ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿದೆ : ಗುಂಡೂರಾವ್
ಬೆಂಗಳೂರು, ಜು. 9 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಒಂದು ವರ್ಷ ಪೂರ್ಣಗೊಳಿಸಿದೆ. ಹಲವಾರು ಟೀಕೆ ಟಿಪ್ಪಣಿಗಳ ನಡುವೆ ಯೋಜನೆ ಯಶಸ್ವಿಯಾಗಿದ್ದು, ಕಳೆದ ವರ್ಷ ಅನ್ನಭಾಗ್ಯ ಯೋಜನೆಗೆ ಸರ್ಕಾರ 3 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಆಹಾರ ನಾಗರಿಕ ಪೂರೈಕೆ ಸಚಿವ ಡಿನೇಶ್ ಗುಂಡೂರಾವ್ ಹೇಳಿದ್ದಾರೆ.
2013ರ ಜುಲೈ 10ರಂದು ಆರಂಭವಾದ ಅನ್ನಭಾಗ್ಯ ಯೋಜನೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ಹಸಿವು ಇಂಗಿಸಿದ ಅನ್ನಭಾಗ್ಯ ಯೋಜನೆ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಿದ್ದರು. [ಅನ್ನಭಾಗ್ಯ'ವಂತೆ ಗೀತಾರ ನೆಮ್ಮದಿಯ ನುಡಿಗಳಿವು]
ಕಳೆದ ವರ್ಷ ಯೋಜನೆ ಆರಂಭಿಸಿದಾಗ ಕಾರ್ಯಕ್ರಮ ಯಶಸ್ವಿ ಯಾಗುವುದಿಲ್ಲ, ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಎಂಬ ಆರೋಪಗಳು, ಟೀಕೆಗಳು ಕೇಳಿ ಬಂದಿತ್ತು. ಆದರೆ ಈಗ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ನಿಜವಾದ ಬಡವರಿಗೆ ಇದರಿಂದ ತುಂಬಾ ಉಪಯೋಗವಾಗಿದೆ ಎಂದು ಸಚಿವರು ಹೇಳಿದರು. ಚಿತ್ರಗಳಲ್ಲಿ ನೋಡಿ ಪುಸ್ತಕ ಬಿಡುಗಡೆ. [ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ]

ಯೋಜನೆ ಯಶಸ್ವಿಯಾಗಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಒಂದು ವರ್ಷ ಪೂರ್ಣಗೊಳಿಸಿದೆ. ಯೋಜನೆ ಆರಂಭವಾದಾಗ ಕಾರ್ಯಕ್ರಮ ಯಶಸ್ವಿ ಯಾಗುವುದಿಲ್ಲ, ಸರ್ಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಎಂಬ ಆರೋಪಗಳು, ಟೀಕೆಗಳು ಕೇಳಿ ಬಂದಿತ್ತು. ಆದರೆ ಈಗ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಒಂದು ಗಂಟೆಯಲ್ಲಿ ಘೋಷಿಸಿದ್ದರು
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಒಂದು ಗಂಟೆಗಳ ಅವಧಿಯಲ್ಲೇ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ದರು. ಬಡವರಿಗೆ ಈ ಯೋಜನೆಯಿಂದಾಗಿ 1 ರೂ.ದರದಲ್ಲಿ 1 ಕೆ.ಜಿ. ಅಕ್ಕಿಯಂತೆ 30 ರೂ.ಗಳಿಗೆ 30 ಕೆ.ಜಿ ಅಕ್ಕಿ ನೀಡಲಾಗುತ್ತಿದೆ ಎಂದರು.

ಮೂರು ಸಾವಿರ ಕೋಟಿ ವೆಚ್ಚ
ಕಳೆದ ವರ್ಷ ಅನ್ನಭಾಗ್ಯ ಯೋಜನೆಗೆ ಸರ್ಕಾರ 3 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಿತ್ತು. ಈ ವರ್ಷ ಕಾರ್ಡುಗಳ ಸಂಖ್ಯೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ ಮೊತ್ತ 4 ಸಾವಿರ ಕೋಟಿ ರೂ. ದಾಟಲಿದೆ ಎಂದು ಸಚಿವರು ತಿಳಿಸಿದರು.

2 ಲಕ್ಷ ಟನ್ ಅಕ್ಕಿ
ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗಾಗಿ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬರುತ್ತಿದ್ದು, ರಾಜ್ಯ ಸರ್ಕಾರ ಒಂದು ಲಕ್ಷ ಟನ್ ಅಕ್ಕಿಯನ್ನು ಗಿರಣಿಗಳಿಂದ ಹಾಗೂ ಹೊರರಾಜ್ಯಗಳಿಂದ ಖರೀದಿ ಮಾಡಿ ಬಡವರಿಗೆ ನೀಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

ಆಹಾರ ಅದಾಲತ್
ಪ್ರತಿ ತಿಂಗಳು ಮೊದಲ ವಾರದಲ್ಲೇ ಜನರಿಗೆ ಪಡಿತರ ಧಾನ್ಯ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಪಡಿತರ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಹಾಗೂ ಪ್ರತಿ ತಿಂಗಳು ಆಹಾರ ಅದಾಲತ್ ಏರ್ಪಡಿಸಿ ಲೋಪದೋಷಗಳನ್ನು ಸರಿಪಡಿಸಿರುವ ಕೆಲಸವನ್ನು ಮಾಡುತ್ತಿದೆ. ಯೋಜನೆಯಡಿ ವಿತರಣೆ ಮಾಡಲು ರಾಗಿ ಮತ್ತು ಜೋಳವನ್ನು ಕೂಡ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.

ಯಾರು ಭಾಗವಹಿಸಿದ್ದರು?
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಾರ್ತಾ ರೋಷನ್ ಬೇಗ್, ಆಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲತಾ ಕೃಷ್ಣರಾವ್, ಆಹಾರ ಇಲಾಖೆ ಆಯುಕ್ತ ಹರ್ಷಗುಪ್ತ ಹಾಗೂ ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮುಂತಾದವರು ಉಪಸ್ಥಿತರಿದ್ದರು.


Click it and Unblock the Notifications
