Bengaluru Suburban Rail: ರೈಲು ನಿಲ್ದಾಣದ ವಿಶೇಷತೆಗಳು
ಬೆಂಗಳೂರು, ಆಗಸ್ಟ್ 05: ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಸ್‌ಆರ್‌ಪಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಕೆ-ರೈಡ್ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಒಟ್ಟು 4 ಕಾರಿಡಾರ್‌ಗಳಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಸಂಚಾರ ನಡೆಸಲಿದೆ. ಪ್ರಸ್ತುತ ಈ ಯೋಜನೆ ಕಾರ್ಯಗಳು ಇನ್ನೂ ಪ್ರಾಥಮಿಕ ಹಂತದಲ್ಲಿವೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್‌ಪಿ)ಯನ್ನು ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಅನುಷ್ಠಾನಗೊಳಿಸುತ್ತಿದೆ. 2025ರ ಅಂತ್ಯಕ್ಕೆ ಒಂದು ಕಾರಿಡಾರ್‌ನಲ್ಲಿ ರೈಲು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿದೆ.

2020ರಲ್ಲಿ ಮಂಜೂರಾದ ಯೋಜನೆ ಕುಂಟುತ್ತಾ ಸಾಗಿತ್ತು. ಈಗ ಕೆಲವು ವರ್ಷಗಳಿಂದ ಯೋಜನೆಗೆ ಚುರುಕುಗೊಂಡಿದೆ. ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಯೋಜನೆ ಮೂಲ ಸೌಲಭ್ಯದ ಕೆಲಸಗಳು ನಡೆಯುತ್ತಿವೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಒಟ್ಟು 149 ಕಿ. ಮೀ. ಉದ್ದವಿದೆ.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ಕಾರಿಡಾರ್-1, ಬೈಯಪ್ಪನಹಳ್ಳಿ-ಚಿಕ್ಕಬಣಾವರ ಕಾರಿಡಾರ್-2, ಕೆಂಗೇರಿ-ವೈಟ್‌ಫೀಲ್ಡ್ ಕಾರಿಡಾರ್-3 ಮತ್ತು ಹೀಲಲಿಗೆ-ರಾಜನಕುಂಟೆ ಕಾರಿಡಾರ್-4 ಯೋಜನೆಯಾಗಿದೆ.
ನಿಲ್ದಾಣದ ವಿಶೇಷತೆಗಳು: ಕೆ-ರೈಡ್ ತನ್ನ ಮಾಸಿಕ ಸುದ್ದಿ ಪತ್ರಿಕೆಯಲ್ಲಿ ಬಿಎಸ್ಆರ್‌ಪಿ ನಿಲ್ದಾಣಗಳ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದೆ. ಈ ಸಬ್ ಅರ್ಬನ್ ರೈಲು ನಿಲ್ದಾಣಗಳು ವಿವಿಧ ಇತರ ಸಾರಿಗೆ ವಿಧಾನಗಳೊಂದಿಗೆ ಏಕೀಕರಣಗೊಳ್ಳುತ್ತದೆ. ನಿಲ್ದಾಣಗಳ ಮೂಲಕ ಪ್ರಯಾಣಿಕರು ರೈಲು, ಮೆಟ್ರೋ, ಬಸ್ಸುಗಳು ಮತ್ತು ಇತರ ಸಾರಿಗೆ ವಿಧಾನಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ನಾಲ್ಕು ಇಂಟರ್ ಚೇಂಜ್ ನಿಲ್ದಾಣಗಳು ಅಡೆತಡೆ ರಹಿತ ಪ್ರಯಾಣದ ಅನುಭವವನ್ನು ನೀಡುತ್ತದೆ. ಜನರು ವೇಗವಾಗಿ ತಲುಪಲು ಸಹಾಯ ಮಾಡುತ್ತದೆ ಎಂದು ವಿವರಣೆ ನೀಡಲಾಗಿದೆ.
ಸಬ್ ಅರ್ಬನ್ ರೈಲು ನಿಲ್ದಾಣಗಳನ್ನು 205 ಮೀಟರ್ ಉದ್ದವಾಗಿ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣದ ವಾಸ್ತುಶಿಲ್ಪ ಆಧುನಿಕ ನಗರ ಸೌಂದರ್ಯವನ್ನು ಒಳಗೊಂಡಿರುತ್ತದೆ. ನಗರದ ಪರಿಸರವನ್ನು ಕಾಪಾಡಲು ಸಹ ಇದು ಸಹಕಾರಿಯಾಗಿದೆ. ನಿಲ್ದಾಣದ ಮೇಲ್ಪಾವಣಿ ಸೌರ ಫಲಕಗಳನ್ನು ಒಳಗೊಂಡಿರುತ್ತದೆ. ಇದರಿಂದಾಗಿ ವಿದ್ಯುತ್ ಮೇಲಿನ ಅವಲಂಬನೆ ತಪ್ಪುವ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಕಾರಿ.
ರೈಲು ನಿಲ್ದಾಣದ ಮೆಟ್ಟಿಲು, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳನ್ನು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಗಿದೆ. ಇದು ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕೆ ಸಹಕಾಯವಾಗಿದೆ. ಬೆಂಕಿ, ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ನಿಲ್ದಾಣದ ವಿನ್ಯಾಸದ ವೇಳೆ ವಿಶೇಷ ಚೇತನರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತದೆ.
ಸದ್ಯದ ಮಾಹಿತಿ ಪ್ರಕಾರ ಕಾರಿಡಾರ್-1 ಮತ್ತು ಕಾರಿಡಾರ್-4 ಕಾಮಗಾರಿಗಳು ಚುರುಕಿನಿಂದ ಸಾಗುತ್ತಿವೆ. ಕಾರಿಡಾರ್-2 ಮತ್ತು ಕಾರಿಡಾರ್-3 ಕೊಂಚ ವಿಳಂಬವಾಗಲಿದೆ. 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಬ್ ಅರ್ಬನ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದರು. 40 ತಿಂಗಳಿನಲ್ಲಿ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಭೂ ಸ್ವಾಧೀನ, ಟೆಂಡರ್ ಪ್ರಕ್ರಿಯೆ ಸೇರಿದಂತೆ ವಿವಿಧ ಕಾರಣಕ್ಕೆ ಯೋಜನೆಗೆ ನಿರೀಕ್ಷಿತ ವೇಗ ಸಿಗಲಿಲ್ಲ.
ಸಬ್ ಅರ್ಬನ್ ಯೋಜನೆ ಕಾರಿಡಾರ್‌ಗಳಿಗೆ ಹೂವುಗಳ ಹೆಸರುಗಳನ್ನು ಇಡಲಾಗಿದೆ. ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ಕಾರಿಡಾರ್-1 (ಸಂಪಿಗೆ), ಬೈಯಪ್ಪನಹಳ್ಳಿ-ಚಿಕ್ಕಬಣಾವರ ಕಾರಿಡಾರ್-2 (ಮಲ್ಲಿಗೆ), ಕೆಂಗೇರಿ-ವೈಟ್‌ಫೀಲ್ಡ್ ಕಾರಿಡಾರ್-3 (ಪಾರಿಜಾತ) ಮತ್ತು ಹೀಲಲಿಗೆ-ರಾಜನಕುಂಟೆ ಕಾರಿಡಾರ್-4 (ಕನಕ) ಯೋಜನೆಯಾಗಿದೆ.











Click it and Unblock the Notifications