Viral Video: ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಪೊಲೀಸ್ ಅಧಿಕಾರಿಯ ಆರ್ತನಾದ
ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರದಲ್ಲಿ ಭ್ರಷ್ಟ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರನ್ನು ಲಂಚ ಸ್ವೀಕರಿಸುವ ವೇಳೆಯೇ ರೆಡ್‌ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಾಮರಾಜಪೇಟೆಯ ಸಿಎಆರ್ ಗ್ರೌಂಡ್ಸ್‌ನಲ್ಲಿ ಶುಕ್ರವಾರ ಸಂಜೆ ಸುಮಾರು 4.30ರ ಸಮಯದಲ್ಲಿ ಈ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಅಧಿಕಾರಿಯನ್ನು ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಎಂದು ಗುರುತಿಸಲಾಗಿದೆ.
₹5 ಲಕ್ಷ ಲಂಚಕ್ಕೆ ಬೇಡಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅಕ್ಬರ್ ಎಂಬುವವರು ಲೋಕಾಯುಕ್ತರಿಗೆ ಅಧಿಕೃತ ದೂರು ಸಲ್ಲಿಸಿದ್ದರು. ದೂರುದಾರರ ಪ್ರಕಾರ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಸಹಾಯ ಮಾಡುವ ನೆಪದಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಒಟ್ಟು ₹5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ದೂರುದಾರರಾದ ಬಿಲ್ಡರ್ ಜನವರಿ 24ರಂದು ಬೆಂಗಳೂರು ನಗರದ ಸಿರ್ಸಿ ಸರ್ಕಲ್ ಬಳಿ ಇನ್ಸ್‌ಪೆಕ್ಟರ್‌ಗೆ ಲಂಚದ ಮೊದಲ ಹಂತವಾಗಿ 1 ಲಕ್ಷ ರೂಪಾಯಿ ಹಣ ಪಾವತಿಸಿದ್ದರು. ಬಳಿಕ ಉಳಿದ 4 ಲಕ್ಷ ರೂಪಾಯಿಯನ್ನು ಕೂಡಲೇ ನೀಡಲೇಬೇಕು ಎಂದು ಇನ್ಸ್‌ಪೆಕ್ಟರ್ ಒತ್ತಡ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಈ ಪ್ರಕರಣ ಮಾತ್ರವಲ್ಲದೆ ಕಳೆದ ವರ್ಷವೂ ತಮ್ಮ ಸ್ನೇಹಿತರೊಂದಿಗೆ ಸಂಬಂಧಿಸಿದ ಮತ್ತೊಂದು ವಿವಾದದ ಪ್ರಕರಣದಲ್ಲಿಯೂ ಇದೇ ಇನ್ಸ್‌ಪೆಕ್ಟರ್ ₹6 ಲಕ್ಷ ಹಣವನ್ನು ಬಲವಂತವಾಗಿ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ದೂರುದಾರರು ಮಾಡಿದ್ದಾರೆ. ಈ ಮೂಲಕ ಗೋವಿಂದರಾಜು ಅವರ ಮೇಲೆ ಸರಣಿ ಲಂಚ ಮತ್ತು ದೌರ್ಜನ್ಯ ಆರೋಪಗಳು ಕೇಳಿಬಂದಿವೆ. ದೂರುದಾರರು ತಮ್ಮ ಆರೋಪಗಳನ್ನು ದೃಢಪಡಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಪೆನ್‌ಡ್ರೈವ್ ಒದಗಿಸಿದ್ದು, ಅದರಲ್ಲಿ ಇನ್ಸ್‌ಪೆಕ್ಟರ್ ಲಂಚ ಕೇಳುತ್ತಿರುವ ಆಡಿಯೋ ಇದೆ ಎಂದು ತಿಳಿದುಬಂದಿದೆ. ಈ ದಾಖಲೆಗಳ ಆಧಾರದಲ್ಲೇ ಲೋಕಾಯುಕ್ತ ಪೊಲೀಸರು ಅಧಿಕಾರಿ ವಿರುದ್ಧ ಬಲೆ ಬೀಸಿದ್ದಾಗಿ ತಿಳಿದುಬಂದಿದೆ.
ಈಗ ಲಭ್ಯವಿರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 7(a) ಅಡಿಯಲ್ಲಿ ಇನ್ಸ್‌ಪೆಕ್ಟರ್ ಗೋವಿಂದರಾಜು ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸುತ್ತಿದ್ದು, ಲೋಕಾಯುಕ್ತದ ಚುರುಕು ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಎಲ್ಲ ಭ್ರಷ್ಟರಿಗೆ ಇದೇ ಗತಿ ಆಗುತ್ತೆ
ಈ ವಿಡಿಯೋ ಹಂಚಿಕೊಂಡಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಜನರು ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೆರೆಯುವ ಎಲ್ಲ ದುಷ್ಟ ಮತ್ತು ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದನ್ನು ನೋಡಿ ಸದಾ ನೆನಪಿಟ್ಟುಕೊಳ್ಳಬೇಕು. ಬದಲಾಗದಿದ್ದರೆ ಇಂದಲ್ಲ ನಾಳೆ ನಿಮಗೂ ಇದೇ ಗತಿ ಆಗಲಿದೆ ಎಂದು ಎಚ್ಚರಿಸಿದ್ದಾರೆ.
ಪರಿಸ್ಥಿತಿ ಕೈಮೀರಿದರೆ ಭ್ರಷ್ಟರನ್ನು ಜನರು ಅಟ್ಟಾಡಿಸಿ ಹೊಡೆಯುತ್ತಾರೆ, ಎಚ್ಚರ! ಶ್ರೀಲಂಕಾ, ಬಾಂಗ್ಲಾ, ನೇಪಾಳ ನೆನಪಿಸಿಕೊಳ್ಳಿ. ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆಯ ಭ್ರಷ್ಟ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಇದು. ಕೆಆರ್‌ಎಸ್ ಪಕ್ಷದವರನ್ನು ಅಕ್ರಮ, ಅಧರ್ಮದಿಂದ ಬಗ್ಗುಬಡಿಯಲು ಪ್ರಯತ್ನಿಸುವ ಭ್ರಷ್ಟರಿಗೆ ಪ್ರಕೃತಿಯೇ ಪಾಠ ಕಲಿಸುತ್ತದೆ. ಇದೂ ಅದರ ಭಾಗ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಸಾರ್ವಜನಿಕ ವಲಯಲ್ಲಿ ಚರ್ಚೆ ಜೋರಾಗಿದೆ.












Click it and Unblock the Notifications