ರಾಜ್ಯದ ಅಣೆಕಟ್ಟುಗಳಲ್ಲಿ ಉತ್ತಮ ನೀರಿನ ಸಂಗ್ರಹ: KRSನಲ್ಲಿ 38 ಟಿಎಂಸಿ ಲಭ್ಯ, ಬೆಂಗಳೂರಿಗಿಲ್ಲ ಆತಂಕ, ತುಂಗಭದ್ರಾ ಡ್ಯಾಂ ವಿವರ?
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲು ಆವರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಈ ಅವಧಿಯಲ್ಲಿ ನೀರಿನ ಹಾಹಾಕಾರ ಶುರುವಾಗುತ್ತದೆ. ಆದರೆ ಈ ವರ್ಷ ಪರಿಸ್ಥಿತಿ ಹಿಂದಿನ ವರ್ಷಗಳಂತೆ ಇಲ್ಲ, ಉತ್ತಮವಾಗಿದೆ ಎನ್ನುವುದು ಖುಷಿಯ ವಿಷಯ. ಏಕೆಂದರೆ ಕಳೆದ ವರ್ಷ (2025) ಸುರಿದ ಉತ್ತಮ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ ನದಿ ಹಾಗೂ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ. ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ, ಒಳ-ಹೊರ ಹರಿವು ಮಾಹಿತಿ ಇಲ್ಲಿದೆ.
ಕಾವೇರಿ ನದಿ ಹಾಗೂ ಕೆಆರ್‌ಎಸ್ ಡ್ಯಾಂಗಳಲ್ಲಿ ನೀರು ಸಂಗ್ರಹ ಉತ್ತಮ ಸ್ಥಿತಿಯಲ್ಲಿರುವ ಕಾರಣ, ಮಂಡ್ಯ, ಮೈಸೂರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೇ ತಿಂಗಳ ವರೆಗೂ ಕುಡಿಯಲು, ನೀರಾವರಿಗೆ ನೀರಿನ ಲಭ್ಯತೆ ಇದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ನೀರಿನ ಅಭಾವ ಸ್ಥಿತಿ ಉಂಟಾಗುತ್ತದೋ ಅಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿದೆ. ಇನ್ನೂ ಕೆಆರ್‌ಎಸ್ ಡ್ಯಾಂ ಒಂದು ತಿಂಗಳ ಮಳೆಗೆ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಒಟ್ಟು ಎರಡು ಭಾರಿ ತುಂಬಿ ಹರಿದಿದ್ದು ವಿಶೇಷವಾಗಿತ್ತು.

ತುಂಗಭದ್ರಾ: ಒಟ್ಟು ಸಾಮರ್ಥ್ಯದ ಕಾಲು ಭಾಗದಷ್ಟೂ ನೀರಿಲ್ಲ
ಕಬಿನಿ, ಹಾರಂಗಿ, ಭದ್ರಾ, ಆಲಮಟ್ಟಿ ಜಲಾಶಯಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಇದರಿಂದ ಬೇಸಿಗೆ ವೇಳೆ ಆಯಾ ಭಾಗದ ಜಲಾಯನಯನ ಪ್ರದೇಶಗಳ ಅಗತ್ಯ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತದೆ. ಆದರೆ ಕ್ರೆಸ್ಟ್ ಗೇಟ್ ಮುರಿದು ದುರಸ್ತಿ ಎದರು ನೋಡಿದ್ದ ವಿಜಯನಗರ ಜಿಲ್ಲೆ ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಗಭದ್ರಾ ಅಣೆಕಟ್ಟಿನಲ್ಲಿ ಸಾಮಾನ್ಯ ಪ್ರಮಾಣದ ನೀರಿನ ಸಂಗ್ರಹವಿದೆ. ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 105 ಟಿಎಂಸಿ ಇದ್ದು, ಗೇಟ್ ದುರಸ್ತಿ ಪರಿಣಾಮ ಸದ್ಯ ಡ್ಯಾಂನಲ್ಲಿ 24 ಟಿಎಂಸಿಯಷ್ಟು ಮಾತ್ರವೇ ನೀರಿದೆ. ಇದು ಆ ಭಾಗದ ಜನರು, ರೈತರ ಆತಂಕಕ್ಕೆ ಕಾರಣವಾಗಿದೆ.
ಹಿಪ್ಪರಗಿ ಬ್ಯಾರೇಟ್ ಗೇಟ್ ಕಟ್ ಆಗಿತ್ತು
ಬೇಸಿಗೆ ಈಗಷ್ಟೇ ಆರಂಭವಾಗಿದೆ. ಜಲಾಶಯಗಳ ಗರಿಷ್ಠ ಸಾಮರ್ಥ್ಯ ಹಾಗೂ ಹಾಲಿ ಇರುವ ನೀರಿನ ಸಂಗ್ರಹ ಆಧಾರದಲ್ಲಿ ನೋಡುವುದಾದರೆ ತುಂಗಭದ್ರಾ ನದಿ ತೀರದ ಪ್ರದೇಶಗಳಲ್ಲಿ ನೀರಾವರಿ ಹಾಗೂ ಕುಡಿಯುಲು ನೀರು ಸಾಕಾಗದಿರಬಹುದು. ಇತ್ತೀಚೆಗೆ ಬಾಗಲಕೋಟೆ ಜಮಖಂಡಿ ತಾಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಿಪ್ಪರಗಿ ಬ್ಯಾರೇಟ್‌ನಲ್ಲಿ 22ನೇ ಗೇಟ್ ತುಂಡಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದಿತ್ತು. ಈ ಕಾರಣದಿಂದ ತುಂಗಭದ್ರಾ, ಹಿಪ್ಪರಗಿ ಬ್ಯಾರೇಜ್ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಉಳಿದಂತೆ ಎಲ್ಲ ನದಿ, ಅಣೆಕಟ್ಟಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ಜಲಾನಯನ ಪ್ರದೇಶಗಳ ನೀರಿನ ಬೇಡಿಕೆ ಪೂರೈಕೆಗೆ ಸಾಕಾಗಲಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ. ಫೆಬ್ರವರಿ 20ರಂದು ರಾಜ್ಯ ಪ್ರಮುಖ ಡ್ಯಾಂಗಳ ನೀರಿನ ಮಟ್ಟ, ಒಳ-ಹೊರ ಹರಿವು ಎಷ್ಟಿದೆ? ಇಲ್ಲಿದೆ ಪಟ್ಟಿ.
ಅಣೆಕಟ್ಟುಗಳ ನೀರಿನ ಸಂಗ್ರಹ, ಪಟ್ಟಿ
ಕೆಆರ್‌ಎಸ್ ಡ್ಯಾಂ ನೀರಿನ ಸಂಗ್ರಹ
ಒಟ್ಟು ಸಾಮರ್ಥ್ಯ: 49.52 ಟಿಎಂಸಿ
ಸದ್ಯದ ಸಂಗ್ರಹ: 38 ಟಿಎಂಸಿ
ಒಳ ಹರಿವು: 194 ಕ್ಯೂಸೆಕ್
ಹೊರ ಹರಿವು: 4367 ಕ್ಯೂಸೆಕ್
ಕಬಿನಿ ಅಣೆಕಟ್ಟು ವಿವರ
ಒಟ್ಟು ಸಾಮರ್ಥ್ಯ: 19,52 ಟಿಎಂಸಿ
ಸದ್ಯದ ಸಂಗ್ರಹ: 13 ಟಿಎಂಸಿ
ಒಳ ಹರಿವು: 221 ಕ್ಯೂಸೆಕ್
ಹೊರ ಹರಿವು: 1200 ಕ್ಯೂಸೆಕ್
ಆಲಮಟ್ಟಿ ಡ್ಯಾಂ ನೀರಿನ ಮಟ್ಟ
ಒಟ್ಟು ಸಾಮರ್ಥ್ಯ: 123.08 ಟಿಎಂಸಿ
ಸದ್ಯದ ಸಂಗ್ರಹ: 64.22 ಟಿಎಂಸಿ
ಒಳ ಹರಿವು: 00 ಕ್ಯೂಸೆಕ್
ಹೊರ ಹರಿವು: 10,769 ಕ್ಯೂಸೆಕ್
ಹಾರಂಗಿ ಡ್ಯಾಂ ಮಾಹಿತಿ
ಒಟ್ಟು ಸಾಮರ್ಥ್ಯ: 8.50 ಟಿಎಂಸಿ
ಸದ್ಯದ ಸಂಗ್ರಹ: 3.34 ಟಿಎಂಸಿ
ಒಳ ಹರಿವು: 245 ಕ್ಯೂಸೆಕ್
ಹೊರ ಹರಿವು: 200 ಕ್ಯೂಸೆಕ್
ತುಂಗಭದ್ರಾ ಅಣೆಕಟ್ಟು ಅಪ್ಡೇಟ್
ಒಟ್ಟು ಸಾಮರ್ಥ್ಯ: 105 ಟಿಎಂಸಿ
ಸದ್ಯದ ಸಂಗ್ರಹ: 24.14 ಟಿಎಂಸಿ
ಒಳ ಹರಿವು: 00 ಕ್ಯೂಸೆಕ್
ಹೊರ ಹರಿವು: 402 ಕ್ಯೂಸೆಕ್
ವಾಣಿ ವಿಲಾಸ ಸಾಗರ ಡ್ಯಾಂ
ಒಟ್ಟು ಸಾಮರ್ಥ್ಯ: 30 ಟಿಎಂಸಿ
ಸದ್ಯದ ಸಂಗ್ರಹ: 29 ಟಿಎಂಸಿ
ಒಳ ಹರಿವು: 00 ಕ್ಯೂಸೆಕ್
ಹೊರ ಹರಿವು: 580 ಕ್ಯೂಸೆಕ್
ಲಿಂಗನಮಕ್ಕಿ ಅಣೆಕಟ್ಟಿನ ನೀರಿನ ಮಟ್ಟ
ಒಟ್ಟು ಸಾಮರ್ಥ್ಯ: 151 ಟಿಎಂಸಿ
ಸದ್ಯದ ಸಂಗ್ರಹ: 78 ಟಿಎಂಸಿ
ಒಳ ಹರಿವು: 748 ಕ್ಯೂಸೆಕ್
ಹೊರ ಹರಿವು: 6304 ಕ್ಯೂಸೆಕ್












Click it and Unblock the Notifications