• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾತ್ಮ ಮಾಡಿದ್ದು ಹತ್ತು ನಿಮಿಷದ ಭಾಷಣ! ಹಳ್ಳಿಗರು ನೀಡಿದ್ದು ಬುಟ್ಟಿಗಟ್ಟಲೆ ದೇಣಿಗೆ!

|

ಬೆಂಗಳೂರು, ಅಕ್ಟೋಬರ್ 2: ಮಹಾತ್ಮ ಗಾಂಧಿ ಅವರು ಅಂದು ಮಾಡಿದ್ದು ಕೇವಲ ಹತ್ತು ನಿಮಿಷಗಳ ಭಾಷಣ. ಅದೂ ಹಿಂದಿ ಭಾಷೆಯಲ್ಲಿ. ಅದರಲ್ಲೂ ಹಿಂದಿ ಬಾರದ ಕನ್ನಡದ ಮಂದಿಯ ಮುಂದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಭಾಷಣವನ್ನು ಆಲಿಸಲು ಬಂದವರೆಲ್ಲರೂ ಹಳ್ಳಿಗಾಡಿನ ಜನರು. ಆರ್ಥಿಕವಾಗಿ ದುರ್ಬಲರು ಅರ್ಥಾತ್ ಬಡವರು. ಬಹಳ ಜನರು ಮಹಿಳೆಯರು. ಆದರೆ, ಮಹಾತ್ಮನ ಭಾಷಣವನ್ನು ಅರ್ಥೈಸಿಕೊಂಡ ಜನರು ಬುಟ್ಟಿ ಬುಟ್ಟಿಗಳಲ್ಲಿ ಉದಾರ ದೇಣಿಗೆ ನೀಡಿ ಭಾರತದ ಸ್ವಾತಂತ್ರ್ಯ ಚಳುವಳಿಗೆ ಬಳುವಳಿಯಾದರು.

ಮಹಾತ್ಮ ಗಾಂಧೀಜಿ ಮೇಲೆ ಮೋದಿ ತೋರುತ್ತಿರುವ ಪ್ರೀತಿ ಬರೀ ಕಪಟತನದ್ದೇ?

ಅಷ್ಟೇ ಅಲ್ಲ ! ಮಹಾತ್ಮನ ದೃಷ್ಟಿಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯ ಜನರು ಅತ್ಯಂತ ಹೃದಯ ಶ್ರೀಮಂತರು ಎನಿಸಿಕೊಂಡರು ಎಂದು ಸುಪ್ರಸಿದ್ಧ ನಿಘಂಟು ತಜ್ಞ ಪ್ರೊ ಜಿ ವೆಂಕಟಸುಬ್ಬಯ್ಯ ಅವರು ಸ್ಮರಿಸಿದರು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ನಗರದ ಚಾಮರಾಜಪೇಟೆಯಲ್ಲಿರುವ ಶಾರದಾ ಸ್ತ್ರೀ ಸಮಾಜದ ಸಹಯೋಗ ಹಾಗೂ ಸಹಭಾಗಿತ್ವದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮವರ್ಷಾಚರಣೆಯ ಸಮಾರಂಭಕ್ಕೆ ವೆಂಕಟಸುಬ್ಬಯ್ಯ ಅವರು ವೀಡಿಯೋ ಸಂದೇಶದ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬಾಪೂ ಬರ್ತ್ ಡೇ ದಿನದಿಂದ 'ದಾನ ಉತ್ಸವ', ನಿಮ್ಮ ಕೈಲಾದ್ದು ನೀಡಿ...

ಮಹಾತ್ಮ ಗಾಂಧಿ ಅವರು 1927ರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಗೆ ಭೇಟಿ ಇತ್ತ ಸಂದರ್ಭ. ಜಿಲ್ಲಾ ಕಾಂಗ್ರೆಸ್ ನಾಯಕ ರಂಗ ಅಯ್ಯಂಗಾರ್ ಅವರು ಗಾಂಧೀಜಿ ಅವರನ್ನು ಅಲ್ಲಿಗೆ ಕರೆತಂದಿದ್ದರು. ಅಲ್ಲಿ ನೆರೆದ ಜನಸಾಗರದ ಮುಂದೆ ಬಾಪು ಅವರ ಭಾಷಣವನ್ನು ರಂಗ ಅಯ್ಯಂಗಾರ್ ಅವರೇ ಕನ್ನಡಕ್ಕೆ ಭಾಷಾಂತರ ಮಾಡಿದರು ಎಂದು ಸ್ಮರಿಸಿಕೊಂಡರು.

ಗಾಂಧಿ ಪ್ರಭಾವಕ್ಕೆ ಸಾಕ್ಷಿ

ಗಾಂಧಿ ಪ್ರಭಾವಕ್ಕೆ ಸಾಕ್ಷಿ

ತೆಳ್ಳನೆ ದೇಹದ ವಯೋವೃದ್ಧ ಹಾಗೂ ತಮ್ಮ ಎದೆಗೆ ಪೂರ್ಣ ಹೊದಿಕೆಯೂ ಇಲ್ಲದ ಗಾಂಧಿ ಅವರ ಭಾಷಣದ ಪ್ರಭಾವ ಎಷ್ಟಿತ್ತು ಎಂಬುದಕ್ಕೆ ಅಲ್ಲಿ ಸಂಗ್ರಹವಾದ ಬೃಹತ್ ದೇಣಿಗೆಯೇ ಸಾಕ್ಷಿಯಾಗಿತ್ತು. ಭಾಷಣವನ್ನು ಆಲಿಸಲು ಬಂದವರ ಬಳಿ ಸ್ವಾತಂತ್ರ್ಯಕ್ಕಾಗಿ ತಮ್ಮ ಕೊಡುಗೆ ನೀಡಿ ಎಂಬ ಗಾಂಧೀಜಿ ಅವರ ರಾಷ್ಟ್ರಪ್ರೇಮದ ಕರೆಗೆ ಓಗೊಟ್ಟು ನೆರೆದ ಜನರು ಸ್ಥಳದಲ್ಲಿಯೇ ಉದಾರ ದೇಣಿಗೆ ನೀಡಿದರು.

ಅಲ್ಲಿ ಆಗಮಿಸಿದ್ದವರಲ್ಲಿ ಬಹುತೇಕರು ಕೇವಲ ಭಾಷಣವನ್ನು ಆಲಿಸಲು ಬಂದಿದ್ದರೇ ಹೊರತು ಹಣವನ್ನು ತಂದಿರಲಿಲ್ಲ. ಆದರೂ, ದೇಣಿಗೆಯ ಬುಟ್ಟಿಯನ್ನು ಹಿಡಿದು ಕಾಂಗ್ರೆಸ್ಸಿಗರು ಹೊರಟಾಗ ಅಲ್ಲಿ ನೆರೆದಿದ್ದ ಮಹಿಳೆಯರು ತಮ್ಮ ಬಳಿ ಇದ್ದ ಸರ, ಕೈ ಬಳೆ, ಉಂಗುರ ಹಾಗೂ ಕಾಲುಂಗುರಗಳನ್ನು ಕೊಡುಗೆಯಾಗಿ ಕೊಟ್ಟು ಉದಾರತೆಯನ್ನು ಮೆರೆದರು.

ಸ್ವೀಕೃತವಾದ ದೇಣಿಗೆಯನ್ನು ಮರುದಿನ ಹರಾಜು ಹಾಕಿ ಬಂದ ಹಣವನ್ನು ಸ್ಥಳೀಯ ನಾಯಕರು ಗಾಂಧೀಜಿ ಅವರಿಗೆ ತಲುಪಿಸಿದರು ಎಂಬ ರೋಚಕ ಗಳಿಗೆಯನ್ನು ಪ್ರೊ ವೆಂಕಟಸುಬ್ಬಯ್ಯ ಅವರು ತಮ್ಮ ನೆನಪಿನ ಅಂಗಳದಿಂದ ಬಿಚ್ಚಿಟ್ಟರು.

ಮರೆಯಲಾಗದ ಮಹಾತ್ಮನ ಆ ಕೈ-ಸ್ಪರ್ಶ !

ಮರೆಯಲಾಗದ ಮಹಾತ್ಮನ ಆ ಕೈ-ಸ್ಪರ್ಶ !

ಮಧುಗಿರಿಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಾವು ಸ್ಕೌಟ್ ಚಳುವಟಿಕೆಗಳಲ್ಲಿಯೂ ಗುರುತಿಸಿಕೊಂಡಿದ್ದರಿಂದ ಭಾಷಣದ ನಂತರ ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯಲು ಆಗಮಿಸಿದ್ದ ಮಹಾತ್ಮ ಗಾಂಧಿ ಅವರ ಕೊಠಡಿಯ ಬಾಗಿಲು ಕಾಯುವ ಸೌಭಾಗ್ಯ ತಮ್ಮದಾಗಿತ್ತು ಎಂಬುದನ್ನು ಸ್ಮರಿಸಿಕೊಂಡರು.

ಭಾಷಣ ಮುಗಿಸಿಕೊಂಡು ಬಂದ ಗಾಂಧೀಜಿ ಅವರು ತಮ್ಮ ಬಳಿ ಬಂದು ವೇದಿಕೆಯಲ್ಲಿ ಅರ್ಪಿಸಿದ್ದ ಖಾದಿ ದಾರದ ಹಾರವನ್ನು ಮೇಜಿನ ಮೇಲೆ ಇಡು ಎಂದು ಹಿಂದಿ ಭಾಷೆಯಲ್ಲಿ ಸೂಚಿಸಿದರು.

ಹಿಂದಿ ಬಾರದಿದ್ದರೂ ಗಾಂಧೀಜಿ ಅವರ ಕೈಸನ್ನೆಯ ಸಂಕೇತದ ಭಾಷೆಯನ್ನು ಅರಿತು ದಾರದ ಹಾರವನ್ನು ಮೇಜಿನ ಮೇಲಿರಿಸಿದೆ. ಹಾರವನ್ನು ನೀಡುವ ಸಂದರ್ಭದಲ್ಲಿ ಗಾಂಧೀಜಿ ಅವರು ನನ್ನ ಕೈ ಮುಟ್ಟಿದರು. ಮಹಾತ್ಮನ ಕೈ ಸ್ಪರ್ಶದ ಸುಖವನ್ನು ನೆನೆ-ನೆನೆದು ಸಂತೋಷಪಟ್ಟೆ. ಕೈ ಸ್ಪರ್ಶದ ಆ ಸುಖವನ್ನು ನಾನೆಂದೂ ಮರೆಯಲಾರೆ ಎಂದು ವೆಂಕಟಸುಬ್ಬಯ್ಯ ಭಾವುಕರಾಗಿ ನುಡಿದರು.

ಸ್ವಚ್ಛತೆಯೇ ಮಹಾತ್ಮಾ ಗಾಂಧಿಗೆ ನೀಡುವ ನಿಜವಾದ ಗೌರವ: ಮೋದಿ

ಪ್ರೀತಿ ಮತ್ತು ವಿಶ್ವಾಸದಿಂದ ಅನುಭವಿಸಿ

ಪ್ರೀತಿ ಮತ್ತು ವಿಶ್ವಾಸದಿಂದ ಅನುಭವಿಸಿ

ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರಿಗೆ ಒಳ್ಳೆಯ ಅನುಭವವಿತ್ತು. ಮೊದಲು ದಕ್ಷಿಣ ಆಫ್ರಿಕಾದಲ್ಲಿ ಅಸಮಾನತೆಯ ವಿರುದ್ಧ ಸೆಟೆದು ನಿಂತು ಗೆಲುವು ಕಂಡಿದ್ದ ಗಾಂಧೀಜಿ ಅವರಿಗೆ ನಂತರ ಭಾರತದಲ್ಲಿ ಸ್ವಾತಂತ್ರ್ಯ ದೊರಕಿಸಿಕೊಡಲು ಮುಂದಾಳತ್ವ ವಹಿಸಿಕೊಳ್ಳಲು ಸುಲಭವಾಯಿತು.

ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಗಾಂಧೀಜಿ ಅವರ ಪ್ರಭಾವೀ ಕರೆಯ ಪರಿಣಾಮದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಗಾಂಧೀಜಿ ಅವರನ್ನು ಜೈಲಿಗೆ ಕಳುಹಿಸಿದ್ದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಬ್ರಿಟೀಷರೇ ಗಾಂಧೀ ಅವರಲ್ಲಿ ಕ್ಷಮೆಯಾಚಿಸಿದರು.

ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡಲು ಎಷ್ಟು ಮಂದಿ ಕಾರಾಗೃಹವಾಸ ಅನುಭವಿಸಿದರು. ಎಷ್ಟು ಜನರು ಕಷ್ಟಪಟ್ಟರು ಎಂಬುದನ್ನು ನಾವು ಅರಿತುಕೊಳ್ಳಬೇಕು. ಎಲ್ಲರೂ ಗಾಂಧೀಜಿ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಆ ಮಹಾತ್ಮನನ್ನು ಸದಾ ಕಾಲ ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಅನುಭವಿಸಿ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಹೆಸರಾಂತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಮತ್ತು ಅವರ ತಂಡದಿಂದ ಮಹಾತ್ಮ ಗಾಂಧಿ ಅವರ ಹೃದಯಕ್ಕೆ ಹತ್ತಿರವಾಗಿದ್ದ ಗಾಂಧೀ ಭಜನ್‌ಗಳು ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು. ಅಲ್ಲದೆ, ನೆರೆದ ಸಭಿಕರ ಹೃನ್ಮನಗಳನ್ನು ಸೂರೆಗೊಂಡಿತ್ತು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮುಂಜಾನೆ ಸತ್ಯ ಅವರು ಗಾಂಧಿ ಅವರ ಬಾಲ್ಯ ಕುರಿತಂತೆ ಬೆಳಕು ಚೆಲ್ಲುವ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರಲ್ಲದೆ, ಥಟ್ಟನೆ ಸರಿ ಉತ್ತರ ಕೊಟ್ಟ ಮೂರು ಮಕ್ಕಳಿಗೆ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಿದರು.

ಮಹಾತ್ಮ ಗಾಂಧಿ ಜೀವನ ಚರಿತ್ರೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ಸಮಾರಂಭದ ಗಮನಾರ್ಹ ಅಂಶಗಳಾಗಿದ್ದವು.

ಶಾರದಾ ಸ್ತ್ರೀ ಸಮಾಜದ ಅಧ್ಯಕ್ಷೆ ಶಾರದಾ ಉಮೇಶ್ ರುದ್ರ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪ ನಿರ್ದೇಶಕ ಡಿ. ಪಿ. ಮುರಳೀಧರ್, ಕ್ಷೇತ್ರ ಪ್ರಚಾರ ವಿಭಾಗದ ಸಹಾಯಕ ನಿರ್ಮಾಪಕ ಬಿ ವಿ ಚೇತನ್ ಕುಮಾರ್, ಮನೋಶಾಸ್ತ್ರಜ್ಞರಾದ ಕುಸುಮಾ ಕುಮಾರ್ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

150ನೇ ಗಾಂಧಿ ಜಯಂತಿ, ರಾಷ್ಟ್ರ ನಾಯಕರಿಂದ 'ಸತ್ಯಮೂರ್ತಿ'ಗೆ ಗೌರವ

English summary
Prof G Venkatasubbaiah remembered Mahatma Gandhi's visit to Madhugiri of Tumakuru district in 1927 on the occassion of Gandhi Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X