Jayadeva Hospital: ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ: ಆರೋಪ
ಬೆಂಗಳೂರಿನ ಹಾಗೂ ದೇಶದ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮೊದಲಿನಂತೆ ಸೇವೆಗಳು ಸಿಗುತ್ತಿಲ್ಲ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ರಾಜ್ಯದ ಪ್ರಮುಖ ಹೃದ್ರೋಗ ಸಂಸ್ಥೆಗಳಲ್ಲಿ ಜಯದೇವ ಸಹ ಒಂದಾಗಿದೆ. ಸಾವಿರಾರು ಜನ ಹೃದ್ರೋಗಿಗಳಿಗೆ ಇದು ಆಶಾಕಿರಣವಾಗಿದೆ. ಆದರೆ, ಈ ಹಿಂದಿನಂತೆ ಇಲ್ಲಿ ಸೇವಾ - ಸೌಲಭ್ಯ ಸಿಗುತ್ತಿಲ್ಲ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜೆಡಿಎಸ್ ಟ್ವೀಟ್ ಮಾಡಿದೆ.
ಕರ್ನಾಟಕದ ಪ್ರತಿಷ್ಠಿತ ಹಾಗೂ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾಗಿರುವ ಜಯದೇವ ಹೃದ್ರೋಗ ಸಂಸ್ಥೆಯ ಸೇವೆಯಲ್ಲಿ ಲೋಪವಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದ್ದು. ಈ ಸಂಬಂಧ ಸೋಷಿಯಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಆರೋಗ್ಯ ಕ್ಷೇತ್ರಕ್ಕೆ ಸಂಪೂರ್ಣ ಗ್ರಹಣ ಹಿಡಿದಿದ್ದು, ಬಡವರ ಜೀವಕ್ಕೆ ಗ್ಯಾರಂಟಿ ಇಲ್ಲವಾಗಿದೆ. ಹೃದಯ ಸಂಬಂಧಿ ಚಿಕಿತ್ಸೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಆರೇಳು ತಿಂಗಳಿಂದ ವೈದ್ಯಕೀಯ ಸೇವಾ ಸೌಲಭ್ಯಗಳು, ಶಸ್ತ್ರಚಿಕಿತ್ಸೆಗಳು ಬಡವರಿಗೆ ಮರೀಚಿಕೆಯಾಗಿದೆ ಎಂದು ಹೇಳಿದೆ.

ಡಾ. ಸಿ.ಎನ್ ಮಂಜುನಾಥ್ ಅವರು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ "ಸೇವೆ ಮೊದಲು, ಶುಲ್ಕ ಆಮೇಲೆ" ಎಂಬ ಧ್ಯೇಯ ವಾಕ್ಯದಡಿ ಮಧ್ಯಮ ವರ್ಗದವರಿಗೆ ಕನಿಷ್ಟ ಶುಲ್ಕದಲ್ಲಿ ಹಾಗೂ ಸಾವಿರಾರು ಬಡವರಿಗೆ ಉಚಿತವಾಗಿ ಚಿಕಿತ್ಸೆ ಸಿಗುತ್ತಿತ್ತು. ಯಾರಿಗೂ ವಿಳಂಬವಾಗದಂತೆ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ನೀಡುವ ಮೂಲಕ ಜಯದೇವ ಸಂಸ್ಥೆ ತನ್ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿತ್ತು.
ಬಡವರಿಗೆ ಸಂಜೀವಿನಿಯಾಗಿದ್ದ ಜಯದೇವದಲ್ಲಿ ಈಗ ಸಕಾಲಕ್ಕೆ ಸಮರ್ಪಕವಾಗಿ ಯಾವುದೇ ಸೇವೆಗಳು ದೊರೆಯುತ್ತಿಲ್ಲ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆರೇಳು ತಿಂಗಳು ಕಾಯಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂಬ ದೂರುಗಳು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ, ಹೊಣೆಗೇಡಿತನ ಹಾಗೂ ಆರೋಗ್ಯ ಕ್ಷೇತ್ರದ ಕಡೆಗಣನೆಯನ್ನು ಜಗಜ್ಜಾಹೀರುಗೊಳಿಸಿದೆ ಎಂದು ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ದುಬಾರಿ ಚಿಕಿತ್ಸಾ ವೆಚ್ಛ ಭರಿಸಲಾಗದೆ ಜಯದೇವ ಸಂಸ್ಥೆಯನ್ನು ನಂಬಿಕೊಂಡಿರುವ ಬಡ ಜನರ ಜೀವದ ಗತಿಯೇನು ? ರಾಜ್ಯದಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸರಣಿ ಸಾವುಗಳ ಬಳಿಕವೂ ಎಚ್ಚೆತ್ತುಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಇನ್ನಾದರೂ ಗಮನ ಹರಿಸಿ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹದಗೆಟ್ಟಿರುವ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು JanataDal_S ಜೆಡಿಎಸ್ ಪಕ್ಷ ಆಗ್ರಹಿಸುತ್ತದೆ ಎಂದು ಪೋಸ್ಟ್ ಮಾಡಲಾಗಿದೆ.
ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳ ವೇತನ ಹೆಚ್ಚಳ
ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಸದ ಡಾ.ಸಿ.ಎನ್ ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳ ಪ್ರಸ್ತುತ ವೇತನವನ್ನು ಹೆಚ್ಚಳ ಮಾಡುವಂತೆ ಕಳೆದ 4-5 ತಿಂಗಳುಗಳಿಂದ ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸಂಸತ್ ಅಧಿವೇಶನ ಸೇರಿದಂತೆ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲೂ ಸುದೀರ್ಘವಾಗಿ ವಿಷಯ ಪ್ರಸ್ತಾಪಿಸಿ ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದೆ, ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ವೈಯುಕ್ತಿಕವಾಗಿ ಈ ಬಗ್ಗೆ ಮನವಿ ಸಲ್ಲಿಸಿದೆ.
ಇದೀಗ ಕೇಂದ್ರ ಸರ್ಕಾರ NHM ಯೋಜನೆಯಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಮತ್ತು ದಾದಿಯರಿಗೆ ಶೇ 25 ರಷ್ಟು ವೇತನ ಹೆಚ್ಚಳ ಮಾಡಿದೆ. ಈ ಕ್ರಮದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ದಾದಿಯರಿಗೆ ಸ್ಫೂರ್ತಿ ಸಿಗಲಿದ್ದು ಗ್ರಾಮೀಣ ಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಉತ್ತೇಜನ ನೀಡಿದಂತಾಗುತ್ತದೆ.
ಈ ಕ್ರಮವು ಸಮಾಜದಲ್ಲಿ ಆರೋಗ್ಯ ಸುಧಾರಣೆಗಾಗಿ ಸಹಕರಿಸಲಿದ್ದು ಇದರಿಂದಾಗಿ ಸಾಮಾನ್ಯ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ನನ್ನ ಮನವಿಗೆ ಸ್ಪಂದಿಸಿ ವೇತನ ಹೆಚ್ಚಳ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.












Click it and Unblock the Notifications