KSRTC: ಬೆಂಗಳೂರು-ಕೋಯಿಕ್ಕೋಡ್ ಪ್ರಯಾಣ ಸುಲಭ: ಆಗಸ್ಟ್ 15ರಿಂದ ಫ್ಲೈಬಸ್ ಸಂಚಾರ ಆರಂಭ
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಿಂದ ಜೋಗ ಜಲಪಾತ ಹಾಗೂ ಕಣ್ಣೂರಿಗೆ ಹೊಸದಾಗಿ ಬಸ್ ಸೇವೆ ಆರಂಭಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಮತ್ತೊಂದು ಹೊಸ ಮಾರ್ಗದಲ್ಲಿ ಫ್ಲೈ ಬಸ್ ಸಾರಿಗೆ ಬಸ್ ಕಾರ್ಯಾಚರಣೆ ಆರಂಭಿಸಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ಆಗಸ್ಟ್ 15ರಿಂದ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೇರಳದ ಕೊಯಿಕ್ಕೋಡ್ ಮಾರ್ಗದಲ್ಲಿ ಹೊಸದಾಗಿ KSRTC ಫ್ಲೈ ಬಸ್ ಸೇವೆ ಒದಗಿಸಲಿದೆ. ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಆಗಸ್ಟ್ 7ರಿಂದ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸುವ ಕುರಿತು ಮೊನ್ನೆಯಷ್ಟೆ ಘೋಷಿಸಲಾಗಿತ್ತು. ಇದೀಗ ಕೊಯಿಕ್ಕೋಡ್ ಗೆ ಹೊಸ ಸೇವೆ ನೀಡುವ ಮೂಲಕ ಈ ಮಾರ್ಗದ ಪ್ರಯಾಣಿಕರಿಗೆ ಸಾರಿಗೆ ಸಂಸ್ಥೆ ಗುಡ್‌ನ್ಯೂಸ್ ನೀಡಿದೆ.

ಫ್ಲೈಬಸ್ ಸಂಚಾರ ಮಾರ್ಗ
ಈ ಫ್ಲೈಬಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಯಲಹಂಕ, ಹೆಬ್ಬಾಳ ಮತ್ತು ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಮೂಲಕ ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟ, ಮಾನಂತವಾಡಿ, ಕಲ್ಪೆಟ್ಟ ಮೂಲಕ ಕೊಯಿಕ್ಕೋಡ್ ತಲುಪಲಿದೆ.
ಟಿಕೆಟ್ ದರ
ಬೆಂಗಳೂರಿನಿಂದ ಕೋಝಿಕ್ಕೋಡ್ ಫ್ಲೈ ಬಸ್ ಸಾರಿಗೆ ಪ್ರಯಾಣಿಕರಿಗೆ ತಲಾ ಒಬ್ಬರಿಗೆ 1500 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಬಸ್ ಬಿಡುವ ಸಮಯ, ವೇಳಾಪಟ್ಟಿ
* ಎರಡು ಬಸ್‌ಗಳ ಪೈಕಿ ಒಂದು ರಾತ್ರಿ, ಎರಡನೇ ಬಸ್ ಸಂಜೆ ಹೊರಡುತ್ತದೆ. ಮೊದಲ ಬಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ರಾತ್ರಿ 22:45ಗಂಟೆ ಹೊರಟು, ನಾಯಂಡಹಳ್ಳಿ ಮೆಟ್ರೋ ನಿಲ್ದಾಣಕ್ಕೆ 23:55ಕ್ಕೆ ಆಗಮಿಸುತ್ತದೆ. ಅಲ್ಲಿಂದ ಮೈಸೂರು (02:45), ಗೋಣಿಕೊಪ್ಪ (04:15) ಮಾನಂತವಾಡಿ (05:20), ಕಲ್ಪೆಟ್ಟಾ (06:00) ಮತ್ತು ಕೊಯಿಕ್ಕೋಡ್ ನಿಲ್ದಾಣವನ್ನು ಬೆಳಗ್ಗೆ (07:15) ತಲುಪುತ್ತದೆ.
ನಿಲ್ದಾಣವಾರು ಟಿಕೆಟ್ ದರ ಪಟ್ಟಿ
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಟಿಕೆಟ್ 960 ರೂಪಾಯಿ, ಗೋಣಿಕೊಪ್ಪ 1200 ರೂಪಾಯಿ, ಮಾನಂತವಾಡಿ 1350 ರೂಪಾಯಿ, ಕಲ್ಪೆಟ್ಟ 1400 ರೂಪಾಯಿ, ಕೋಯಿಕ್ಕೋಡ್ 1500 ರೂಪಾಯಿ ಟಿಕೆಟ್ ದರ ನಿಗದಿ ಆಗಿದೆ.
ಟಿಕೆಟ್ ಬುಕಿಂಗ್‌ಗೆ ಅಧಿಕೃತ ವೆಬ್‌ಸೈಟ್ www.ksrtc.in ಮತ್ತು www.ksrtc.karnataka.gov.in ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-26252625 ಮೊಬೈಲ್ ಸಂಖ್ಯೆ 7760990100 /7760990560/7760990287 ಗೆ ಸಂಪರ್ಕಿಸುವಂತೆ KSRTC ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
