ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ಮಾಡಿ ಡಿಕೆಶಿ ಬಗ್ಗೆ ಪ್ರಶ್ನಿಸುತ್ತಾರೆ!
ಬೆಂಗಳೂರು, ಜೂನ್1: ಕೆಜಿಎಫ್ ಬಾಬು ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಯದ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು. ಇಡಿ ಅಧಿಕಾರಿಗಳು ಸುಖಾಸುಮ್ಮನೆ ನನ್ನನ್ನು ಟಾರ್ಗೇಟ್ ಮಾಡಿದ್ದಾರೆ ಎಂದು ಕೆಜಿಎಫ್ ಬಾಬು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದಾಯ ತೆರಿಗೆ ದಾಳಿ ನಡೆಸಿದ್ದರೇ ಅರ್ಥವಿತ್ತು. ಆದರೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಏಕೆ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಉದ್ಯಮಿ ಕೆಜಿಎಫ್ ಬಾಬು ಸೇರಿದ ಮನೆ ಕಚೇರಿ ಮೇಲೆ ಮೇ 28ರಂದು ದಾಳಿ ಮಾಡಿ ನಿರಂತರ 18 ಗಂಟೆಗಳ ಕಾಲ ಬಾಬು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಇಡಿ ಅಧಿಕಾರಿಗಳು ಕೆಲವು ಮಹತ್ವದ ಕಡತಗಳನ್ನ ವಶಕ್ಕೆ ಪಡೆದು ತೆರಳಿದ್ದಾರೆ. ಈ ಸಂಬಂಧ ವಿಚಾರಣೆಗೆ ಬರುವಂತೆ ಬುಲಾವ್ ನೀಡಿದ್ದಾರೆ. ಸ್ಕ್ರಾಪ್ ಬ್ಯುಸಿನೆಸ್ ಮಾಡುತ್ತಿದ್ದ ಕೆಜಿಎಫ್ ಬಾಬು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದ್ದರು. ಜಮೀನು, ನಿವೇಶನ, ಕಟ್ಟಡಗಳ ಕೊಡು ಕೊಳ್ಳುವಿಕೆ ಶುರುವಿಟ್ಟು ಸಾವಿರಾರು ಕೋಟಿಯ ಒಡೆಯನಾಗಿದ್ದರು. ಕೆಜಿಎಫ್ ಬಾಬು ವ್ಯವಹಾರ, ಹಣಕಾಸು ವಹಿವಾಟು ಮೇಲೆ ನಿಗಾ ಇಟ್ಟಿದ್ದ ಇಡಿ ಅಧಿಕಾರಿಗಳು, ಕಳೆದ ಒಂದು ತಿಂಗಳಿಂದ ಬಾಬು ಆರ್ಥಿಕ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ದಾಳಿ ಮಾಡಿದ್ದರು. ಬಾಬುಗೆ ಸೇರಿದ ಎರಡು ಮನೆ, ಉಮ್ರಾ ಡೆವಲಪರ್ಸ್ ಕಚೇರಿ, ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ವ್ಯಾಪಕ ಶೋಧ ನಡೆಸಿದ್ದರು.
ಇಡಿ ದಾಳಿ ಬಗ್ಗೆ ಕೆಜಿಎಫ್ ಬಾಬು ಹೇಳಿದ್ದೇನು..?
""ನಾನು ವಿಚಾರಣೆಗೆ ಹೋಗೋದಕ್ಕೆ ಸಿದ್ಧನಿದ್ದೇನೆ. ನಾನು ಯಾವುದೇ ಅನಧಿಕೃತ ಆಸ್ತಿ ಮಾಡಿಲ್ಲ. ನಾನು ಸರ್ಕಾರಿ ಹರಾಜಿನಲ್ಲಿ ಆಸ್ತಿಗಳನ್ನು ಖರೀದಿ ಮಾಡಿದ್ದೇನೆ, ಯಾವುದೇ ಖಾಸಗಿ ಆಸ್ತಿಗಳನ್ನು ನಾನು ಮುಟ್ಟವುದಿಲ್ಲ. ಜಮೀರ್ ಅಹಮದ್ ಖಾನ್‌ಗೆ 3.5 ಕೋಟಿ ಸಾಲ ಕೊಟ್ಟಿದ್ದೆ. ಈ ವಿಚಾರದ ಬಗ್ಗೆ ನಾನು ದೆಹಲಿಗೆ ಹೋಗಿದ್ದೆ. ನಾನು ಹೇಳಿಕೆ ನೀಡಿ ಬಂದಿದ್ದೇನೆ. ಆಗಲೂ ಸಹ ನನಗೆ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ ತುಂಬಾ ಹಿಂಸೆ ನೀಡಿದ್ದಾರೆ.

ಡಿಕೆ ಶಿವಕುಮಾರ್ ಬಗ್ಗೆ ನನ್ನ ಬಳಿ ಕೇಳಿದ್ದರು, ಅವರ ವ್ಯವಹಾರ ಏನು ಹೇಳು ಅಂತ ನನಗೆ ಕೇಳಿದ್ದರು. ಅವರ ಬಳಿ ನೀನು ಏನ್ ಇನ್ವೆಸ್ಟ್ ಮಾಡಿದ್ದೀಯಾ? ನಿನ್ನ ಬಳಿ ಅವರು ಏನ್ ಇನ್ವೆಸ್ಟ್ ಮಾಡಿದ್ದಾರೆ ಎಂದು ಕೇಳಿದ್ದರು. ಇವರ ಉದ್ದೇಶ ಡಿಕೆ ಶಿವಕುಮಾರ್ ನನ್ನು ಟಾರ್ಗೆಟ್ ಮಾಡೋದು ಅಷ್ಟೇ. ಕಾಂಗ್ರೆಸ್ ಪಕ್ಷವನ್ನು ಡ್ಯಾಮೇಜ್ ಮಾಡಬೇಕು ಅಂತ ಇದೆಲ್ಲವು ನಡೆಯುತ್ತಿದೆ, ಅದರಲ್ಲಿ ನಾನು ಸಹ ಒಬ್ಬ, ನನಗೂ ಇಡಿಗೂ ಸಂಬಂಧವೇ ಇಲ್ಲ. ಐಟಿ ಅವರು ಬಂದು ಮನೆ ಸರ್ಚ್ ಮಾಡೋದಕ್ಕೆ ಒಂದು ಅರ್ಥ ಇದೆ. ಆದರೆ ಇಡಿ ಅವರು ಬರೋದಕ್ಕೂ ನನಗೂ ಸಂಬಂಧವಿಲ್ಲ. ಟಾರ್ಚರ್ ಮಾಡುವ ಉದ್ದೇಶದಿಂದ ಇವರು ಬಂದಿದ್ದಾರೆ ಅಷ್ಟೇ. ನನಗು ತೊಂದರೆ ಕೊಡ್ತಾರೆ, ಡಿ.ಕೆ ಶಿವಕುಮಾರ್‌ಗು ಕೊಡ್ತಾರೆ, ಜಮೀರ್ ಅಹಮ್ಮದ್ ಖಾನ್‌ಗು ತೊಂದರೆ ಕೊಡ್ತಾರೆ'' ಎಂದು ಜಾರಿ ನಿರ್ದೇಶನಾಯದ ವಿರುದ್ದ ಕೆಜಿಎಫ್ ಬಾಬು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

ಕೆಜಿಎಫ್ ಬಾಬು ವಿಚಾರಣೆಗೆ ನೋಟೀಸ್
ಕೆಜಿಎಫ್ ಬಾಬು ಮನೆ ಮೇಲೆ ನಡೆಸಿದ ದಾಳಿ ವೇಳೆ 8.60 ಲಕ್ಷ ನಗದು, 3.750 ಕೆ.ಜಿ. ಚಿನ್ನ, ಬ್ಯಾಂಕ್ ಖಾತೆಗಳು, ರಿಯಲ್ ಎಸ್ಟೇಟ್ ವ್ಯವಹಾರ ಪತ್ರಗಳು ಪತ್ತೆಯಾಗಿವೆ. ಇಡಿ ಅಧಿಕಾರಿಗಳು ಅವುಗಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಬಾಬುವಿಗೆ ಈಗಾಗಲೇ ನೋಟೀಸ್ ನೀಡಿರುವ ಇಡಿ ಅಧಿಕಾರಿಗಳು 7 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಬಾಬು ಇಡಿಯ ವಿಚಾರಣೆಯ ಇಕ್ಕಳದಲ್ಲಿ ಸಿಲುಕಬೇಕಿದೆ.












Click it and Unblock the Notifications