KSRTC: ಬೆಂಗಳೂರಿಂದ ಉತ್ತರ ಕರ್ನಾಟಕದ ಈ ಜಿಲ್ಲೆಗೆ ಪಲ್ಲಕ್ಕಿ ಸ್ಲೀಪರ್ ಬಸ್ ಸೇವೆ, ಎಷ್ಟು ಜಿಲ್ಲೆಗಳಿಗೆ ಅನುಕೂಲ?
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನಿಂದ ಉತ್ತರ ಕರ್ನಾಟಕದ ಕಡೆಗೆ ಸಂಚಾರ ಮಾಡುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಖುಷಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರಿನಿಂದ ಮುದ್ರಣ ಕಾಶಿ ಗದಗಗೆ ತೆರಳುವ ಪ್ರಯಾಣಿಕರಿಗೆ ಪಲ್ಲಕ್ಕಿ ನಾನ್ ಏಸಿ ಸ್ಲೀಪರ್ ಬಸ್ ಪ್ರತಿನಿತ್ಯ ಕಾರ್ಯಾಚರಣೆ ಮಾಡಲಿದೆ. ಈ ಬಸ್ ಹೊರಡುವ ಸಮಯ, ಮಾರ್ಗ, ನಿಲುಗಡೆ ಮತ್ತು ಟಿಕೆಟ್ ದರ ವಿವರ ಇಲ್ಲಿ ತಿಳಿಯಿರಿ.
ಗದಗ-ಬೆಂಗಳೂರು ಮಧ್ಯ ಹೊಸ ಸಾರಿಗೆ ಸೇವೆ ಆರಂಭವಾಗಿದೆ. ಇದೇ 2025ರ ಅಕ್ಟೋಬರ್ 17ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಈ ಸೇವೆ ಆರಂಭಿಸುತ್ತಿದೆ. ಪ್ರತಿ ದಿನ ಬಸ್ ಸಂಚಾರ ಲಭ್ಯವಿರಲಿದೆ. ನಗರದ ಕೆಂಪೇಗೌಡ ಬಸ್ ಟರ್ಮಿನಲ್‌ನಿಂದ ರಾತ್ರಿ 10ಗಂಟೆಗೆ ಹೊರಡುತ್ತದೆ. ಗದಗ ಅನ್ನು ಮರುದಿನ ಬೆಳಗ್ಗೆ 06 ಗಂಟೆಗೆ ತಲುಪುತ್ತದೆ.

ಬಸ್ ತಲುಪಿದ ದಿನವೇ ಅದೇ ದಿನ ಮರಳಿ ಗದಗನಿಂದ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 06 ಗಂಟೆಗೆ ತಲುಪುತ್ತದೆ. ಒಬ್ಬರಿಗೆ ಪ್ರಯಾಣ ದರ 890 ರೂಪಾಯಿ ನಿಗದಿ ಮಾಡಲಾಗಿದೆ. ಪಲ್ಲಕ್ಕಿ ನಾನ್ ಏಸಿ ಬಸ್ ಬೆಂಗಳೂರಿನಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಗುತ್ತಲ ಮತ್ತು ಶಿರಹಟ್ಟಿ ಮಾರ್ಗವಾಗಿ ಗದಗ ತಲುಪುತ್ತದೆ. ಮರಳಿ ಅದೇ ಗದಗನಿಂದ ರಾತ್ರಿ 10 ಗಂಟೆಗೆ ಹೊರಟು ಮತ್ತದೇ ನಿಲ್ದಾಣಗಳಿಗೆ ನಿಲುಗಡೆ ನೀಡುತ್ತ ಬೆಂಗಳೂರಿಗೆ ಬೆಳಗ್ಗೆ 06 ಗಂಟೆಗೆ ಬರಲಿದೆ ಎಂದು KSRTC ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗೆ ksrtc.karnataka.gov.in ವೆಬ್‌ಸೈಟ್ ಹಾಗೂ ಟಿಕೆಟ್ ಬುಕ್ಕಿಂಗ್ ಗಾಗಿ ಪ್ರಯಾಣಿಕರು https://ksrtc.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. 080 2625 2625 ದೂರವಾಣಿಗೂ ಸಂಪರ್ಕಿಸಬಹುದೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ದೀಪಾವಳಿಗೆ ಹೆಚ್ಚುವರಿ ಬಸ್ ಸೇವೆ
ಕರ್ನಾಟಕ ರಾಜ್ಯಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಜನರು ಬೆಳಕಿನ ಹಬ್ಬ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಊರುಗಳಿಗೆ ಹಬ್ಬಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ಮಾಡಲು KSRTC ಹೆಚ್ಚುವರಿಯಾಗಿ 2500 ಬಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಬಸ್‌ಗಳು ಕರ್ನಾಟಕದ ವಿವಿಧ ಜಿಲ್ಲೆಗಳು, ಮಹಾನಗರಗಳನ್ನು ಸಂಪರ್ಕಿಸುತ್ತವೆ. ರಾಜ್ಯದ ಒಳಗೆ ಮಾತ್ರವಲ್ಲದೇ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೂ ಸಂಪರ್ಕ ಕಲ್ಪಿಸಲಿವೆ.
ವಿಶೇಷ ಬಸ್‌ಗಳು ಬೆಂಗಳೂರಿನಿಂದ ಅಕ್ಟೋಬರ್ 17ರಿಂದ 20ರವರೆಗೆ ಮತ್ತು ವಿವಿಧ ಭಾಗಗಳಿಂದ ಮರಳಿ ಬೆಂಗಳೂರಿಗೆ ಅಕ್ಟೊಬರ್ 22ರಿಂದ 26ರವರೆಗೆ ಕಾರ್ಯಾಚರಣೆ ನಡೆಸಲಿವೆ. ನಾಲ್ಕು ಮಂದಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರ ಗುಂಪು ಎರಡು ಬದಿಯ ಟಿಕೆಟ್ ಬುಕ್ಕಿಂಗ್ ಮಾಡಿದರೆ ಟಿಕೆಟ್ ದರದಲ್ಲಿ ಶೇಕಡಾ 10ರಷ್ಟು ಹಣ ಉಳಿತಾಯ ವಾಗುತ್ತದೆ ಎಂದು KSRTC ನಿಗಮ ತಿಳಿಸಿದೆ.












Click it and Unblock the Notifications