ಎಟಿಎಂಗೆ ಗುನ್ನ: ಸೆಕ್ಯುರಿಟಿಗೆ ಜೈಲು ದಾರಿ ತೋರಿದ ಟೆಕ್ಕಿ

HSR Layoutನಲ್ಲಿ ಸೆಪ್ಟೆಂಬರ್ 9ರಂದು ಈ ಘಟನೆ ನಡೆದಿದೆ. 29 ವರ್ಷದ ಟೆಕ್ಕಿ ಅಮಿತ್ ಸಿಂಗ್ ತಮ್ಮ ಮನೆ ಬಳಿಯಿರುವ ATM ಕೇಂದ್ರದ ಕಾವಲುಗಾರನ ಕರಾಮತ್ತನ್ನು ಪತ್ತೆಹಚ್ಚಿದ್ದಾರೆ.
ಅಂದಹಾಗೆ, ಸದರಿ ATM ಕೇಂದ್ರದ ಕಾವಲುಗಾರ ಹಣ ಪಡೆಯಲು ಬರುತ್ತಿದ್ದ ಗ್ರಾಹಕರ ATM ಕಾರ್ಡುಗಳನ್ನು PIN ಸಮೇತ ಎಗರಿಸಿ, ಅವರು ಅತ್ತ ಕೇಂದ್ರದಿಂದ ಹೊರಹೋಗುತ್ತಿದ್ದ ಅವರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ.
ಟೆಕ್ಕಿ ಅಮಿತ್ ಒಮ್ಮೆ ಹೀಗೆ ತಮ್ಮ ಕಾರ್ಡ್ ಕಳೆದುಕೊಂಡಿದ್ದೂ ಅಲ್ಲದೆ ಅದೇ ಕಾರ್ಡಿಂದ ಹಣ ತೆಗೆಯುತ್ತಿರುವುದನ್ನು ತಿಳಿದು, ಸ್ವತಃ ಪತ್ತೆದಾರಿಕೆಗೆ ಇಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಖದೀಮ ಕಾವಲುಗಾರ ಅಮಿತ್ ಖಾತೆಯಿಂದ 40 ಸಾವಿರ ರೂ ಡ್ರಾ ಮಾಡಿಕೊಂಡಿದ್ದ.
ತಮ್ಮ ಖಾತೆಯಿಂದ ಹಣ ಡ್ರಾ ಆಗುತ್ತಿದ್ದಂತೆ ಕಾವಲುಗಾರನ ಮೇಲೆ ಅನುಮಾನಗೊಂಡ ಅಮಿತ್, ತಕ್ಷಣ ATM ಕೇಂದ್ರದತ್ತ ದೌಡಾಯಿಸಿದ್ದಾರೆ. ಅಮಿತನನ್ನು ನೋಡುತ್ತಿದ್ದಂತೆ ಕಾವಲುಗಾರ ಪರಾರಿಯಾಗಿದ್ದಾನೆ. ಆದರೂ ಅವನಿಗಾಗಿ ಕಾದುಕುಳಿತಿದ್ದ ಅಮಿತ್ ಗೆ ಮತ್ತೆ ಕಾವಲುಗಾರನ ದರುಶನ ಭಾಗ್ಯವಾಗಿದೆ. ಜತೆಗೆ, ಅವನು ಇನ್ನೂ ಹಲವಾರು ಕಾರ್ಡುದಾರರನ್ನು ಹೀಗೆ ಯಾಮಾರಿಸಿರುವುದು ಕಂಡುಬಂದಿದೆ.
ಕಾವಲುಗಾರನನನ್ನು ಹಿಡಿದು ಕೇಂದ್ರದ ಒಳಗಿರುವ ಚೇಂಬರಿಗೆ ಹೋದಾಗ ಅಲ್ಲಿ ಕಾವಲುಗಾರ ಅನೇಕ ಗ್ರಾಹಕರ ಕಾರ್ಡ್ ನಂಬರುಗಳು ಮತ್ತು PIN ಸಂಖ್ಯೆಗಳನ್ನು ಪಟ್ಟಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣ ಅವನನ್ನು ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಕಾವಲುಗಾರನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.












Click it and Unblock the Notifications