ಬೆಂಗಳೂರಿನ ರಸ್ತೆಗುಂಡಿ ಮುಚ್ಚಲು ಬಂತು ಯಂತ್ರ
ಬೆಂಗಳೂರು, ನ. 21 : ಬೆಂಗಳೂರಿನ ಜನರಿಗೆ ರಸ್ತೆಯನ್ನು ಗುಂಡಿ ಮುಕ್ತವಾಗಿಸುತ್ತೇವೆ ಎಂದು ಭರವಸೆ ನೀಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಂತ್ರದ ಮೊರೆ ಹೋಗಿದೆ. ಕೆನಡಾದಿಂದ ತರಿಸಿರುವ ಪೈಥಾನ್-5000 ಯಂತ್ರ ಬೆಂಗಳೂರಿನ ರಸ್ತೆಯ ಗುಂಡಿ ಮುಚ್ಚುವ ಕಾರ್ಯಾಚರಣೆಯನ್ನು ಗುರುವಾರದಿಂದ ಆರಂಭಿಸಲಿದೆ. ಎಂಟು ಗಂಟೆಗಳಲ್ಲಿ 30 ಕಿ.ಮೀ.ರಸ್ತೆಯ ಗುಂಡಿಯನ್ನು ಯಂತ್ರ ಮುಚ್ಚಲಿದೆ.
ಸಿಎಂ ಸಿದ್ದರಾಮಯ್ಯ, ಮೇಯರ್ ಕಟ್ಟೆ ಸತ್ಯನಾರಾಯಣ, ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀ ನಾರಾಯಣ ಯಂತ್ರದ ಕಾರ್ಯವನ್ನು ಕೆಲವು ದಿನಗಳ ಹಿಂದೆ ವೀಕ್ಷಿಸಿದ್ದಾರೆ. ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತವಾಗಿರುವ ಕಾರ್ಯವನ್ನು ಯಂತ್ರ ಇಂದಿನಿಂದ ಆರಂಭಿಸಲಿದೆ.

ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಜನರು ದೂರುವ ಆರು ವಿಭಾಗಗಳ ಪ್ರಮುಖ ರಸ್ತೆಗಳಲ್ಲಿ ಯಂತ್ರ ಗುರುವಾರದಿಂದ ತನ್ನ ಕಾರ್ಯಚರಣೆ ಆರಂಭಿಸಲಿದೆ. ಬಿಬಿಎಂಪಿಯ ಒಪ್ಪಂದದಂತೆ ರಸ್ತೆಯನ್ನು ದುರಸ್ತಿಗೊಳಿಸುವ ಕಂಪನಿಯು ಮುಂದಿನ ಮೂರು ವರ್ಷಗಳ ಕಾಲ ಅದರ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. (ಗುಂಡಿ ಮುಕ್ತವಾಗಲಿವೆ ಬೆಂಗಳೂರು ರಸ್ತೆಗಳು)
ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆ (ಆರ್ಟ್ಸ್) ಮೂಲಕ ಈ ಯಂತ್ರವನ್ನು ಖರೀದಿಸಿದೆ. ಆಮದು ಸುಂಕ ಸೇರಿ ಈ ಯಂತ್ರಕ್ಕೆ 3 ಕೋಟಿ ರೂ. ಆಗುತ್ತದೆ. ಜೋರಾಗಿ ಮಳೆ ಸುರಿತ್ತಿದ್ದರೂ, ಯಂತ್ರ ಯಾವುದೇ ಅಡೆತಡೆ ಇಲ್ಲದೇ ಕೆಲಸ ಮಾಡಲಿದೆ. ಈ ಯಂತ್ರಕ್ಕೆ ಒಂದು ಬಾರಿ 5 ಟನ್ ಡಾಂಬರ್ ಮಿಶ್ರಣ ತುಂಬಬಹುದು. ದಿನಕ್ಕೆ ಸುಮಾರು 30 ಕಿ.ಮೀ ಉದ್ದದ ರಸ್ತೆ ಗುಂಡಿಗಳನ್ನು ಇದು ಮುಚ್ಚುತ್ತದೆ.
ಬಿಬಿಎಂಪಿ ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನ ರಸ್ತೆಯ ಗುಂಡಿಗಳಿಂದ ಮುಕ್ತವಾಗಲಿದೆ ಎಂಬ ಭರವಸೆ ಹೊಂದಿದೆ. ನಗರದ 1,940 ಕಿ.ಮೀ ಉದ್ದದ ಮುಖ್ಯ ಹಾಗೂ ಅಡ್ಡರಸ್ತೆಗಳ ಗುಂಡಿ ಮುಚ್ಚುವ ಗುತ್ತಿಗೆಯನ್ನು ಆರ್ಟ್ ಸಂಸ್ಥೆಗೆ ನೀಡಲಾಗಿದ್ದು, ಅದು ಗುರುವಾರದಿಂದ ತನ್ನ ಕಾರ್ಯ ಆರಂಭಿಸಲಿದೆ.












Click it and Unblock the Notifications