ಬೆಂಗಳೂರಿನಲ್ಲೇ ಮಿನಿ ಪಶ್ಚಿಮ ಘಟ್ಟ ನಿರ್ಮಾಣ! ಎಲ್ಲಿ ತಿಳಿಯಿರಿ
ಪಶ್ಚಿಮ ಘಟ್ಟಗಳು ರಾಜ್ಯದ ನಾಡಿಮಿಡಿತ, ಇಲ್ಲಿನ ಸಸ್ಯಗಳು, ಜಲಪಾತಗಳು, ನಿತ್ಯ ಹರಿದ್ವರ್ಣ ಕಾಡುಗಳು ನಾಡಿನ ಬೆಲೆ ಕಟ್ಟಲಾಗದ ಸಂಪನ್ಮೂಗಳೇ ಸರಿ. ಮಳೆಗಾಲದಲ್ಲಿ ಬೆಂಗಳೂರಿನ ಮಂದಿ ಹೆಚ್ಚಾಗಿ ಪಶ್ಚಿಮ ಘಟ್ಟಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಮಾಮೂಲಿ, ಆದರೆ ಬೆಂಗಳೂರಿನಲ್ಲೇ ಪಶ್ಚಿಮ ಘಟ್ಟಗಳು ನಿರ್ಮಾಣವಾದರೆ? ಹೌದು, ಇಂತಹದ್ದೊಂದು ಕೆಲಸ ನಡೆಯುತ್ತಿದೆ.
ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣ ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆರು ಎಕರೆ ಬಂಜರು ಭೂಮಿಯಲ್ಲಿ ಸಹ್ಯಾದ್ರಿ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಜೀವವೈವಿಧ್ಯ ತಜ್ಞ ಕೇಶವ ಮೂರ್ತಿ ಮಾತನಾಡಿ, "ಎರಡು ವರ್ಷಗಳ ಹಿಂದೆ ಸಹ್ಯಾದ್ರಿ ಪ್ರದೇಶದಿಂದ 190 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ತರಿಸಿ ನೆಡಲಾಗಿದೆ, ಅದರಲ್ಲಿ ಕೆಲವು ಹಣ್ಣಿನ ಗಿಡಗಳು ಸೇರಿದಂತೆ 132 ಗಿಡಗಳು ಉಳಿದುಕೊಂಡಿವೆ." ಎಂದು ಹೇಳಿದರು.
400 ಜಾತಿಯ ಗಿಡ ನೆಟ್ಟ ಇಲಾಖೆ
"ಇದರಿಂದ ಈಗ ಮತ್ತಷ್ಟು ಹೆಚ್ಚು ಗಿಡಗಳನ್ನು ನೆಡಲು ತೋಟಗಾರಿಕಾ ಇಲಾಖೆ ಉತ್ಸಾಹಗೊಂಡಿದ್ದು, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಪಶ್ಚಿಮ ಘಟ್ಟಗಳ 400 ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ನೆಡಲಾಗಿದೆ" ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮಂಗಳವಾರ ಸಿದ್ದಾಪುರ ಸಮೀಪದ ಲಾಲ್‌ಬಾಗ್ ರಾಕ್ ಗಾರ್ಡನ್‌ನಲ್ಲಿ ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್, ಖ್ಯಾತ ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ, ಕರ್ನಾಟಕ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಮಾಜಿ ಸಲಹೆಗಾರ ಎಂ.ಆರ್.ದೊರೆಸ್ವಾಮಿ ಜತೆಗೂಡಿ ಸಾಂಕೇತಿಕವಾಗಿ ಸಸಿ ನೆಟ್ಟರು.
ಎರಡು ವರ್ಷಗಳಿಂದ ಕೆಲಸ
ಕಳೆದ ಎರಡು ವರ್ಷಗಳಿಂದ ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಣ್ಣಿನ ಫಲವತ್ತತೆ ಕುರಿತು ಕೆಲಸ ಮಾಡುತ್ತಿದ್ದು, ಮಂಗಳವಾರ ಸಹ್ಯಾದ್ರಿ ಬೆಟ್ಟದಿಂದ ತರಿಸಿದ್ದ 400 ಸಸಿಗಳನ್ನು ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ನೆಡಲಾಗಿದೆ. ಮುಂದಿನ ದಿನಗಳಲ್ಲಿ, ಜಲಚರಗಳು ಮತ್ತು ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಣ್ಣ ಕೊಳಗಳನ್ನು ಸಹ ರಚಿಸಲಾಗುವುದು, ಇದು ಮರಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಲಾಲ್‌ಬಾಗ್ ಅಧಿಕಾರಿಗಳಿಗೆ ಈ ಯೋಜನೆಯಲ್ಲಿ ಸಹಾಯ ಮಾಡುತ್ತಿರುವ ಕೇಶವ ಮೂರ್ತಿ ಹೇಳಿದರು.
ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಪೊದೆಗಳು, ಗಿಡಮೂಲಿಕೆಗಳ ಸಸ್ಯಗಳನ್ನು ಸೇರಿಸಲಾಗುವುದು ಎಂದು ತೋಟಗಾರಿಕಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications