ಬೆಂಗಳೂರು ಸಮೀಪದ ಯೋಜನೆಗೆ 9 ಗ್ರಾಮಗಳಲ್ಲಿ ಭೂಸ್ವಾಧೀನ: ಭೂಮಿಗೆ ಬಂಗಾರದ ಬೆಲೆ ನಿರೀಕ್ಷೆ
ಬೆಂಗಳೂರು ಹಾಗೂ ಬೆಂಗಳೂರು ಸಮೀಪದ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಅದರಲ್ಲೂ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ, ಪ್ರಾಪರ್ಟಿಗೆ ಒಳ್ಳೆಯ ಬೆಲೆ ಬಂದಿದೆ. ಅದರಲ್ಲೂ ಬೆಂಗಳೂರು ಸಮೀಪದ ಜಿಲ್ಲೆಗಳಲ್ಲಿ ಒಂದಾಗಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗೆ ಭೂಮಿ ಬೆಲೆ ಹೆಚ್ಚಳವಾಗಿದೆ. ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಜಾರಿ ಆಗುತ್ತಿರುವ ಪ್ರಮುಖ ಯೋಜನೆಯಿಂದಾಗಿ ಈ ಭಾಗದ ಆಸ್ತಿದಾರರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ.
ಬೆಂಗಳೂರಿನಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತಿದೆ. ಮೂಲಸೌಕರ್ಯ ಚರ್ಚೆ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳದ ಚರ್ಚೆಗಳ ನಡುವೆಯೂ ಭೂಮಿಗೆ ಬಂಗಾರದ ಬೆಲೆ ಮುಂದುವರಿದಿದೆ. ಇದೀಗ ಬೆಂಗಳೂರು ಸಮೀಪದ ಬೆಂಗಳೂರು ದಕ್ಷಿಣ ಜಿಲ್ಲೆಯ ವಿವಿಧ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ರಾಮನಗರ ತಾಲ್ಲೂಕು, ಬಿಡದಿ ಬಳಿಯ 9 ಗ್ರಾಮಗಳ ಒಟ್ಟು 7,481 ಎಕರೆಯಷ್ಟು ಭೂಮಿಯನ್ನು ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆಗಾಗಿ ಭೂ ಸ್ವಾಧೀನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆ ಚುರುಕು
ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ಸರ್ಕಾರವು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲವೊಂದು ವಿವಾದಗಳ ಹೊರತಾಗಿಯೂ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಪ್ರಕ್ರಿಯೆ ಶುರು ಮಾಡುವಂತೆ ಹೇಳಿದೆ.
ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಭೂ ಪರಿಹಾರ ದರ ನಿಗದಿ ಮಾಡಿದ್ದಾರೆ. ಭೂಮಿ ಕಳೆದುಕೊಳ್ಳುತ್ತಿರುವ ರೈತರ ಹಿತದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿಗೆ ಕೆಲವು ನಿರ್ದಿಷ್ಟ ಗರಿಷ್ಠ ಬೆಲೆ / ಹಣ ಕೊಡುವುದಕ್ಕೆ ಬೇಕಾದ ಕ್ರಮಗಳನ್ನು ಅನುಸರಿಸಲಾಗಿದೆ.
ಗರಿಷ್ಠ ಬೆಲೆ: ಈ ಭಾಗದಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪ ನಗರ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಮಿ ನೀಡುವ ಆಸ್ತಿದಾರರಿಗೆ ಹೆಚ್ಚು ಹಣ ಅಥವಾ ಗರಿಷ್ಠ ಬೆಲೆ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಭಾಗದ ರೈತರು ಹಾಗೂ ಆಸ್ತಿದಾರರಿಗೆ ಯಾವುದೇ ಲೋಪವಾಗದಂತೆ ಪರಿಹಾರ ಮೊತ್ತವನ್ನು ನಿಗದಿ ಮಾಡುವಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಭೂ ಪರಿಹಾರ ದರವನ್ನು ನಿಗದಿ ಮಾಡಿ ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಇದು ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಿಗದಿಯಾದ ಗರಿಷ್ಠ ಭೂ ಪರಿಹಾರ ದರಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.
ಈ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾನೂನಿಲ್ಲಿ ಅವಕಾಶವಿರುವ ಹೆಚ್ಚು ಮೊತ್ತದ ಭೂ ಪರಿಹಾರ ದರ ನಿಗದಿ ಮಾಡಲಾಗಿದೆ. ಭೂಮಿಯ ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ದರ ಭೂ ಪರಿಹಾರವಾಗಿ ನಿಗದಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮವಾರು ಭೂ ಪರಿಹಾರ ಮೊತ್ತ ನಿಗದಿ
ಗ್ರಾಮಗಳ ಹೆಸರು ಪ್ರತಿ ಎಕರೆ ಪರಿಹಾರ ದರ (ರೂ. ಲಕ್ಷಗಳಲ್ಲಿ)
ಭೈರಮಂಗಲ 242.75
ವಡೇರಹಳ್ಳಿ 214.50
ಮಂಡಲಹಳ್ಳಿ 214.50
ಕೆ.ಜಿ. ಗೊಲ್ಲರ ಪಾಳ್ಯ 207.30
ಬನ್ನಿಗಿರಿ 207.30
ಹೊಸೂರು 214.50
ಅರಳಾಳು ಸಂದ್ರ 214.50
ಕಂಚುಗಾರನಹಳ್ಳಿ 207.30
ಕೆಂಪಯ್ಯನ ಪಾಳ್ಯ 207.30
ಇನ್ನು ಈ ದರಗಳು ಒಪ್ಪಿಗೆ ಮೇರೆಗೆ ನಡೆಯುವ ಭೂಸ್ವಾಧೀನಕ್ಕೆ ಅನ್ವಯವಾಗಲಿದೆ. ಒಂದೊಮ್ಮೆ ಭೂ ಮಾಲೀಕರು / ಆಸ್ತಿದಾರರು ಒಪ್ಪಿಗೆ ಮೇರೆಗೆ ಭೂಸ್ವಾಧೀನ ಮಾಡದಿದ್ದರೆ ಮೇಲೆ ಉಲ್ಲೇಖಿಸಿದ ದರಗಳಿಗಿಂತ ಶೇ. 10ರಷ್ಟು ದರ ಕಡಿತವಾಗಲಿದೆ. ಯಾವುದಾದರೂ ಜಮೀನುಗಳಿಗೆ ಮಾರ್ಗಸೂಚಿ ದರ ಆಧಾರಿತವಾಗಿ 2013ರ ಕಾಯಿದೆ ಅನುಸಾರ ಮೇಲೆ ನಿರ್ಧರಿಸಿದ ದರಕ್ಕಿಂತ ಹೆಚ್ಚಿನ ಪರಿಹಾರ ನಿಗದಿಯಾಗುವ ಸಂದರ್ಭಗಳಲ್ಲಿ ಈ ನಿರ್ದಿಷ್ಟ ಜಮೀನುಗಳಿಗೆ ಮಾರ್ಗಸೂಚಿ ದರ ಆಧಾರಿತವಾಗಿ ಪರಿಹಾರ ನಿಗದಿ ಮಾಡಲಾಗುತ್ತದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚು ಪರಿಹಾರ: ಇನ್ನು ಪರಿಹಾರದಿಂದಲೇ ಇದು ಈ ಯೋಜನೆಯು ಹೆಚ್ಚು ಮನ್ನಣೆ ಗಳಿಸಿದೆ. ರೈತರ ಮನವೊಲಿಸುವುದಕ್ಕೆ ರಾಜ್ಯ ಸರ್ಕಾರವು ಹಲವು ಸರ್ಕಸ್‌ಗಳನ್ನು ಮಾಡುತ್ತಿದೆ.












Click it and Unblock the Notifications