ಜಕ್ಕೂರು ಫ್ಲೈಯಿಂಗ್ ಶಾಲೆಗೆ ಹೊಸ ಚೈತನ್ಯ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ತರಬೇತಿ ಕೇಂದ್ರ: ಪರಮೇಶ್ವರ್
ಬೆಂಗಳೂರು: ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯು 1940ರಲ್ಲಿ ಪ್ರಾರಂಭವಾಗಿದ್ದು, ಈವರೆಗೆ ಸಾವಿರಾರು ಪೈಲಟ್‌ಗಳನ್ನು ತಯಾರು ಮಾಡಲಾಗಿದೆ. ಅವರೆಲ್ಲರೂ ಏರ್ ಇಂಡಿಯಾ ಅಥವಾ ಬೇರೆ ಬೇರೆ ಏರ್‌ಲೈನ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೈಲಟ್ ಆಗಬೇಕು ಎಂಬ ಕನಸು ಕಂಡಿರುವ ಅನೇಕ ಮಧ್ಯಮ ವರ್ಗದ ಮತ್ತು ಬಡ ಮಕ್ಕಳಿಗೆ ಈ ಸಂಸ್ಥೆಯು ವರದಾನ. ಸರ್ಕಾರ ಈ ತರಬೇತಿ ಸಂಸ್ಥೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶಾಲಾ ಪರವಾನಿಗೆ ರಿನಿವಲ್ ಆಗಿದೆ ಎಂದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು, ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ ಆರಂಭದ ಬಗ್ಗೆ ಅಪ್ಡೇಟ್ ನೀಡಿದರು.
ಡಿಸಿಎಂ ಮತ್ತು ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಇಂದು ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಸ್ತುತ ಸಂಸ್ಥೆಯಲ್ಲಿ 5 ಏರ್‌ಕ್ರಾಫ್ಟ್‌ಗಳಿವೆ. ಹೊಸದಾಗಿ 2 ಏರ್‌ಕ್ರಾಫ್ಟ್‌ಗಳನ್ನು ಕೊಂಡುಕೊಳ್ಳಲು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಬಾಕಿ ಉಳಿದಿದೆ. ಪ್ರೈವೆಟ್ ಪೈಲಟ್ ಲೈಸನ್ಸ್ ಪಡೆದುಕೊಳ್ಳಲು 40 ಗಂಟೆ ಚಾಲನೆ ಮಾಡಿರಬೇಕು. ಜೊತೆಗೆ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆಯಲು 180 ಗಂಟೆ ಚಾಲನೆ ಮಾಡಿರಬೇಕು. ಇಷ್ಟೆಲ್ಲ ಅರ್ಹತೆಗಳು ವಿಮಾನ ಚಾಲನೆ ನಡೆಸಲು ಬೇಕಾಗಿರುತ್ತದೆ. ಇದಕ್ಕೆ ಪೂರಕವಾಗಿ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ.
35 ಸಾವಿರ ಪೈಲಟ್‌ಗಳ ಅಗತ್ಯತೆ
ಇಂಡಿಯಾದಲ್ಲಿ ಏರ್ ಕಂಪನಿ ಸೇರಿ 850 ಏರ್‌ಕ್ರಾಫ್ಟ್ ಪ್ರತಿನಿತ್ಯ ಹಾರಾಟ ನಡೆಸುತ್ತದೆ. ಇದರಲ್ಲಿ 7 ರಿಂದ 8 ಸಾವಿರ ಪೈಲಟ್‌ಗಳು ಕೆಲಸ ಮಾಡುತ್ತಿದ್ದಾರೆ. ಇಂಡಿಗೋ ಕಂಪನಿಯವರು 5 ವರ್ಷದೊಳಗಾಗಿ ಹೆಚ್ಚಿನ ಏರ್‌ಕ್ರಾಫ್ಟ್‌ಗಳ ಖರೀದಿಗೆ ತೀರ್ಮಾನಿಸಿದ್ದಾರೆ. ದೇಶದಲ್ಲಿ ಸುಮಾರು 35 ಸಾವಿರ ಪೈಲಟ್‌ಗಳ ಅವಶ್ಯಕತೆ ಇದೆ. ಹೀಗಾಗಿ ಉದ್ಯೋಗ ಸಿಗುವ ಭರವಸೆ ಇರುವುದರಿಂದ ಪೈಲಟ್ ಆಗಲು ಆಸಕ್ತಿ ಇರುವವರಿಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ಸರಿಯಾಗಿ ತರಬೇತಿ ಪಡೆಯದಿದ್ದರೆ ಅನಾಹುತಗಳು ಸಂಭವಿಸುತ್ತವೆ. ಈ ಸಂಸ್ಥೆಯಲ್ಲಿ ಡಿಜಿಸಿಎ ನವರು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುತ್ತಾರೆ. ನಮ್ಮ ಸಂಸ್ಥೆಯ ಲೈಸೆನ್ಸ್ ರದ್ದಾಗಿತ್ತು. ಇದೀಗ ಮುಂದಿನ ಐದು ವರ್ಷಕ್ಕೆ ಲೈಸೆನ್ಸ್ ರಿನಿವಲ್ ಮಾಡಲಾಗಿದೆ. ಡಿಜಿಸಿಎ ನವರು ಲೈಸೆನ್ಸ್ ರಿನಿವಲ್ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಆಕಾಂಕ್ಷಿಗಳಿಗೆ ಖಚಿತ ಉದ್ಯೋಗ
ಈ ಸಂಸ್ಥೆಯಲ್ಲಿ ಪಿಪಿಎಲ್ ತರಬೇತಿ ನೀಡಲು ಕರ್ನಾಟಕದವರಿಗೆ 10 ಲಕ್ಷ ರೂ., ಹೊರಗಿನವರಿಗೆ 15 ಲಕ್ಷ ರೂ. ಹಾಗೂ ಸಿಪಿಎಲ್ ತರಬೇತಿಗಾಗಿ ಕರ್ನಾಟಕದವರಿಗೆ 37 ಲಕ್ಷ ರೂ. ಹಾಗೂ ಹೊರಗಿನವರಿಗೆ 42 ಲಕ್ಷ ರೂ. ಆಗಲಿದೆ. ಇಷ್ಟೆಲ್ಲಾ ಖರ್ಚು ಮಾಡಿ, ತರಬೇತಿ ಪಡೆದುಕೊಂಡವರಿಗೆ ಉದ್ಯೋಗ ಸಿಗುವುದು ಖಂಡಿತ ಎಂದು ಭರವಸೆ ನೀಡಿದರು.
ರನ್‌ವೇ 954 ಮೀಟರ್ ಇದೆ. ಇದನ್ನು 160 ಮೀ.ಗೆ ಹೆಚ್ಚಿಸಲು 10 ಎಕರೆ ಭೂಮಿ ಸ್ವಾಧೀನ ಪಡೆಯುವ ಪ್ರಸ್ತಾವನೆ ಇದೆ. ಆದರೆ ಈಗಿರುವ ಸಮಸ್ಯೆ ಏನೆಂದರೆ, ಸುತ್ತುಮುತ್ತ ಮನೆಗಳಿವೆ. ಸುತ್ತಲು 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್ ಎತ್ತರಕ್ಕಿಂತ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ನಾವು ಆಸ್ಪದವನ್ನು ಕೊಡುವುದಿಲ್ಲ. ತರಬೇತಿ ಶಾಲೆಯನ್ನೇ ನಿಲ್ಲಿಸುವಂತೆ ಕೇಳುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಡುವ ಸಂಸ್ಥೆಯನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ
ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ ಆರಂಭಿಸುವ ಉದ್ದೇಶವಿದೆ. ಇಲ್ಲಿ ಟೇಕ್ ಆಫ್ ಮಾಡಿದರೆ, ಮೈಸೂರಿನಲ್ಲಿ ಲ್ಯಾಂಡ್ ಮಾಡುತ್ತಾರೆ. ಇದನ್ನು 'ಟಚ್ ಆ್ಯಂಡ್ ಗೋ' ಎಂದು ಹೇಳಲಾಗುತ್ತದೆ. ಇದಕ್ಕೆ ಮೈಸೂರಿನಲ್ಲಿ ಅವಕಾಶವಿದೆ. ಉಪಯೋಗ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ. ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಚಿಂತನೆ ಇದೆ ಎಂದರು.
ಪ್ರಸ್ತುತ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಎಂದು ಹೆಸರಿದೆ. ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ ಎಂದು ಹೆಸರನ್ನು ಬದಲಾಯಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಕ್ಯಾಬಿನೆಟ್ ಅನುಮತಿ ನೀಡಿದರೆ ಹೆಸರು ಬದಲಾಯಿಸಲಾಗುವುದು ಎಂದು ತಿಳಿಸಿದರು.
ವಿಶ್ವಮಟ್ಟದಲ್ಲಿ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಈ ರೀತಿಯ ಏರ್‌ಪೋರ್ಟ್‌ಗಳಲ್ಲಿ ವಿಮಾನ ಲ್ಯಾಂಡ್ ಮಾಡಲು ಮತ್ತು ಟೇಕ್ ಮಾಡಲು ಕಷ್ಟ ಆಗುತ್ತಿದೆ. ವಿಮಾನಗಳು ವರ್ಟಿಕಲ್ ಟೇಕ್ ಆಫ್ ಆಗುವುದಕ್ಕೆ ತರಬೇತಿ ನೀಡಲು ಪ್ರಸ್ತಾವನೆ ಇಟ್ಟುಕೊಂಡಿದ್ದೇವೆ ಎಂದು ವಿವರಿಸಿದರು.
ಇಂಡಿಯನ್ ಏರ್‌ಕ್ರಾಫ್ಟ್ ಕಂಪನಿಯವರು ರೆಡಾರ್ಸ್ ಇಟ್ಟಿದ್ದಾರೆ. ಅಲ್ಲಿ ನಮ್ಮ ವಿದ್ಯಾರ್ಥಿಗಳು ಸಂಶೋಧನೆಗೆ ಅವಕಾಶ ಮಾಡಿಕೊಡಲು ಸಾಧ್ಯತೆ ಇದೆ. ಹೊಸ ಅವಿಷ್ಕಾರಗಳು ಬರುತ್ತಿವೆ. ಸಿವಿಲ್ ಏರ್ ಕ್ರಾಫ್ಟ್ ಮೇಂಟೆನೆನ್ಸ್ ಅಕಾಡೆಮಿ ಸ್ಥಾಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಈ ವೇಳೆ ತಿಳಿಸಿದರು.
ಮೈಸೂರು: ಬರ ಸ್ಥಿತಿ ಸಂಪೂರ್ಣ ಚಿತ್ರಣ
ಚಿತ್ರದುರ್ಗದಲ್ಲಿ ಬೆಂಗಳೂರು ಕಂದಾಯ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮೈಸೂರು ಕಂದಾಯ ವಿಭಾಗದ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ಮೈಸೂರು ಕಂದಾಯ ವಿಭಾಗದ ಸಭೆ ನಡೆಸುವ ಬಗ್ಗೆ ಸ್ಥಳ, ದಿನಾಂಕ ನಿಗದಿಯಾಗಿಲ್ಲ. ಸಿಎಂ ಅವರು ಸಮಯ ನೀಡುತ್ತಾರೆ. ನಾಲ್ಕು ಕಂದಾಯ ವಿಭಾಗಗಳ ಪ್ರಗತಿ ಪರಿಶೀಲನೆ ಮಾಡಿದರೆ, ರಾಜ್ಯದ ಬರ ಪರಿಸ್ಥಿತಿಯ ಪೂರ್ಣ ಚಿತ್ರಣ ಸಿಗಲಿದೆ. ತದನಂತರ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ನೀಡುತ್ತೇವೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 329 ಕೋಟಿ ರೂ. ಹಣವಿದೆ. ಬರ ಪರಿಸ್ಥಿತಿ ಎದುರಿಸಲು ಸದ್ಯಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದರು.
ಆಗಸ್ಟ್ ತಿಂಗಳ ಎರಡನೇ ವಾರದ ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದ ಅವರು, ನಾವು ಬರೆದ ಪತ್ರಗಳಿಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬರ ಪರಿಸ್ಥಿತಿಯ ಪ್ರಸ್ತಾವನೆ ಸಲ್ಲಿದ ಬಳಿಕ, ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಲಿದೆ. ಕೇಂದ್ರ ಸರ್ಕಾರ ಕಳೆದ ಬಾರಿ ಹಣ ನೀಡಿರಲಿಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ನಡೆಯಿತು. ಕೋರ್ಟ್ ಆದೇಶದ ಬಳಿಕ ಮೂರು ಸಾವಿರ ಕೋಟಿ ರೂ. ಹಣ ನೀಡಿದರು.
ಕೇಂದ್ರ ಸರ್ಕಾರ ಈ ಬಾರಿ ಹಣ ಕೊಡುತ್ತಾರೆ ಎಂಬ ಆಶಾವಾದಿಗಳಾಗಿದ್ದೇವೆ. ರಾಜ್ಯ ಸರ್ಕಾರವೂ ಹಣದ ಕೊರತೆ ಇಲ್ಲದೆ ಬರ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಲು ಸೂಚಿಸಿದ್ದೇವೆ. ಈ ಯೋಜನೆಗೂ ಹಣದ ಕೊರತೆ ಇಲ್ಲ. ಜನರು ಗುಳೆ ಹೋಗುತ್ತಿರುವ ಬಗ್ಗೆ ಖಚಿತವಾದ ಅಂಕಿ-ಅಂಶಗಳಿಲ್ಲ.
ಮೂರು ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿದ್ದಾರೆ. ತಾಂಡವೊಂದರಲ್ಲಿ ಎಲ್ಲರೂ ಗುಳೆ ಹೋಗಿರುವ ಬಗ್ಗೆ ವರದಿಯಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಬಿಜಿ ರಾಮ್ ಜಿ ಯೋಜನೆಯಡಿ ಕೂಡಲೇ ಕೆಲಸ ನೀಡಲು ಸೂಚನೆ ನೀಡಲಾಗಿದೆ. ಮುಂದಿನ 30 ವಾರಕ್ಕೆ ಅಗುವಷ್ಟು ಮೇವು ಸಂಗ್ರಹವಿದೆ. ಪಶು ಸಂಗೋಪನಾ ಇಲಾಖೆ ಹಾಗೂ ಕೆಎಂಎಫ್‌ನಿಂದ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


Click it and Unblock the Notifications
