ಬೆಂಗಳೂರು ವಾಹನ ಸವಾರರೇ ಗಮನಿಸಿ! ಈ ಪ್ರಮುಖ ಜಂಕ್ಷನ್‌ನಲ್ಲಿ ಸಂಚಾರ ಬದಲಾವಣೆ
ಬೆಂಗಳೂರು: ಹಲವು ಕ್ರಮಗಳನ್ನು ತೆಗೆದುಕೊಂಡ ಹೊರತಾಗಿ ಕೂಡ ಬೆಂಗಳೂರು ಸಂಚಾರ ದಟ್ಟಣೆ ಇನ್ನೂ ಪ್ರಮುಖ ಸಮಸ್ಯೆಯಾಗಿ ಉಳಿಸಿಕೊಂಡಿದೆ. ಅದರಲ್ಲೂ ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ವಾಹನ ಸವಾರರನ್ನು ಹೈರಾಣಾಗಿಸಿದೆ. ಇಂತಹ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಸಂಚಾರ ಪೊಲೀಸರು ಹಲವು ಬದಲಾವಣೆಗಳು, ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.
ಬೆಂಗಳೂರು ನಗರದಲ್ಲಿ ಹೆಚ್ಚು ಟ್ರಾಫಿಕ್ ಇರುವ ಜಂಕ್ಷನ್‌ಗಳಲ್ಲಿ ಒಂದಾದ ಟಿ ಸಿ ಪಾಳ್ಯ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕೆಆರ್ ಪುರ ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ಮಾಡಿದ್ದಾರೆ.

ಟಿ.ಸಿ.ಪಾಳ್ಯ ಮೂಲಕ ನಗರದ ಕಡೆಗೆ ಸಾಗುವ ವಾಹನಗಳು ಭಟ್ಟರಹಳ್ಳಿ ಸಿಗ್ನಲ್‌ನಲ್ಲಿ ಯು-ಟರ್ನ್ ತೆಗೆದುಕೊಂಡು ಮುಂದೆ ಸಾಗುವ ಮೊದಲು ಹಳೆ ಮದ್ರಾಸ್ ರಸ್ತೆಯನ್ನು ತೆಗೆದುಕೊಳ್ಳುವಂತೆ ವಾಹನ ಸವಾರರಿಗೆ ಮನವಿ ಮಾಡಲಾಗಿದೆ.
ಹೊಸಕೋಟೆ ಕಡೆಯಿಂದ ಟಿ.ಸಿ.ಪಾಳ್ಯ ಕಡೆಗೆ ಹೋಗುವ ವಾಹನಗಳು ಕೆ.ಆರ್.ಪುರ ಸರಕಾರಿ ಕಾಲೇಜು ಬಳಿ ಯು-ಟರ್ನ್ ಪಡೆದು ಮುಂದೆ ಸಾಗುವಂತೆ ಸೂಚನೆ ನೀಡಲಾಗಿದೆ.
ಮೇಡಹಳ್ಳಿಯಿಂದ ಟಿಸಿ ಪಾಳ್ಯಕ್ಕೆ ಸರ್ವಿಸ್ ರಸ್ತೆಯಲ್ಲಿ ಸಾಗುವ ವಾಹನಗಳು ಟಿಸಿ ಪಾಳ್ಯ ಜಂಕ್ಷನ್‌ಗೆ ಮೊದಲು ಮೀಡಿಯನ್ ತೆರೆಯುವಿಕೆಯಿಂದ ಹಳೇ ಮದ್ರಾಸ್ ರಸ್ತೆಗೆ ಹೋಗಬೇಕು. ಟಿಸಿ ಪಾಳ್ಯದಿಂದ ಮೇಡಹಳ್ಳಿವರೆಗಿನ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ಸುಗಮ ಸಂಚಾರಕ್ಕಾಗಿ ಈ ಬದಲಾವಣೆಗಳನ್ನು ಮಾಡಲಾಗಿದ್ದು ವಾಹನ ಸವಾರರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಟಿ ಸಿ ಪಾಳ್ಯ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಕಡಿಮೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಹಲವು ಜಂಕ್ಷನ್‌ಗಳಲ್ಲಿ ಪ್ರಯೋಗ
ಬೆಂಗಳೂರು ಸಂಚಾರ ಪೊಲೀಸರು ಹಲವು ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಕೂಡ ಈ ಮೊದಲು ಇದೇ ರೀತಿಯ ಪ್ರಯೋಗ ಮಾಡಲಾಗಿತ್ತು, ಮಾರ್ಗ ಬದಲಾವಣೆ ಮಾಡುವ ಮೂಲಕ ಟ್ರಾಫಿಕ್ ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತಾದರೂ ಅದು ಯಶಸ್ವಿಯಾಗಲಿಲ್ಲ.
ಈಗ ಟಿ ಸಿ ಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ಪೊಲೀಸರು ಪ್ರಯೋಗಕ್ಕೆ ಮುಂದಾಗಿದ್ದು, ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುತ್ತಾ? ವಾಹನ ಸವಾರರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವ ಪ್ರಶ್ನೆಗಳಿಗೆ ಕೆಲವು ದಿನಗಳಲ್ಲೇ ಉತ್ತರ ಸಿಗಲಿದೆ.












Click it and Unblock the Notifications