ಮೇ 10 ಪೆಟ್ರೋಲ್-ಡೀಸೆಲ್ ಸಿಗೋದು ಡೌಟು, ಯಾಕೆ ಅಂತ ಇಲ್ಲಿದೆ ಮಾಹಿತಿ
ಪೆಟ್ರೋಲ್-ಡೀಸೆಲ್ ಡೀಲರ್ ಗಳು ಕಮಿಷನ್ ಹೆಚ್ಚಳಕ್ಕೆ ಆಗ್ರಹಿಸಿ ಮೇ 10ರಂದು ಕಂಪೆನಿಗಳಿಂದ ತೈಲ ಖರೀದಿಸದಿರಲು ನಿರ್ಧರಿಸಿದ್ದಾರೆ. ಆ ನಂತರ ಒಂದೇ ಪಾಳಿಯಲ್ಲಿ ಕಾರ್ಯ ನಿರ್ವಹಣೆ ಹಾಗೂ ಭಾನುವಾರಗಳಂದ ಕಾರ್ಯ ನಿರ್ವಹಿಸದಿರುವ ನಿರ್ಧಾರ ಮಾಡಿದ್ದಾರೆ
ಬೆಂಗಳೂರು, ಮೇ 9: ಕರ್ನಾಟಕದ ಕನಿಷ್ಠ 3 ಸಾವಿರ ಪೆಟ್ರೋಲ್ ಬಂಕ್ ಗಳು ಇದೇ ತಿಂಗಳ 14ರಿಂದ ಭಾನುವಾರಗಳಂದು ಕಾರ್ಯ ನಿರ್ವಹಿಸುವುದಿಲ್ಲ. ಪೆಟ್ರೋಲ್ ಡೀಲರ್ ಗಳು ಮೇ 10ರಂದು ' ತೈಲ ಖರೀದಿ ಮಾಡದಿರಲು' ನಿರ್ಧರಿಸಿದ್ದು, ತೈಲ ಕಂಪೆನಿಗಳಿಂದ ಖರೀದಿ ಮಾಡುವುದಿಲ್ಲ.
ಮೇ 15ರಿಂದ ಎಲ್ಲ ಪೆಟ್ರೋಲ್ ಬಂಕ್ ಗಳು ಒಂದೇ ಪಾಳಿಯಲ್ಲಿ ಅಂದರೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತವೆ. ಡೀಲರ್ ಗಳ ಕಮಿಷನ್ ನಲ್ಲಿ ಏರಿಕೆ ಮಾಡದಿರುವುದರಿಂದ ಡೀಲರ್ಸ್ ಗಳ ಒಕ್ಕೂಟವು ಭಾನುವಾರದಂದು ಕಾರ್ಯ ನಿರ್ವಹಿಸದಿರಲು ಹಾಗೂ ಉಳಿದ ದಿನ ಒಂದೇ ಪಾಳಿಯಲ್ಲಿ ಕೆಲಸ ಮಾಡಲು ನಿರ್ಧರಿಸಿವೆ.[ಮೇ 1ರಿಂದ ಆಯ್ದ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಆಯಾ ದಿನವೇ ನಿಗದಿ]

ಕಮಿಷನ್ ಏರಿಕೆ ಮಾಡಬೇಕು ಎಂದು ಒತ್ತಾಯಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ದೇಶದಾದ್ಯಂತ ಇರುವ ಕನಿಷ್ಠ 52,800 ಪೆಟ್ರೋಲ್ ಬಂಕ್ ಗಳು ಭಾನುವಾರದಂದು ಕಾರ್ಯ ನಿರ್ವಹಿಸುವುದಿಲ್ಲ. ಕರ್ನಾಟಕದಲ್ಲೂ ಭಾನುವಾರಗಳಂದು ಖಂಡಿತಾ ಪೆಟ್ರೋಲ್ ಬಂಕ್ ತೆರೆಯುವುದಿಲ್ಲ ಎಂದು ಡೀಲರ್ಸ್ ತಿಳಿಸಿದ್ದಾರೆ.[ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಭಾನುವಾರ ಪೆಟ್ರೋಲ್ ರಜಾ]
ಮೇ 10ರಂದು ಪೆಟ್ರೋಲ್-ಡೀಸೆಲ್ ಖರೀದಿಸುವುದಿಲ್ಲವಾದ್ದರಿಂದ ತೈಲ ಕಂಪೆನಿಗಳಿಗೆ ನಷ್ಟವಾಗಬಹುದು. "ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮ್ಮದಲ್ಲ. ಮೇ 10ರಂದು ತೈಲದ ಕೊರತೆ ಆಗಬಹುದು. ವರ್ಷಗಟ್ಟಲೆ ನಷ್ಟ ಅನುಭವಿಸಿರುವ ನಾವು, ಅದನ್ನು ತೋರಿಸಲು ಕಂಡುಕೊಂಡ ಮಾರ್ಗ ಇದು" ಎಂದು ಬೆಂಗಳೂರು ಪೆಟ್ರೋಲ್ ಡೀಲರ್ಸ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.












Click it and Unblock the Notifications