Breaking: ರೈತರನ್ನು ಬದುಕಲು ಬಿಡಿ, ಇನ್ಮುಂದೆ ನಿಮ್ಮ ಆಟ ನಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್ ಗುಡುಗು
ಬೆಂಗಳೂರು, ಏ. 21: ರೈತರನ್ನು ದರೋಡೆ ಮಾಡುವುದೇ ಸರ್ಕಾರದ ಉದ್ದೇಶ. ರೈತರು ಎಷ್ಟು ಅಂತ ಸಹಿಸಬೇಕು. ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗುಡುಗಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೊದಲಾದ ಆಮ್ ಆದ್ಮಿ ಮುಖಂಡರ ಜೊತೆ ವೇದಿಕೆ ಹಂಚಿಕೊಂಡು ಮಾತನಾಡುತ್ತಿದ್ದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕೋಡಿಹಳ್ಳಿ ಚಂದ್ರಶೇಖರ್, ವಿಧಾನಸಭೆಯಲ್ಲಿ ಕೂತಿರುವ 224 ಜನರನ್ನ ಆಚೆಗೆ ಕಳುಹಿಸುವ ಕಾಲ ಬಂದಿದೆ. ರೈತನ ಮಕ್ಕಳು ಟವೆಲ್ ಹಾಕಿ ವಿಧಾನಸೌಧಕ್ಕೆ ಬರಬೇಕು ಎಂದು ಕರೆ ನೀಡಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಮೊದಲಾದವರಿದ್ದರು. ಈ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೆ, ಕರ್ನಾಟಕ ರೈತ ಸಂಘ ಸ್ವತಂತ್ರವಾಗಿರುತ್ತದೆ. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಆಮ್ ಆದ್ಮಿಯೇ ಪರ್ಯಾಯ:
ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡರು. "ಬಿಜೆಪಿ ರಾಜ್ಯಗಳಲ್ಲಿ ಭ್ರಷ್ಟಾಚಾರ ಇಲ್ಲದ್ದನ್ನು ತೋರಿಸಿ. ಅಂಥ ಒಂದೇ ಒಂದು ರಾಜ್ಯವೂ ಇಲ್ಲ. ಹಾಗೆಯೇ ಭ್ರಷ್ಟಾಚಾರ ಇಲ್ಲದ ಕಾಂಗ್ರೆಸ್ ರಾಜ್ಯವೂ ಇಲ್ಲ. ಪ್ರಾದೇಶಿಕ ಪಕ್ಷಗಳಲ್ಲೂ ಅಂತಹದ್ದು ಕಾಣಲಿಲ್ಲ. ಹಾಗಾಗಿ, ದೇಶಕ್ಕೆ ಅರವಿಂದ್ ಕೇಜ್ರಿವಾಲ್ ಮಾಡೆಲ್ ಆಗಿದ್ದಾರೆ. ಮೂರು ಪಕ್ಷಗಳಿಗೆ ಪರ್ಯಾಯವಾದ ಶಕ್ತಿಯ ಅಗತ್ಯವಿದೆ. ಹಾಗಾಗಿ ಆಪ್ ಪಕ್ಷವನ್ನು ಬೆಂಬಲಿಸಬೇಕಿದೆ. 2023ರ ಚುನಾವಣೆಗೆ ಆಮ್ ಆದ್ಮಿ ಪಕ್ಷವನಜ್ನು ಬೆಂಬಲಿಸೋಣ. ಈ ಮೂಲಕ ವಿಧಾನಸಭೆ ಪ್ರವೇಶ ಮಾಡೋಣ" ಎಂದು ರೈತರಿಗೆ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದರು.
ನಿಮಗೆ ಯಾಕೆ ಕಿಮ್ಮತ್ತುಕೊಡಬೇಕು ಎಂದು ಪ್ರಶ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್:
ರಾಜ್ಯದಲ್ಲಿ ಬಹಳ ಬೇಗ ಭೂಸುಧಾರಣೆ ಕಾಯ್ದೆ ಜಾರಿ ಮಾಡುತ್ತಿದ್ಧಾರೆ. ರೈತರಲ್ಲದವರಿಗೆ ಭೂಮಿ ಮಾರುತ್ತಿದ್ದಾರೆ. ರಾತ್ರೋರಾತ್ರಿ ಭೂಮಿ ವರ್ಗಾವಣೆ ಮಾಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ ತೆರಿಗೆ ಸಂಗ್ರಹ ಹೆಚ್ಚುತ್ತಿದೆ. ಕಾರ್ಪೊರೇಟ್ ಕಂಪನಿಗಳು ಏಜೆಂಟ್‌ಗಳ ಮೂಲಕ ರೈತರ ಭೂಮಿ ಖರೀದಿಸುತ್ತಿವೆ. ರೈತರು ಬೇಗ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಹಳ್ಳಿಗಳಿಂದ ರೈತರು ತೊಲಗಬೇಕು ಎಂಬುದು ಸರಕಾರದ ಬಯಕೆ. ಎಲ್ಲರೂ ಹಳ್ಳಿ ಬಿಟ್ಟು ಹೋದರೆ ಎಲ್ಲಿಂದ ಕೆಲಸ ಕೊಡುತ್ತೀರಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
"ರೈತರನ್ನು ಬದುಕಲು ಬಿಡಿ. ಇಲ್ಲವಾದರೆ ನೀವ್ಯಾಕೆ ಅಧಿಕಾರದಲ್ಲಿರಬೇಕು? ರೈತರನ್ನು ದರೋಡೆ ಮಾಡುವುದೇ ಸರಕಾರದ ಉದ್ದೇಶ. ರೈತರ ಬೆಳೆಗೆ ಎಂಎಸ್‌ಪಿ ನಿಗದಿ ಮಾಡುವುದಿಲ್ಲ. ರೈತರಿಗೆ ಕಿಮ್ಮತ್ತು ಕೊಡುತ್ತಿಲ್ಲ. ನಾವ್ಯಾಕೆ ನಿಮಗೆ ಕಿಮ್ಮತ್ತು ಕೊಡಬೇಕು. ಇನ್ಮುಂದೆ ನಿಮ್ಮ ಆಟ ನಡೆಯುವುದಿಲ್ಲ. ರೈತರು ಎಷ್ಟು ಅಂತ ಸಹಿಸಬೇಕು? ಇದಕ್ಕೆ ಒಂದು ಪರಿಹಾರ ಬೇಕೇಬೇಕು" ಎಂದು ರೈತ ಮುಖಂಡ ಆರ್ಭಟಿಸಿದರು.
ಸಿಎಂ ವಿರುದ್ಧ ಗುಡುಗು:
"ಮಿಸ್ಟರ್ ಬೊಮ್ಮಾಯಿಯವರೆ ನೀವು ಸಿಎಂ ಆಗಿ ಮುಂದುವರಿಯಲು ನೈತಿಕತೆ ಇದೆಯಾ? ನಿಮ್ಮ ಸಂಪುಟದ ೧೭ ಸಚಿವರು ಏನು ಮಾಡಿದ್ದಾರೆ? ತಮ್ಮ ಅಶ್ಲೀಲ ವಿಡಿಯೋ ಬಿಡುಗಡೆ ಆಗುತ್ತೆ ಅಂತ ಭಯದಲ್ಲಿ ಕೋರ್ಟ್‌ನಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. ಇಂಥವರನ್ನು ಇಟ್ಟುಕೊಂಡು ಸರಕಾರ ನಡೆಸಲು ನಿಮಗೆ ನೈತಿಕತೆ ಇದೆಯಾ?" ಎಂದು ಕೋಡಿಹಳ್ಳಿ ಚಂದ್ರಶೇಖರ್ ಕೆಂಡಕಾರಿದರು.












Click it and Unblock the Notifications