Chickpet Constituency Analysis: ಕಾಂಗ್ರೆಸ್ಸಿನ ಗುಂಪುಗಾರಿಕೆಯೇ ಬಿಜೆಪಿಗೆ ಶ್ರೀರಕ್ಷೆ?
ರಾಜಸ್ಥಾನ, ಗುಜರಾತ್, ದೆಹಲಿ ಮುಂತಾದ ಕಡೆಯಿಂದ ಬಂದು ನೆಲೆಕಂಡಿರುವ ವ್ಯಾಪಾರಸ್ಥರು, ಸದಾ ಗಿಜಿಗುಡುವ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರಗಳಲ್ಲೊಂದು ಚಿಕ್ಕಪೇಟೆ. ಹಿಂದಿ, ಮಾರ್ವಾಡಿ ಭಾಷಿಗರ ಜೊತೆಗೆ ತಮಿಳು, ತೆಲುಗಿನವರ ಪ್ರಬಾವ ಹೆಚ್ಚಾಗಿರುವ ಇಲ್ಲಿ ಈ ಬಾರಿಯ ಚುನಾವಣೆಗೆ ಕೋಟ್ಯಾಧಿಪತಿಗಳೇ ಧುಮುಕಲು ಸಜ್ಜಾಗಿದ್ದರು.
ಚಿಕ್ಕಪೇಟೆ, ಸುಧಾಮ ನಗರ, ಧರ್ಮರಾಯಸ್ವಾಮಿ ದೇವಾಲಯ, ಸುಂಕೇನಹಳ್ಳಿ, ವಿ.ವಿ.ಪುರಂ, ಸಿದ್ದಾಪುರ, ಹೊಂಬೇಗೌಡ ನಗರ, ಜಯನಗರ ಬಿಬಿಎಂಪಿ ವಾರ್ಡುಗಳನ್ನು ಹೊಂದಿರುವ ಇಲ್ಲಿ ಕೊಳೆಗೇರಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಜಾತಿ ಸಮೀಕರಣಕ್ಕಿಂತ ಅಭ್ಯರ್ಥಿಯ ವರ್ಚಸ್ಸೇ ಇಲ್ಲಿ ಗೆಲುವಿನ ಮೂಲ ಮಂತ್ರ ಎನ್ನುವುದು ಕಳೆದ ಕೆಲವು ಚುನಾವಣೆಯ ಫಲಿತಾಂಶಗಳು ಸಾರಿ ಹೇಳುತ್ತದೆ.

ಇಲ್ಲಿ ಅಂದಾಜು ಪುರುಷರು 1.1 ಲಕ್ಷ, ಮಹಿಳೆಯರು 1.04 ಲಕ್ಷ, ಇತರರು ಹದಿನೇಳು ಸೇರಿ ಒಟ್ಟು 2.13 ಲಕ್ಷ (ಸುಮಾರು) ಮತದಾರರು ಇದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಆಪ್ ನಿಂದ ಬೃಜೇಶ್ ಕಾಳಪ್ಪ, ಬಿಜೆಪಿಯಿಂದ ಉದಯ್ ಗರುಡಾಚಾರ, ಜೆಡಿಎಸ್ಸಿನಿಂದ ಇಮ್ರಾನ್ ಪಾಷಾ, ಕಾಂಗ್ರೆಸ್ಸಿನಿಂದ ಆರ್.ವಿ.ದೇವರಾಜು ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ.
ಕಳೆದ ಮೂರು (2008, 2013, 2018) ಚುನಾವಣೆಯಲ್ಲಿ ಎರಡು ಬಾರಿ ಬಿಜೆಪಿ ಮತ್ತು ಒಮ್ಮೆ ಕಾಂಗ್ರೆಸ್ ಇಲ್ಲಿಂದ ಗೆದ್ದಿದೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ಅವರು ಕಾಂಗ್ರೆಸ್ಸಿನ ಆರ್.ವಿ.ದೇವರಾಜ್ ವಿರುದ್ದ ಸುಮಾರು ಏಳು ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಮುಸ್ಲಿಮ ಮತಗಳೂ ನಿರ್ಣಾಯಕ ಪಾತ್ರವನ್ನು ಇಲ್ಲಿ ವಹಿಸುತ್ತದೆ.
ಕಳೆದ ಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಮುಜಾಹಿದ್ ಪಾಷ 11,700 ಮತಗಳು ಪಡೆದದ್ದು ಕಾಂಗ್ರೆಸ್ಸಿಗೆ ಮುಳುವಾಗಿ ಪರಿಣಮಿಸಿತ್ತು. ಈ ಬಾರಿ ಜೆಡಿಎಸ್ ನಿಂದ ಇಮ್ರಾನ್ ಪಾಷಾ ಮತ್ತು ಎಸ್ಡಿಪಿಐ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವುದರಿಂದ ಮೇಲ್ನೋಟಕ್ಕೆ ಇದರ ನೇರ ಪರಿಣಾಮ ಬೀರುವುದು ಕಾಂಗ್ರೆಸ್ಸಿಗೆ ಎನ್ನುವುದು ಒಂದು ಕಡೆ.
ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ
ಇನ್ನೊಂದು ಕಡೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ವಿಚಾರ ಕ್ಷೇತ್ರದ ಮುಖಂಡರಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು. ಅಭ್ಯರ್ಥಿ ಘೋಷಣೆಯ ಮುನ್ನವೇ ಭರ್ಜರಿ ರೋಡ್ ಶೋ ನಡೆಸಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್ ವರಿಷ್ಠರು ಅವರಿಗೆ ಟಿಕೆಟ್ ನೀಡದೇ ಆರ್.ವಿ.ದೇವರಾಜ್ ಅವರಿಗೆ ಟಿಕೆಟ್ ನೀಡಿತು.
ರಾಮಲಿಂಗ ರೆಡ್ಡಿಯವರು ನೇರವಾಗಿ ಗಂಗಾಂಬಿಕೆ ಪರ ಬ್ಯಾಟ್ ಬೀಸಿದ್ದರು
ಈ ಕ್ಷೇತ್ರದಲ್ಲಿ ಟಿಕೆಟ್ ನೀಡುವ ವಿಚಾರದಲ್ಲೂ ಕರ್ನಾಟಕ ಕಾಂಗ್ರೆಸ್ ಒಮ್ಮತದ ನಿರ್ಧಾರಕ್ಕೆ ಬರಲು ಸಮಯವನ್ನು ತೆಗೆದುಕೊಂಡಿತು. ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿಯವರು ನೇರವಾಗಿ ಗಂಗಾಂಬಿಕೆ ಪರ ಬ್ಯಾಟ್ ಬೀಸಿದ್ದರು. ಮಲ್ಲಿಕಾರ್ಜುನ ಖರ್ಗೆಯವರೆಗೂ ಚಿಕ್ಕಪೇಟೆ ಕ್ಷೇತ್ರದ ಗೊಂದಲ ಹೋಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಆರ್.ವಿ.ದೇವರಾಜ್ ಅವರಿಗೆ ಟಿಕೆಟ್ ನೀಡಿದೆ.
ಎರಡು ಬಾರಿ ಕಾರ್ಪೋರೇಟರ್ ಆಗಿ, ಒಮ್ಮೆ ಮೇಯರ್ ಆಗಿ ಗಂಗಾಂಬಿಕೆ ಕೆಲಸ
"ಎರಡು ಬಾರಿ ಕಾರ್ಪೋರೇಟರ್ ಆಗಿ, ಒಮ್ಮೆ ಮೇಯರ್ ಆಗಿ ಕೆಲಸ ನಿರ್ವಹಿಸಿದ್ದೇನೆ, ನನಗೆ ಕ್ಷೇತ್ರದ ಮತದಾರರ ಜೊತೆ ಉತ್ತಮ ಒಡನಾಟವಿದೆ. ಹಾಗಾಗಿ, ಟಿಕೆಟ್ ನನಗೆ ಸಿಗಲಿದೆ ಎನ್ನುವ ಅದಮ್ಯ ವಿಶ್ವಾಸದಲ್ಲಿದ್ದೇನೆ"ಎಂದು ಗಂಗಾಂಬಿಕೆ ಹೇಳಿದ್ದರು. ಆದರೆ, ಅವರ ವಿಶ್ವಾಸಕ್ಕೆ ಕಾಂಗ್ರೆಸ್ಸಿನ ಹಿರಿಯರು ಮಣೆ ಹಾಕದಿರುವುದು ಒಂದು ಕಡೆಯಾದರೆ, ರಾಮಲಿಂಗ ರೆಡ್ಡಿಯವರ ಪ್ರಚಾರದ ಬೆಂಬಲ ಆರ್.ವಿ.ದೇವರಾಜು ಅವರಿಗೆ ಸಿಗುತ್ತೋ ಎನ್ನುವುದು ಇನ್ನೊಂದು ಕಡೆ.
ಕೆಜಿಎಫ್ ಬಾಬು ಟಿಕೆಟಿಗಾಗಿ ಭಾರೀ ಪ್ರಯತ್ನ ನಡೆಸಿದ್ದರು
ಚಿಕ್ಕಪೇಟೆ ಕ್ಷೇತ್ರದ ಟಿಕೆಟಿಗಾಗಿ ಆಗರ್ಭ ಶ್ರೀಮಂತ ಕೆಜಿಎಫ್ ಬಾಬು ಕೂಡಾ ಭಾರೀ ಪ್ರಯತ್ನವನ್ನು ನಡೆಸಿದ್ದರು. ಟಿಕೆಟ್ ಸಿಗದೇ ಇದ್ದಿದ್ದರಿಂದ ಅವರ ಪತ್ನಿಯನ್ನು ಪಕ್ಷೇತರರಾಗಿ ಕಣಕ್ಕಿಳಿಸಿದ್ದಾರೆ. ಇನ್ನು, ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಗಂಗಾಂಬಿಕೆ ಕೂಡಾ ಪ್ರಚಾರ ನಡೆಸುತ್ತಿದ್ದಾರೆ. ಕೆಜಿಎಫ್ ಬಾಬು ಜೊತೆ ಮಾತುಕತೆ ನಡೆಸಿ ಅವರು ಕಣದಿಂದ ಹಿಂದಕ್ಕೆ ಸರಿಯುತ್ತಾರೆ ಎಂದು ದೇವರಾಜ್ ಹೇಳಿದ್ದರು. ಆದರೆ, ಇದು ಸುಳ್ಳು ಎಂದು ಕೆಜಿಎಫ್ ಬಾಬು ಹೇಳುವ ಮೂಲಕ ಚಿಕ್ಕಪೇಟೆ ಕಾಂಗ್ರೆಸ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿದೆ.
ಉದಯ್ ಗರುಡಾಚಾರ್ ಭರ್ಜರಿ ಪ್ರಚಾರ
ಆದರೆ, ಇದ್ಯಾವುದರ ಗೊಂದಲವಿಲ್ಲದೇ ಉದಯ್ ಗರುಡಾಚಾರ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾಗಿದೆ. ಜೆಡಿಎಸ್ ಮತ್ತು ಎಸ್ಡಿಪಿಐನಿಂದ ಮತ ವಿಭಜನೆಯಾಗುತ್ತೋ ಎನ್ನುವ ಚಿಂತೆಯಲ್ಲಿ ಆರ್.ವಿ.ದೇವರಾಜು ಇದ್ದಾರೆ. ಇದೊಂದೇ ಆದರೆ ಪರವಾಗಿರಲಿಲ್ಲ, ಸ್ವಪಕ್ಷೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮಹತ್ತರದ ಅನಿವಾರ್ಯತೆ ಇರುವುದರಿಂದ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯೇ ಹೆಚ್ಚು. ಮೇ ಹತ್ತರಂದು ಚುನಾವಣೆ ನಡೆಯಲಿದ್ದು, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications