾಧ್ಯಮಗಳಲ್ಲಿ ದೊಡ್ಡದಾಗಿ ವರದಿಯಾಗುವ ಪ್ರಕರಣಗಳನ್ನಷ್ಟೇ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲಿ ಯುವತಿ ಮೇಲೆ ಅತ್ಯಾಚಾರವಾದಾಗ, ಸಂತ್ರಸ್ತೆಯು ಆ ವೇಳೆ ಅಲ್ಲಿಗೆ ಬಂದಿದ್ದೇ ತಪ್ಪೆಂಬಂತೆ ಗೃಹ ಸಚಿವರ ಮಾತಾನಾಡಿದ್ದರು. ಗೃಹ ಸಚಿವರ ಇಂತಹ ಮನಸ್ಥಿತಿಯಿಂದಾಗಿ ಕಾಮುಕರಿಗೆ ಹೆದರಿಕೆ ಇಲ್ಲದಂತಾಗಿದೆ ಎಂದು ಆರಗ ಜ್ಞಾನೇಂದ್ರ ವಿರುದ್ಧ ಕುಶಲಸ್ವಾಮಿ ಆಕ್ರೋಶ ಹೊರಹಾಕಿದರು.












Click it and Unblock the Notifications