ಬೆಂಗಳೂರಿನ ಈ ಮೂರು ಪ್ರದೇಶಗಳಲ್ಲಿ ನಿರ್ಮಾಣ ಆಗಲಿವೆ ಪ್ರಮುಖ ಸಾರಿಗೆ ಹಬ್, ಇದರಿಂದ ಎಷ್ಟೆಲ್ಲ ಉಪಯೋಗವಾಗಲಿದೆ ಗೊತ್ತಾ?
ಬೆಂಗಳೂರು, ಜನವರಿ, 10: ಸಾರಿಗೆ ವಿಭಾಗದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ನಗರ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಸಾಗುತ್ತಲೇ ಇದೆ. ಇದೀಗ ಈ ಮೂರು ಸ್ಥಳಗಳಲ್ಲಿ ಪ್ರಮುಖ ಸಾರಿಗೆ ಹಬ್‌ಗಳು ನಿರ್ಮಾಣ ಆಗಲಿವೆ. ಹಾಗಾದರೆ ಇದರಿಂದ ಏನೆಲ್ಲ ಉಪಯೋಗಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಾಮಾನ್ಯವಾಗಿ ಊರುಗಳಿಂದ, ಹಾಗೂ ನಗರದ ಬೇರೆ ಬೇರೆ ಸ್ಥಳಗಳಿಗೆ ಸುಲಭವಾಗಿ ತಲುಪಬೇಕೆಂದರೆ ಮೆಜೆಸ್ಟಿಕ್‌ಗೆ ಬರಬೇಕಿತ್ತು. ಇದರಂದ ವಾಹನ ದಟ್ಟಣೆ ಅಲ್ಲದೆ ಜನರ ದಟ್ಟಣೆ ಕೂಡ ಆಗಲಿದೆ. ಇದೀಗ ಬೈಯಪ್ಪನಹಳ್ಳಿ, ಹೆಬ್ಬಾಳ ಮತ್ತು ಯಶವಂತಪುರ ಪ್ರಮುಖ ಸಾರಿಗೆ ಹಬ್ ಆಗಿ ರೂಪುಗೊಳ್ಳಲಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಮೆಜೆಸ್ಟಿಕ್ ನಿಲ್ದಾಣದ ಒತ್ತಡ ಕಡಿಮೆ ಆಗುವ ಸಾಧ್ಯತೆಯಿದೆ.

ಈಗಾಗಲೇ ಭಾರೀ ಟ್ರಾಫಿಕ್ ಜಾಮ್‌ನಿಂದ ಈ ಜಂಕ್ಷನ್‌ಗಳು ತುಂಬಿ ತುಳುಕುತ್ತಿವೆ. 2027-28ರ ಅವಧಿಯಲ್ಲಿ ನಗರದ ಅತಿಹೆಚ್ಚು ವಾಹನ ನಿಬಿಡ ಪ್ರದೇಶಗಳಲ್ಲಿ ಈ ನಿಲ್ದಾಣಗಳು ಸಿದ್ಧವಾಗಲಿವೆ. ಸದ್ಯ ಮೆಜೆಸ್ಟಿಕ್‌ನಿಂದ ಮಾತ್ರ ನಗರದ ಎಲ್ಲಾ ಭಾಗಗಳಿಗೂ ಸಾರಿಗೆ ಸಂಪರ್ಕ ಇರುವುದರಿಂದ ಎಲ್ಲರೂ ಮೆಜೆಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ಈ ಸಮಸ್ಯೆ 4-5 ವರ್ಷಗಳಲ್ಲಿ ಬಗೆಹರಿಯುವ ಸಾಧ್ಯತೆಯಿದೆ.
ಉಪನಗರ ರೈಲು ಯೋಜನೆಯಲ್ಲಿ ಬೈಯಪ್ಪನಹಳ್ಳಿ ಪ್ರಮುಖ ಮಾರ್ಗ ಬದಲಾವಣೆ ನಿಲ್ದಾಣವಾಗಿದೆ. ಈ ನಿಲ್ದಾಣದಲ್ಲಿ ಮೂರು ಮಾರ್ಗಗಳು ಕೂಡಲಿವೆ. ಈ ನಿಲ್ದಾಣದ ಮೂಲಕ ಕಾರಿಡಾರ್ 2 (ಮಲ್ಲಿಗೆ) ಬೈಯಪ್ಪನಹಳ್ಳಿ-ಚಿಕ್ಕಬಾಣಾವರ, ಕಾರಿಡಾರ್ 3 (ಪಾರಿಜಾತ) ಕೆಂಗೇರಿ-ಬೈಯಪ್ಪನಹಳ್ಳಿ ಹಾಗೂ ಕಾರಿಡಾರ್ 4 (ಕನಕ) ಹೀಲಲಿಗೆ - ರಾಜಾನುಕುಂಟೆ ಮಾರ್ಗದ ಕಡೆಗೆ ಸಂಪರ್ಕ ಪಡೆಯಬಹುದು.
ಇದೇ ಮಾರ್ಗದಲ್ಲಿ ಚಲ್ಲಘಟ್ಟ -ವೈಟ್‌ಫೀಲ್ಡ್ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಪರ್ಕವಿದೆ. ನೈಋುತ್ಯ ರೈಲ್ವೆ ಹಾಗೂ ಬಸ್ ನಿಲ್ದಾಣ ಸಂಪರ್ಕ ಕೊಂಡಿ ಕೂಡ ಆಗಿದ್ದು, ಈ ನಿಲ್ದಾಣದ ಮೂಲಕ ಬೆಂಗಳೂರು ನಗರ ಪ್ರವೇಶ ಸುಲಭ ಆಗಲಿದೆ.
ಹೆಬ್ಬಾಳ: ಹೆಬ್ಬಾಳ ಮೇಲ್ಸೇತುವೆಯನ್ನು ಮಲ್ಟಿ ಮಾಡೆಲ್ ಇಂಟಿಗ್ರೇಷನ್ ಸಾರಿಗೆ ಕೇಂದ್ರವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದೇ ಜಂಕ್ಷನ್‌ನಲ್ಲಿ ಒಂದು ಉಪನಗರ ರೈಲು ನಿಲ್ದಾಣ ಮತ್ತು ಮೂರು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ ಯೋಜನೆಗೆ ತಯಾರಿ ನಡೆಯುತ್ತಿದೆ. ನೀಲಿ ಮಾರ್ಗದ ಅಡಿಯಲ್ಲಿ ಬಿಎಂಆರ್‌ಸಿಎಲ್, ಬಿಎಂಟಿಸಿ ಡಿಪೋ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುತ್ತಿದೆ.
ಜೆಪಿ ನಗರ 4ನೇ ಹಂತದ ಮಾರ್ಗ ಹಾಗೂ ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾರಿಡಾರ್ ಯೋಜನಾ ಹಂತದಲ್ಲಿದೆ. ಉಪನಗರ ರೈಲು ನಿಲ್ದಾಣಗಳ (ಮಲ್ಲಿಗೆ ಮಾರ್ಗ) ಕಾಮಗಾರಿ ಪ್ರಗತಿಯಲ್ಲಿ ಇದೆ. ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಸಾರಿಗೆ ಸಂಪರ್ಕವನ್ನು ಜಂಕ್ಷನ್‌ನಲ್ಲಿ ಸಂಯೋಜಿಸಲಾಗುತ್ತದೆ. ಪಾದಚಾರಿ ಮೇಲ್ಸೇತುವೆಗಳ ಮೂಲಕ ಎಲ್ಲಾ ನಿಲ್ದಾಣಗಳನ್ನು ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗುತ್ತಿದೆ.
ಯಶವಂತಪುರ: ತುಮಕೂರು ರಸ್ತೆ ಕಡೆಯಿಂದ ನಗರ ಪ್ರವೇಶಿಸುವವರಿಗೆ ಯಶವಂತಪುರ ಪ್ರಮುಖ ನಿಲ್ದಾಣವಾಗಿದೆ. ಉಪನಗರ ರೈಲ್ವೆ ಯೋಜನೆ ಎರಡು ನಿಲ್ದಾಣಗಳು (ಮಲ್ಲಿಗೆ ಮತ್ತು ಸಂಪಗಿ) ಇಲ್ಲಿ ನಿರ್ಮಾಣ ಆಗಲಿವೆ. ಇವುಗಳ ಜೊತೆಗೆ ಈಗಾಗಲೇ ನೈಋುತ್ಯ ರೈಲ್ವೆ ನಿಲ್ದಾಣಕ್ಕೆ ಮೆಟ್ರೋ ನಿಲ್ದಾಣದ ಮೂಲಕ (ಹಸಿರು ಮಾರ್ಗ) ಸಂಪರ್ಕ ಕಲ್ಪಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಬಸ್ ಸಂಪರ್ಕ ಕೂಡ ಇಲ್ಲಿ ಇರಲಿವೆ.












Click it and Unblock the Notifications