ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಬಿಬಿಎಂಪಿ ಚುನಾವಣೆಗೆ ಟಿಕೆಟ್ ಪಡೆಯಿರಿ ಎಂದ ಮಾಜಿ ಮೇಯರ್!
ಬೆಂಗಳೂರು, ಏಪ್ರಿಲ್.06: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಕತ್ ಆಗಿಯೇ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ನಾಮಪತ್ರ ಸಲ್ಲಿಸಿದ್ದು, ಅವರ ಪರವಾಗಿ ಇತರ ನಾಯಕರು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಇದೇ ವೇಳೆಯಲ್ಲಿ ಮಾಜಿ ಮೇಯರ್ ಎನ್ ಮಂಜುನಾಥ್ ರೆಡ್ಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುವವರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಹೌದು.. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಸತತ ಪ್ರಯತ್ನ ಪಡುವವರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ!.

ಬಿಬಿಎಂಪಿ ಆಯಾ ವಾರ್ಡ್‌ಗಳಲ್ಲಿ ಪಕ್ಷದ ಲೋಕಸಭಾ ಅಭ್ಯರ್ಥಿಗಳಿಗೆ ಉತ್ತಮ ಮುನ್ನಡೆ ಸಾಧಿಸಲು ಸಹಾಯ ಮಾಡಿ ಎಂದು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಗೆ ಕಾಂಗ್ರೆಸ್ ನಿರ್ದೇಶನ ನೀಡಿದೆ. ಬೆಂಗಳೂರಿನಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರ ಸಭೆಯ ಬಳಿಕ ಪಕ್ಷವು ಈ ಸೂಚನೆ ನೀಡಿದೆ.
ಈ ವಿಷಯವನ್ನು ಮಾಜಿ ಮೇಯರ್ ಎನ್ ಮಂಜುನಾಥ್ ರೆಡ್ಡಿ ಖಚಿತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಯತ್ನ ಪಡುವಂತೆ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಲಾಗಿದೆ. ವಾರ್ಡ್ ಮಟ್ಟದಲ್ಲಿ ಅವರು ಪಡೆಯುವ ಮುನ್ನಡೆಗಳು ಬಿಬಿಎಂಪಿ ಚುನಾವಣೆಗೆ ಪಕ್ಷದ ಟಿಕೆಟ್ ಪಡೆಯಲು ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಕೂ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಪಕ್ಷವನ್ನು ಬಲಪಡಿಸಲು ಇಂತಹ ನಿರ್ಧಾರಗಳು ಅಗತ್ಯ ಎಂದಿದ್ದಾರೆ. "ಕಾಂಗ್ರೆಸ್‌ನಿಂದ ಕಾರ್ಪೊರೇಟರ್‌ಗಳು ಅಥವಾ ಶಾಸಕರಾಗಲು ಬಯಸುವವರು ನಗರದಲ್ಲಿ ಹಾಲಿ ಬಿಜೆಪಿ ಸಂಸದರನ್ನು ಕಣಕ್ಕಿಳಿಸಲು ಶ್ರಮಿಸಬೇಕು" ಎಂದು ಹೇಳಿದ್ದಾರೆ.
"ಇದೊಂದು ಒಳ್ಳೆಯ ನಿರ್ಧಾರ. ಈ ಹಿಂದೆ ಬಿಬಿಎಂಪಿ ಚುನಾವಣೆಗೆ ನಗರದಲ್ಲಿ ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿತ್ತು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು" ಎಂದು ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಹೇಳಿದ್ದಾರೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ಆಕಾಂಕ್ಷಿಯಾಗಿದ್ದ ಜಿ ಪದ್ಮಾವತಿ ಅವರು ತಮ್ಮ ಪ್ರಕಾಶ್‌ನಗರ ವಾರ್ಡ್‌ನಲ್ಲೂ ಸಾಕಷ್ಟು ಶ್ರಮಿಸಿದ್ದಾರೆ. ಅವರು ಕೊರೊನಾ ಸಮಯದಲ್ಲಿ ಜನರಿಗೆ ಸಹಾಯ ಮಾಡಿದರು. ಆದರೆ, ಅವರನ್ನು ಕಡೆಗಣಿಸಿ ಪುಟ್ಟಣ್ಣ ಅವರಿಗೆ ಪಕ್ಷದ ಟಿಕೆಟ್ ನೀಡಿದ್ದರು. ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವವರು ಇಂತಹ ಬೆಳವಣಿಗೆಗಳಿಂದ ಭಯಗೊಂಡಿದ್ದಾರೆ' ಎಂದು ಮಾಜಿ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಾರ್ಡ್‌ಗಳ ವಿಂಗಡಣೆ ಮತ್ತು ಕೋಟಾ ನಿಗದಿಯಿಂದಾಗಿ 2020 ರಿಂದ ಬಿಬಿಎಂಪಿ ಕೌನ್ಸಿಲ್‌ಗೆ ಚುನಾವಣೆ ನಡೆದಿಲ್ಲ. ಹಿಂದಿನ ಸರ್ಕಾರಗಳು ಚುನಾವಣೆ ನಡೆಸುವ ಪ್ರಯತ್ನ ಮಾಡಲಿಲ್ಲ. ಲೋಕಸಭೆ ಚುನಾವಣೆ ನಂತರ ಬಿಬಿಎಂಪಿ ಚುನಾವಣೆಯನ್ನು ಆಗಸ್ಟ್‌ನೊಳಗೆ ನಡೆಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸ್ಥಳೀಯ ಸಂಸ್ಥೆ ಇಲ್ಲದೇ ಬೆಂಗಳೂರು ನಿರ್ವಹಣೆ ಕಷ್ಟವಾಗಿದೆ ಎನ್ನುತ್ತಾರೆ ಹಲವು ನಾಯಕರು.












Click it and Unblock the Notifications