ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ; ಯಾರಿಗೆ ಟೆಂಡರ್?
ಬೆಂಗಳೂರು, ಮಾರ್ಚ್ 22; ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಕಾರಿಡಾರ್-2 ಸಿವಿಲ್ ಕಾಮಗಾರಿಗಳ ಟೆಂಡರ್ ಎಲ್ & ಟಿ ಸಂಸ್ಥೆ ಪಾಲಾಗುವ ನಿರೀಕ್ಷೆ ಇದೆ. ಕೆ-ರೈಡ್ ಸಂಸ್ಥೆ ಸೋಮವಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 1 ತಿಂಗಳು ಬೇಕಿದೆ.
25 ಕಿ. ಮೀ.ಯ ಕಾರಿಡಾರ್-2 (ಚಿಕ್ಕಬಣಾವರ-ಬೈಯಪ್ಪನಹಳ್ಳಿ) ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 30 ದಿನಗಳು ಬೇಕು. ಎಲ್ & ಟಿ ಕಡಿಮೆ ಮೊತ್ತದ ಬಿಡ್ ಮಾಡಿದೆ. ಕಂಪನಿ ಯೋಜನೆಗೆ 850 ಕೋಟಿ ರೂ. ಬಿಡ್ ಮಾಡಿದೆ.
ಕೆ-ರೈಡ್ ಸಂಸ್ಥೆ ಈ ಕುರಿತು ಮಾಹಿತಿ ನೀಡಿದ್ದು, ವರ್ಕ್ ಆರ್ಡರ್ ನೀಡಲು ಎರಡರಿಂದ ಮೂರು ತಿಂಗಳು ಆಗಲಿದೆ. ಎಲ್ಲಾ ಟೆಂಡರ್‌ಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಕೆ-ರೈಡ್ ಸಂಸ್ಥೆ ಬೋರ್ಡ್ ಮೀಟಿಂಗ್‌ನಲ್ಲಿ ಟೆಂಡರ್‌ಗೆ ಒಪ್ಪಿಗೆ ಸಿಗಬೇಕಿದೆ ಎಂದು ಹೇಳಿದೆ.

ಟೆಂಡರ್ ಪಡೆಯುವ ಕಂಪನಿ 27 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿದೆ. ಯೋಜನೆಯನ್ನು ವಿಳಂಬ ಮಾಡಲು ಯಾವುದೇ ಕಾರಣ ನೀಡುವಂತಿಲ್ಲ. ಈಗಾಗಲೇ ರೈಲ್ವೆ ಇಲಾಖೆ ಯೋಜನೆಗೆ ಒಪ್ಪಿಗೆ ನೀಡಿದೆ.
ಸಬ್ ಅರ್ಬನ್ ರೈಲು ಯೋಜನೆಗೆ ಕರ್ನಾಟಕ ಸರ್ಕಾರ 2022-23ನೇ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಜರ್ಮನ್ ಮತ್ತು ಫ್ರೆಂಚ್ ಬ್ಯಾಂಕ್‌ಗಳು ಯೋಜನೆಗೆ ಸಾಲ ನೀಡಲಿವೆ. 148.17 ಕಿ. ಮೀ. ಸಬ್ ಅರ್ಬನ್ ರೈಲು ಯೋಜನೆಯನ್ನು 4 ಹಂತವಾಗಿ ವಿಭಾಗಿಸಲಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ 25 ಕಿ. ಮೀ. ಕಾರಿಡಾರ್-2 (ಚಿಕ್ಕಬಣಾವರ-ಬೈಯಪ್ಪನಹಳ್ಳಿ) ಯೋಜನೆಗೆ 'ಮಲ್ಲಿಗೆ' ಎಂದು ಹೆಸರಿಡಲಾಗಿದೆ. ನಾಲ್ಕು ಕಾರಿಡಾರ್‌ಗಳ ಪೈಕಿ 2ನೇ ಕಾರಿಡಾರ್ ಯೋಜನೆಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ.
Recommended Video
ಕಾರಿಡಾರ್ 2- ಯೋಜನೆ ವಿವರ; ಸಬ್ ಅರ್ಬನ್ ರೈಲು ಕಾರಿಡಾರ್ -2 ಯೋಜನೆಯ 25.01 ಕಿ. ಮೀ. ವ್ಯಾಪ್ತಿಯನ್ನು ಒಳಗೊಂಡಿದೆ. ಚಿಕ್ಕಬಣಾವರ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಚಿಕ್ಕಬಣಾವರ, ಶೆಟ್ಟಿಹಳ್ಳಿ, ಜಾಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಹೆಬ್ಬಾಳ, ನಾಗವಾರ, ಬಾಣಸವಾಡಿ, ಬೈಯಪ್ಪನಹಳ್ಳಿ ನಿಲ್ದಾಣಗಳಿವೆ.
ಕಾರಿಡಾರ್ -1 ಬೆಂಗಳೂರು ನಗರ-ದೇವನಹಳ್ಳಿ (41.40 ಕಿ. ಮೀ.), ಕಾರಿಡಾರ್-3 ಕೆಂಗೇರಿ-ಬೈಯಪ್ಪನಹಳ್ಳಿ ಮಾರ್ಗ (36.12 ಕಿ. ಮೀ), ಕಾರಿಡಾರ್-4 ಹೀಲಲಿಗೆ-ಬೊಮ್ಮಸಂದ್ರ (46.24 ಕಿ. ಮೀ.) ಇದೆ.
148 ಕಿ. ಮೀ. ರೈಲು ಯೋಜನೆಯನ್ನು ನಾಲ್ಕು ಭಾಗವಾಗಿ ವಿಂಗಡನೆ ಮಾಡಲಾಗಿದೆ. ಸಂಪಿಗೆ, ಮಲ್ಲಿಗೆ, ಪಾರಿಜಾತ ಮತ್ತು ಕನಕ ಎಂದು ನಾಲ್ಕು ಕಾರಿಡಾರ್‌ಗಳಿಗೆ ನಾಲ್ಕು ಹೂವುಗಳ ಹೆಸರು ಇಡಲಾಗಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ, ಬೆಂಗಳೂರು ನಗರದ ಅಕ್ಕಪಕ್ಕದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಯೋಜನೆ ಇದಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗಾಗಿಯೇ ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯ ಜಂಟಿಯಾಗಿ ಕೆ-ರೈಡ್ ಎಂಬ ಸಂಸ್ಥೆ ಸ್ಥಾಪನೆ ಮಾಡಿದೆ. ರೈಲು ಯೋಜನೆಯು ಒಟ್ಟು 57 ನಿಲ್ದಾಣಗಳನ್ನು ಒಳಗೊಂಡಿದೆ. ಕಾಮಗಾರಿ ಪೂರ್ಣಗೊಳ್ಳಲು 6 ವರ್ಷಗಳು ಬೇಕು ಎಂದು ಅಂದಾಜಿಸಲಾಗಿದೆ.
2020ರಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಬ್ ಅರ್ಬನ್ ರೈಲು ಯೋಜನೆ ಘೋಷಣೆ ಮಾಡಿತು. ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು ವೆಚ್ಚದ ಶೇ 20ರಷ್ಟು ಭರಿಸಲಿವೆ. ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ಹೊಂದಿಸಲಾಗುತ್ತದೆ.











Click it and Unblock the Notifications