ಚುನಾವಣಾ ಸಮೀಕ್ಷೆ: ಬೆಂಗಳೂರಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ಎಷ್ಟು ಸೀಟು
ಬೆಂಗಳೂರು, ಮಾರ್ಚ್ 05: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 10ರ ಬಳಿಕ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಬಹುದು? ಎಂಬುದು ಲೆಕ್ಕಾಚಾರ.
India TV-CNX ಲೋಕಸಭೆ ಚುನಾವಣೆ 2024ರ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಕರ್ನಾಟಕದಲ್ಲಿಯೂ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯ ವರದಿಯನ್ನು ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಬಿಜೆಪಿ 22, ಜೆಡಿಎಸ್ 2 ಮತ್ತು ಕಾಂಗ್ರೆಸ್ 4 ಸ್ಥಾನಗಳಿಸಲಿದೆ ಎಂದು ಅಂದಾಜಿಸಿದೆ.

ಬೆಂಗಳೂರಲ್ಲಿ ಯಾರಿಗೆ ಎಷ್ಟು ಸೀಟು?; ಬೆಂಗಳೂರು ನಗರದಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಕೇಂದ್ರ ಎಂಬ 4 ಲೋಕಸಭಾ ಕ್ಷೇತ್ರಗಳಿವೆ.
ಹಾಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ಬಿಜೆಪಿಯ ವಶದಲ್ಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಸಂಸದರು.
India TV-CNX ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಸಮೀಕ್ಷೆಯ ಪ್ರಕಾರ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ ಹಾಲಿ ಸಂಸದರು.
2019ರ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದ ಏಕೈಕ ಸೀಟು ಬೆಂಗಳೂರು ಗ್ರಾಮಾಂತರ. ಡಿಕೆಶಿ ಸಹೋದರರ ಪ್ರಭಾವದಿಂದ ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಬೆಂಗಳೂರು ದಕ್ಷಿಣದಲ್ಲಿ ಹಾಲಿ ಸಂಸದ ತೇಜಸ್ವಿಸೂರ್ಯಗೆ ಟಿಕೆಟ್ ಸಿಗುವುದು ಖಚಿತ. ಆದರೆ ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ ಸ್ಪರ್ಧೆ ಮಾಡಲಿದ್ದಾರೆಯೇ? ಎಂಬುದು ಪ್ರಶ್ನೆಯಾಗಿದೆ. ಅವರು ಕಣಕ್ಕಿಳಿಯಲಿಲ್ಲ ಎಂದರೆ ಅಭ್ಯರ್ಥಿ ಯಾರು? ಎಂಬುದು ಕುತೂಹಲ.
ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಕರ್ನಾಟಕದಲ್ಲಿ ಚುನಾವಣೆ ಎದುರಿಸುತ್ತಿವೆ. ಆದರೆ ಬೆಂಗಳೂರು ನಗರದ ಯಾವುದೇ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಡುವುದಿಲ್ಲ ಎಂಬ ಮಾತಿದೆ. ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಇನ್ನೂ ಸಹ ಅಂತಿಮಗೊಂಡಿಲ್ಲ.
ಬೆಂಗಳೂರು ಗ್ರಾಮಾಂತರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ. ಎಚ್. ಡಿ. ಕುಮಾರಸ್ವಾಮಿಯೇ ಇಲ್ಲಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಡಿ. ಕೆ. ಸುರೇಶ್ ಕ್ಷೇತ್ರದ ಮೇಲೆ ಅಪಾರ ಹಿಡಿತ ಹೊಂದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ಯಾರೇ ಅಭ್ಯರ್ಥಿಯಾದರೂ ಸಹ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದ ಕುರಿತು India TV-CNX ಯಾವುದೇ ಸಮೀಕ್ಷೆ ನಡೆಸಿಲ್ಲ. ಕ್ಷೇತ್ರದ ಹಾಲಿ ಸಂಸದರು ಪಿ. ಸಿ. ಮೋಹನ್. ಈ ಬಾರಿಯೂ ಅವರಿಗೆ ಟಿಕೆಟ್ ಸಿಗಲಿದೆ? ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಡಿ. ಕೆ. ಶಿವಕುಮಾರ್. ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ನಗರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಉಳಿಸಿಕೊಳ್ಳುವ ಜೊತೆಗೆ ನಗರದ ಉಳಿದ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ಸಹ ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಬಿಜೆಪಿ ನಗರದಲ್ಲಿ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ.












Click it and Unblock the Notifications