ಬೆಂಗಳೂರು; ಲಾಲ್ ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ ಏರಿಕೆ
ಬೆಂಗಳೂರು, ಫೆಬ್ರವರಿ 02; ತೋಟಗಾರಿಕಾ ಇಲಾಖೆ ಬೆಂಗಳೂರಿನ ಲಾಲ್ ಬಾಗ್ ಪ್ರವೇಶ, ವಾಹನ ನಿಲುಗಡೆ ಶುಲ್ಕವನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ. ಫೆಬ್ರವರಿ 2ರ ಮಂಗಳವಾರದಿಂದಲೇ ಹೊಸ ಆದೇಶ ಜಾರಿಗೆ ಬಂದಿದೆ.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಜಿ. ಕುಸುಮಾ ಈ ಕುರಿತು ಮಾಹಿತಿ ನೀಡಿದ್ದಾರೆ. "ದೇಶದ ಇತರೆ ಉದ್ಯಾನಗಳಲ್ಲಿ ಪ್ರವೇಶ ಶುಲ್ಕ 50 ರೂ. ಇದೆ. ಆದರೆ, ಸಾರ್ವಜನಿಕರಿಗೆ ಹೊರೆಯಾಗದಂತೆ ಕೇವಲ 5 ರೂ. ಹೆಚ್ಚಿಸಲಾಗಿದೆ" ಎಂಮದುದ ಹೇಳಿದ್ದಾರೆ.

ಸಮಿತಿಯ ಸಭೆಯಲ್ಲಿ ಚರ್ಚಿಸಿ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. ಪರಿಷ್ಕೃತ ದರಗಳು ಮಂಗಳವಾರದಿಂದಲೇ ಜಾರಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದರ ಎಷ್ಟಾಗಿದೆ? : ವಯಸ್ಕರು ಲಾಲ್ ಬಾಗ್‌ಗೆ ಭೇಟಿ ನೀಡಲು 25 ರೂ. ಪ್ರವೇಶ ಶುಲ್ಕವನ್ನು ನೀಡಬೇಕಿತ್ತು. ಅದನ್ನು ಈಗ 30 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಮಕ್ಕಳಿಗೆ ಉದ್ಯಾನಕ್ಕೆ ಪ್ರವೇಶ ಉಚಿತವಾಗಿತ್ತು. ಈಗ 6-12 ವರ್ಷದ ಮಕ್ಕಳಿಗೆ 10 ರೂ. ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ 30 ರೂ.ಪ್ರವೇಶ ದರವನ್ನು ನಿಗದಿ ಮಾಡಲಾಗಿದೆ.
ವಾಹನಗಳ ಪಾರ್ಕಿಂಗ್; ಲಾಲ್ ಬಾಗ್‌ನಲ್ಲಿ ವಾಹನಗಳ ಪ್ರವೇಶ ಶುಲ್ಕವನ್ನು ಸಹ 5 ರೂ. ಏರಿಕೆ ಮಾಡಲಾಗಿದೆ. ಮೂರು ಗಂಟೆಗಳ ಅವಧಿಗೆ ಈಗಿರುವ ದರಕ್ಕಿಂತ 5 ರೂ. ಹೆಚ್ಚು ಪಾವತಿ ಮಾಡಬೇಕು. ಮೂರು ಗಂಟೆಗಳ ಬಳಿಕ ಪ್ರತಿ ಗಂಟೆಗೆ 5 ರಿಂದ 25 ರೂ. ತನಕ ದರವನ್ನು ಹೆಚ್ಚಳ ಮಾಡಲಾಗಿದೆ.
ಪ್ರತಿವರ್ಷ ಲಾಲ್ ಬಾಗ್‌ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನ ಇರುತ್ತಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.












Click it and Unblock the Notifications