ಪಟ್ಟಕ್ಕೇರುವ ಮುನ್ನವೇ ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ಭಾರಿ ಮುಖಭಂಗ
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಚ್.ಎಸ್.ಮಂಜುನಾಥ್ ಗೌಡ ಅವರ ಪದ ಗ್ರಹಣ ಕಾರ್ಯಕ್ರಮ ಇಂದು ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಅಧಿಕಾರ ಸ್ವೀಕಾರಕ್ಕೂ ಮುನ್ನವೇ ಹೊಸ ಅಧ್ಯಕ್ಷರಿಗೆ ಭಾರಿ ಮುಖಭಂಗವಾಗಿರುವ ಘಟನೆ ನಡೆದಿದೆ. ಹುರುಪಿನಲ್ಲಿ ಕಾಂಗ್ರೆಸ್ ನಾಯಕರಿಂದ ಮೆಚ್ಚುಗೆ ಪಡೆಯಲು ಹೋಗಿ ಅವರು ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಮಂಜುನಾಥ್ ಅವರ ಮೇಲೆ ಸ್ವಪಕ್ಷವೇ ಮುನಿಸಿಕೊಂಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು, ಇಂದು ನಡೆಯುತ್ತಿರುವ ಪದಗ್ರಹಣ ಕಾರ್ಯಕ್ರಮ.
ಹೌದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆಯೋಜಿಸಿರುವ ಯೂತ್ ಕಾಂಗ್ರೆಸ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಎಡವಟ್ಟಾಗಿದೆ. ಅಧ್ಯಕ್ಷ ಸ್ಥಾನ ಸಿಕ್ಕ ಖುಷಿಯಲ್ಲಿ ಮಂಜುನಾಥ್ ಗೌಡ ಹಾಗೂ ಅವರ ಬೆಂಬಲಿಗರು ದೊಡ್ಡ ದೊಡ್ಡ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳಲ್ಲಿ ಮಿಂಚಲು ಹೋಗಿ ಕೊನೆಗೆ ಪೇಚಿಗೆ ಸಿಲುಕಿದ್ದಾರೆ. ಅರಮನೆ ಮೈದಾನ, ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈಓವರ್, ಏರ್‌ಪೋರ್ಟ್ ರೋಡ್ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಯೂತ್ ಕಾಂಗ್ರೆಸ್‌ನವರ ಬ್ಯಾನರ್‌ಗಳನ್ನು ಹಾಕಿ ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಿದ್ದರೂ ಅದನ್ನು ಲೆಕ್ಕಿಸದರೆ ಯುವ ನಾಯಕರು ಎಲ್ಲೆಂದರಲ್ಲಿ ಬ್ಯಾನರ್ ಅಳವಡಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಯುವ ಕಾಂಗ್ರೆಸ್ ನಾಯಕರ ಮೇಲೆ ಗರಂ ಆಗಿದ್ದಾರೆ. ಈ ಬ್ಯಾನರ್‌ಗಳಿಂದ ಸರ್ಕಾರಕ್ಕೂ ಮುಜುಗರ ಎಂದು ತಿಳಿದು ಕೂಡಲೇ ಅದನ್ನು ತೆರವು ಮಾಡುವಂತೆ ತಮ್ಮದೇ ಸ್ಟೈಲಲ್ಲಿ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
ಈ ಬಗ್ಗೆ ನೇರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರು ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದಾರೆ. ಅನಧಿಕೃತವಾಗಿ ಬ್ಯಾನರ್, ಫ್ಲೆಕ್ಸ್ ಹಾಕಿರುವವರು ತಾವಾಗಿಯೇ ತೆಗೆಯಬೇಕು. ಒಂದು ವೇಳೆ ತೆರವು ಮಾಡದಿದ್ದರೆ ಸಂಬಂಧಪಟ್ಟವರ ವಿರುದ್ಧ ದಂಡ ಸಹಿತ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಬಿಬಿಎಂಪಿ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬಲವನ್ನು ಬೂತ್‌ಗಳಲ್ಲಿ ಪ್ರದರ್ಶಿಸಬೇಕೇ ಹೊರತು, ಈ ರೀತಿ ಬ್ಯಾನರ್, ಫ್ಲೆಕ್ಸ್ ಹಾಕಿಸಿ ಅಲ್ಲ ಎಂದು ಖಡಕ್ ಆಗಿ ಚಳಿ ಬಿಡಿಸಿದ್ದಾರೆ. ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮಿಷನರ್‌ಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಬ್ಯಾನರ್‌ಗಳೆಲ್ಲ ಉಡೀಸ್
ಡಿಕೆಶಿ ಸೂಚನೆ ಮೇರೆಗೆ ಫೀಲ್ಡಿಗಿಳಿದ ಬಿಬಿಎಂಪಿ ಅಧಿಕಾರಿಗಳು ಯಲಹಂಕ, ಬಳ್ಳಾರಿ ರಸ್ತೆ, ಹೆಬ್ಬಾಳ, ಕೆಂಪಾಪುರ, ಎಸ್ಟೀಟ್ ಮಾಲ್, ಸಿಬಿಐ, ಅರಮನೆ ರಸ್ತೆ ಬಳಿ ಅಳವಡಿಸಿದ್ದ ಯುವ ಕಾಂಗ್ರೆಸ್ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನ ಕಿತ್ತೊಗೆದಿದ್ದಾರೆ. ಇದರಿಂದ ಇಂದು ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಿರುವ ಮಂಜುನಾಥ್ ಗೌಡ ಅವರಿಗೆ ಭಾರಿ ಮುಖಭಂಗವಾಗಿದೆ.
ಇನ್ನು ಡಿಕೆ ಶಿವಕುಮಾರ್ ಅವರ ಆಪ್ತ ಬೆಂಬಲಿಗ ಎನಿಸಿಕೊಂಡಿರುವ ಮಂಜುನಾಥ್ ಒಂದೇ ಸಮುದಾಯದವರೂ ಆಗಿದ್ದಾರೆ. ಏನೇ ಆದರೂ ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ತಮ್ಮದೇ ಪಕ್ಷದ ಬ್ಯಾನರ್‌ಗಳ ತೆರವಿಗೆ ಮುಲಾಜಿಲ್ಲದೆ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications