ಪ್ರತಿಪಕ್ಷ ಸ್ಥಾನದಲ್ಲಿ ಕೂರೋದೇ ಒಳಿತು: ಕಾಂಗ್ರೆಸ್ ಶಾಸಕರ ಅಭಿಪ್ರಾಯ
ಬೆಂಗಳೂರು, ಜುಲೈ 15: ಸರ್ಕಾರ ಉಳಿಸುವ ಪ್ರಯತ್ನದ ಬದಲು ವಿರೋಧಪಕ್ಷದ ಸ್ಥಾನದಲ್ಲಿಯೇ ಕೂರುವುದು ಸದ್ಯದ ಸಂದರ್ಭದಲ್ಲಿ ಒಳಿತು ಎಂದು ಕಾಂಗ್ರೆಸ್‌ನ ಅನೇಕ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಸೋಮವಾರ ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭವಾಗುವುದಕ್ಕೂ ಮುನ್ನ ಶಾಸಕರು ವಾಸ್ತವ್ಯ ಹೂಡಿದ್ದ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು.
ಸ್ವತಃ ಸಿದ್ದರಾಮಯ್ಯ ಅವರೂ ವಿಶ್ವಾಸಮತದಲ್ಲಿ ಸೋಲುಂಟಾದರೆ ದೃತಿಗೆಡದೆ ವಿರೋಧಪಕ್ಷದ ಸ್ಥಾನದಲ್ಲಿ ಕೂರೋಣ ಎಂದು ಪಕ್ಷದ ಶಾಸಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಹೆಚ್ಚು ದಿನ ಸರ್ಕಾರ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಚುನಾವಣೆ ಎದುರಿಸಲು ಸೂಕ್ತ ತಯಾರಿ ಮಾಡೋಣ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಅತೃಪ್ತ ಶಾಸಕರು ವಾಪಸ್ ಬಂದು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ. ಆದರೆ, ಅವರನ್ನು ಮನವೊಲಿಸುವ ಪ್ರಯತ್ನವನ್ನು ಕೈಬಿಡುವುದು ಸೂಕ್ತ ಎಂದು ಅನೇಕ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಜೆ ನಡೆದ ಸಭೆಯ ವೇಳೆ ಕಾಂಗ್ರೆಸ್‌ನ ಅನೇಕ ಶಾಸಕರು ಸರ್ಕಾರದಲ್ಲಿ ಮುಂದುವರಿಯುವ ಈ ಪ್ರಯತ್ನಗಳನ್ನು ಕೈಬಿಡುವುದೇ ಒಳಿತು ಎಂದು ಹೇಳಿದ್ದಾರೆ. ನಿತ್ಯ ನಡೆಯುತ್ತಿರುವ ಈ ಬೆಳವಣಿಗೆಗಳಿಂದ ರೋಸಿ ಹೋಗಿದ್ದೇವೆ. ಸರ್ಕಾರ ಉಳಿಸಿಕೊಳ್ಳುವ ವ್ಯರ್ಥ ಸಾಹಸ ಬೇಡ. ಇದರಿಂದ ಈಗಲೇ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಇನ್ನೂ ಹಾನಿಯಾಗುವುದು ಬೇಡ. ಸರ್ಕಾರದಿಂದ ಹೊರಬಂದು ವಿರೋಧಪಕ್ಷದ ಸ್ಥಾನದಲ್ಲಿ ಕೂರೋಣ ಎಂದು ಶಾಸಕರು ಪಕ್ಷದ ನಾಯಕರ ಮುಂದೆ ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಈ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ಮತ್ತೆ ರೆಸಾರ್ಟ್‌ಗೆ ಕರೆದೊಯ್ದಿದೆ. ಏರ್‌ಪೋರ್ಟ್ ರಸ್ತೆಯಲ್ಲಿರುವ ಪ್ರಕೃತಿ ರೆಸಾರ್ಟ್‌ಗೆ ಎಲ್ಲರೂ ತೆರಳಿ ಎರಡು ದಿನದವರೆಗೆ ವಾಸ್ತವ್ಯ ಹೂಡಲು ನಿರ್ಧರಿಸಿರುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
''ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮಗೆ ಇನ್ನೂ ಮೈತ್ರಿ ಉಳಿಸಿಕೊಲ್ಳುವ ಭರವದೆ ಇದೆ. ವಿಪ್ ಜಾರಿಯಾಗಿರುವುದರಿಂ ರಾಮಲಿಂಗಾ ರೆಡ್ಡಿ ಕಲಾಪಕ್ಕೆ ಬಂದು ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ. ಅತೃಪ್ತರು ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸೇರಬಹುದು. ಆದರೆ ಅಲ್ಲಿ ಅವರಿಗೆ ಬಿ ಫಾರಂ ಸಿಗುತ್ತೋ ಇಲ್ಲವೋ. ಅವರು ಅತಂತ್ರರಾಗುತ್ತಾರೆ ಎನ್ನುವುದು ನನ್ನ ಅಭಿಪ್ರಾಯ. ಅವರು ವಾಪಸ್ ಬರಲಿ ಎನ್ನುವುದು ನನ್ನ ಬಯಕೆ'' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.












Click it and Unblock the Notifications